

ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ, ಎಸ್‌ಎಸ್‌ಬಿ ಇಂಜಿನಿಯರ್ ಮತ್ತು ಕಂಟ್ರ್ಯಾಕ್ಟರ್, ಬಿ.ಎಸ್.ಚನ್ನಬಸಪ್ಪ ಮತ್ತು ಸನ್ಸ್, ಜಯಭಾರತ ಫೌಂಡೇಷನ್, ಬಾಲ ಸಂಜೀವಿನಿ ಚಿಕಿತ್ಸಾಲಯ ಹಾಗೂ ಅನ್ನಪೂಣೇಶ್ವರಿ ಥಾಲಿ ರೆಸ್ಟೋರೆಂಟ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೃಷ್ಣವೇಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಅರ್ಥಪೂರ್ಣವಾಗಿ ಜರುಗಿತು.
ನಗರದ ಕೃಷ್ಣ ದೇವರಾಯ ವೃತ್ತ ಬಳಿಯ ಅನ್ನಪೂಣೇಶ್ವರಿ ಥಾಲಿ ರೆಸ್ಟೋರೆಂಟ್ ಅಯೋಧ್ಯೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧೆಗೆ ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂ ಸ್ವಾಧೀನಾಧಿಕಾರಿ ರಾಜಶ್ರೀ ಜೈನಾಪುರ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಮನ ಸೆಳೆದ ಕೃಷ್ಣ: ಅಯೋಧ್ಯ ಸಭಾಭವನ ನಂದಗೋಕುಲದಂತಾಗಿತ್ತು. ಎಲ್ಲಿ ನೋಡಿದರಲ್ಲಿ ಧೋತಿ, ಸೊಂಟಕ್ಕೆ ಪಟ್ಟಿ, ತಲೆಯಲ್ಲಿ ನವಿಲು ಗರಿ ಸಿಕ್ಕಿಸಿಕೊಂಡ ಕಿರೀಟ, ಕೊರಳಲ್ಲಿ ಮಣಿ ಹಾರ, ಕೈಯಲ್ಲೊಂದು ಕೊಳಲು, ಮೈತುಂಬ ಆಭರಣ ಸರಗಳ ಮಾಲೆ, ರೇಷ್ಮೆ ಪಂಚೆ, ತೋಳುಬಂಧಿ, ಕೈನಲ್ಲಿ ಬೆಣ್ಣೆ ಕುಡಿಕೆ ಹಿಡಿದು ಪುಟಾಣಿ ಮಕ್ಕಳು ಹೆಜ್ಜೆಹಾಕುವ ದೃಶ್ಯಗಳು ನೆರೆದವರನ್ನು ದ್ವಾಪರಯುಗಕ್ಕೆ ಕರೆದುಕೊಂಡು ಹೋಗುವಂತಿದ್ದವು.
ಮಳೆ ಲೆಕ್ಕಿಸದೆ ಬಂದ ಮಕ್ಕಳು:
ಜಿಟಿಜಿಟಿ ಮಳೆ ನಡುವೆಯೂ ರಾಣಿ ಚನ್ನಮ್ಮ ನಗರ, ವಡಗಾವಿ, ವಿಶ್ವೇಶ್ವರಯ್ಯ ನಗರ, ಸಮರ್ಥ ನಗರ, ವೀರಭದ್ರನಗರ, ಕುಮಾರಸ್ವಾಮಿ ಬಡಾವಣೆ, ಬೈಲಹೊಂಗಲ, ಚ.ಕಿತ್ತೂರು ಸೇರಿ ವಿವಿಧ ತಾಲೂಕುಗಳಿಂದ ಮಕ್ಕಳು ಆಗಮಿಸಿ ಎಲ್ಲರ ಗಮನ ಸೆಳೆದರು. ಮನೆ ಕಂದಮ್ಮಗಳ ತುಂಟಾಟಗಳನ್ನು ಕುಟುಂಬ ಸದಸ್ಯರು, ಗಣ್ಯರು ಕಣ್ತುಂಬಿಕೊಂಡು ಹರಸಿ ಹಾರೈಸಿದರು.
ಕೃಷ್ಣವೇಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯ 0 ರಿಂದ 5 ವರ್ಷದ ವಿಭಾಗದಲ್ಲಿ ಪ್ರಥಮ ಪೂರ್ಣಾ ಹೆಗಡೆ, ದ್ವಿತೀಯ ಶ್ರೀಶಾ ಭಸ್ಮೆ, ತೃತೀಯ ಸನ್ವಿತ ಚಿಕ್ಕಬಾಗೇವಾಡಿ ಬಹುಮಾನ, 6ರಿಂದ 12ವರ್ಷದ ವಿಭಾಗದಲ್ಲಿ ಪ್ರಥಮ ಆಧ್ಯಾ ಕಾಡಗೌಡರ, ದ್ವಿತೀಯ ಶ್ರೀಶಾಂತ ಕಾಡಣ್ಣವರ, ತೃತೀಯ ಶ್ರೀನಿಧಿ ಕಾಡಣ್ಣವರ ಬಹುಮಾನ ಪಡೆದುಕೊಂಡರು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರ, ಬಿ.ಎಸ್.ಚನ್ನಬಸಪ್ಪ ಮತ್ತು ಸನ್ಸ್‌ನಿಂದ ಕೊಪನ್ ನೀಡಲಾಯಿತು.
ವಿಜಯವಾಣಿ ದಿನಪತ್ರಿಕೆ ಸಮಾಜಮುಖಿ ಕೆಲಸಗಳನ್ನು ನಿರಂತವಾಗಿ ಮಾಡಿತ್ತ ಬರುತ್ತಿರುವುದು ಹೆಮ್ಮೆ ವಿಷಯವಾಗಿದೆ. ಕೃಷ್ಣವೇಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಆಯೋಜಿಸುವ ಮೂಲಕ ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವ ಕೆಲಸ ಮಾಡಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿರುವ ಮಕ್ಕಳಿಗೆ ನ್ಯಾಯ, ನೀತಿ, ಧಾರ್ಮಿಕತೆಯ ಮಹತ್ವನ್ನು ಹೆತ್ತವರು ತಿಳಿಸಿದರೆ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಮಹತ್ವ ಬರುತ್ತದೆ. ದ್ವಾಪರಯುಗದ ಶ್ರೀಕೃಷ್ಣನ ಎಲ್ಲ ಸ್ಥಳಗಳನ್ನು ನೋಡಿ ಬಂದಿದ್ದೇನೆ. ಈಗಲೂ ಕೃಷ್ಣ ಜೀವಂತವಾಗಿದ್ದಾನೆ. ನಮ್ಮನ್ನೆಲ್ಲ ಕಾಯುತ್ತಿದ್ದಾನೆ ಎಂಬುವುದನ್ನು ಕೃಷ್ಣವೇಷದ ಮಕ್ಕಳೇ ಸಾಕ್ಷಿ ಎಂದು ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂ ಸ್ವಾಧೀನಾಧಿಕಾರಿ ರಾಜಶ್ರೀ ಜೈನಾಪುರ ತಿಳಿಸಿದರು.
ಪ್ರತಿವರ್ಷ ವಿಜಯವಾಣಿ ದಿನಪತ್ರಿಕೆ ಆಯೋಜಿಸಿಕೊಂಡು ಬರುತ್ತಿರುವ ಕೃಷ್ಣವೇಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ನಮ್ಮೆಲ್ಲರಿಗೂ ಅಚ್ಚುಮೆಚ್ಚು. ಎಲ್ಲ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಒಳ್ಳೆಯ ವೇದಿಕೆ ಕಲ್ಪಿಸಿಕೊಟ್ಟಿದಕ್ಕೆ ಧನ್ಯವಾದಗಳು. ನಮಗೆ ಬಹುಮಾನ ಮುಖ್ಯವಲ್ಲ. ನಮ್ಮ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಮುಖ್ಯ. - ಸಹನಾ ಭಸ್ಮೆ, ರೋತಿ ಬಾಗೇವಾಡಿ, ಪಾಲಕರು ವಿಜಯವಾಣಿ ದಿನಪತ್ರಿಕೆ ಸುದ್ದಿ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬಂದಿದೆ. ಕೃಷ್ಣವೇಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆ ಮೂಲಕ ಮಕ್ಕಳಿಗೆ ಸೂಕ್ತ ವೇದಿಕೆ ಕಲ್ಪಿಸಿದೆ. ಅಲ್ಲದೆ, ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಿದೆ. ಇಂತಹ ಕಾರ್ಯಕ್ರಮಗಳಿಂದ ನಮ್ಮ ವ್ಯಾಪಾರ ವಹಿವಾಟು ಹೆಚ್ಚಾಗಿದೆ. ಎ.ಜಾಮಾದಾರ, ವ್ಯವಸ್ಥಾಪಕ ಬಿ.ಎಸ್.ಚನ್ನಬಸಪ್ಪ ಮತ್ತು ಸನ್ಸ್ ನಾವೆಲ್ಲ ಭಾರತೀಯ ಸಂಸ್ಕೃತಿ ಮರೆತು ಪಾಶ್ಚಿಮಾತ್ಯ ಸಂಸ್ಕೃತಿ ಹೆಚ್ಚು ಅಳವಡಿಸಿಕೊಳ್ಳುತ್ತಿರುವ ಕಾಲಘಟ್ಟದಲ್ಲಿ ವಿಜಯವಾಣಿ ದಿನಪತ್ರಿಕೆ ಇಂತಹ ಸ್ಪರ್ಧೆ ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿ, ಆಚಾರ ವಿಚಾರಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆ ಎನಿಸುತ್ತದೆ. - ಜ್ಯೋತಿ ಮುತ್ತೂರ, ತೀರ್ಪುಗಾರ ................. ಪತ್ರಿಕೋದ್ಯಮದಲ್ಲಿ ಹೊಸತನ ತಂದಿರುವ ವಿಆರ್‌ಎಲ್ ಸಂಸ್ಥೆಯು ಪತ್ರಿಕೆ ಓದುಗರ ಅಭಿರುಚಿ ಹೆಚ್ಚಿಸಿದೆ. ಸಮಾಜದಲ್ಲಿ ಮಾದರಿ ಸಂಸ್ಥೆಯಾಗಿ ಕೆಲಸ ಮಾಡುತ್ತಿದೆ. ವಿಜಯವಾಣಿ ಸಮಾಜಮುಖಿ ಚಟುವಟಿಕೆಗಳಿಗೆ ನಾವೆಲ್ಲ ಕೈ ಜೋಡಿಸೋಣ. ಎಂ.ಕೆ.ಹೆಗಡೆ, ಮಾಧ್ಯಮ ಸಲಹೆಗಾರರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ