ವಿಜಯವಾಣಿ ಮುದ್ರಣ ಕಣ್ತುಂಬಿಕೊಂಡ ವಿದ್ಯಾರ್ಥಿಗಳು

Press1
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ನಿತ್ಯ ಬೆಳಗಾದರೆ ಮನೆ ಮನೆಗೆ ಬರುವ ವಿಜಯವಾಣಿ ದಿನಪತ್ರಿಕೆ ಹೇಗೆ ಮುದ್ರಣಗೊಳ್ಳುತ್ತದೆ. ಅದರ ಹಿಂದಿನ ಕ್ರಿಯಾತ್ಮಕ ಕಾರ್ಯ ಚಟುವಟಿಕೆಗಳೇನು? ಹಾಗೂ ಸುದ್ದಿ ಸಂಗ್ರಹಣೆ ಪ್ರಕಿಯೆ ಹೇಗಿರುತ್ತದೆ?. ಇಂಥಹ ಹಲವು ಪ್ರಶ್ನೆಗಳಿಗೆ ವಿದ್ಯಾರ್ಥಿ ಸಮೂಹ ಪ್ರಾಯೋಗಿಕ ಅನುಭವ ಪಡೆದರು.

ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಉಪನ್ಯಾಸ ಬಳಗದೊಂದಿಗೆ ಶುಕ್ರವಾರ ಹೊನಗಾ ಕೈಗಾರಿಕಾ ಪ್ರದೇಶದಲ್ಲಿರುವ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮುದ್ರಣ ಘಟಕ್ಕೆ ಭೇಟಿ ನೀಡಿದರು.

ಸುದ್ದಿ ಪತ್ರಿಕಾಲಯ ತಲುಪುವ ಬಗೆ, ಸುದ್ದಿ ಪರಿಷ್ಕರಣೆ, ಪ್ರಾಮುಖ್ಯ, ಮಹತ್ವ, ಗಣಕೀಕೃತ ವ್ಯವಸ್ಥೆಯಡಿ ಸಂಪಾದಕೀಯ ವಿಭಾಗದಿಂದ ಮುದ್ರಣಕ್ಕೆ ಪುಟಗಳನ್ನು ಅಣಿಗೊಳಿಸುವ ವಿಧಾನ, ಪ್ಲೇಟ್ ಮಾಡುವುದರಿಂದ ಹಿಡಿದು ಮುದ್ರಣಕ್ಕೆ ಅಳವಡಿಸುವುದು, ಅಗತ್ಯಕ್ಕೆ ಅನುಗುಣವಾಗಿ ಬಣ್ಣ ಹಾಕುವ ಕ್ರಮ, ಪ್ರತಿ ಗಂಟೆಗೆ 35,000 ಪತ್ರಿಕೆ ಮುದ್ರಿಸುವ ಸಾಮರ್ಥ್ಯದ ಅತ್ಯಾಧುನಿಕ ಮುದ್ರಣಯಂತ್ರ ಹಾಗೂ ಸಿಬ್ಬಂದಿ ವರ್ಗದಿಂದ ವ್ಯವಸ್ಥಿತವಾದ ಪತ್ರಿಕೆ ಮುದ್ರಣ ಪ್ರಕ್ರಿಯೆ ಕಣ್ತುಂಬಿಕೊಂಡ ವಿದ್ಯಾರ್ಥಿಗಳು ಹಲವು ಪಶ್ನೆಗಳಿಗೆ ಉತ್ತರ ಕಂಡುಕೊಂಡರು.

ಗುಣಮಟ್ಟ ಹಾಗೂ ಮೌಲ್ಯವರ್ಧಿತ ಸೇವೆಯಿಂದ ಹೆಸರಾದ ವಿಜಯವಾಣಿ ದಿನಪತ್ರಿಕೆಯ ಸಂಪಾದಕೀಯ, ಸುದ್ದಿ , ಜಾಹೀರಾತು ಹಾಗೂ ಪ್ರಸಾರಾಂಗ ವಿಭಾಗಗಳ ಕಾರ್ಯನಿರ್ವಹಣೆ, ಹೊಣೆಗಾರಿಗೆ ಹಾಗೂ ಸಿಬ್ಬಂದಿ ಜವಾಬ್ದಾರಿ ಕುರಿತಾಗಿಯೂ ಮಾಹಿತಿ ಪಡೆದರು. ಮಾಧ್ಯಮ ಸಂಸ್ಥೆ ಹಾಗೂ ಅಚ್ಚುಕಟ್ಟಾದ ಪತ್ರಿಕೆ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿ, ಧಾರ್ಮಿಕ ಹಾಗೂ ಔದ್ಯೋಗಿಕ ಸೇರಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಮಹತ್ವದ ಆಧಾರದ ಮೇಲೆ ಆವೃತ್ತಿವಾರು ಸುದ್ದಿ ಪ್ರಕಟಗೊಳ್ಳುವ ವ್ಯವಸ್ಥೆ, ಜಾಗದ ಮಹತ್ವ ಕುರಿತಾಗಿಯೂ ಅರಿತುಕೊಂಡರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗಳಂತೆ ನಾಲ್ಕನೇ ಅಂಗವೆಂದು ಕರೆಸಿಕೊಳ್ಳುವ ಪತ್ರಿಕಾರಂಗದ ಮಹತ್ವ. ಜತೆಗೆ ಪತ್ರಿಕೋದ್ಯಮ ಅದ್ಭುತಗಳ ಸಾಗರ, ಅವಕಾಶ ಆಗರ ಎಂಬುದನ್ನು ಮನದಟ್ಟು ಮಾಡಿಕೊಂಡರು.

ಸಾಮಾಜಿಕ ಹೊಣೆಗಾರಿಕೆ ಜತೆಗೆ ಹಲವಾರು ಸಮಾಜಮುಖಿ ಕಾರ್ಯ ರೂಪಿಸಿಕೊಂಡು ಮುನ್ನಡೆಯುವ ಮೂಲಕ ಹತ್ತು ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯವಾಣಿ ದಿನಪತ್ರಿಕೆ ಅಲ್ಪಾವಧಿಯೇ ನಂ.1 ಪಟ್ಟಕೇರಿದ ಬಗ್ಗೆ ವಿದ್ಯಾರ್ಥಿ ಬಳಗ ಹರ್ಷ ವ್ಯಕ್ತಪಡಿಸಿತು.

ವಿಜಯವಾಣಿ ದಿನಪತ್ರಿಕೆ ಸ್ಥಾನಿಕ ಸಂಪಾದಕ ಮಹೇಶ ವಿಜಾಪುರ, ಪ್ರಸಾರಾಂಗ ವ್ಯವಸ್ಥಾಪಕ ರಘುವೀರ ಕುಲಕರ್ಣಿ, ಆನಂದ ತುಳಸಿಕಟ್ಟಿ, ವಿದ್ಯಾಶ್ರೀ ಹಾಲಕೇರಿಮಠ, ಅರುಣ ಹೊಸಮಠ ಇತರರಿದ್ದರು.

ಕೋಟ್ಸ್...........

ಎಲ್ಲ ಕ್ಷೇತ್ರಗಳ ಪ್ರಸ್ತುತ ವಿದ್ಯಮಾನ ಹಾಗೂ ಬೆಳವಣಿಗೆಗಳ ಸುದ್ದಿ ಹೊತ್ತು ವರ್ಣರಂಜಿತ ಪುಟಗಳಲ್ಲಿ ಮುದ್ರಿತಗೊಳ್ಳುವ ವಿಜಯವಾಣಿ ದಿನಪತ್ರಿಕೆ ಕನ್ನಡಿಗರ ಧ್ವನಿಯಾಗಿ ಹೊರಹೊಮ್ಮಿದೆ. ಕೇವಲ ಐದು ರೂ.ಗಳಲ್ಲಿ ಜನರ ಕೈಸೇರುವ ಪತ್ರಿಕೆ ಬಹಳಷ್ಟು ಉತ್ತಮವಾಗಿರುತ್ತದೆ. ಆದರೆ, ಅದರ ಹಿಂದಿರುವ ಸಿಬ್ಬಂದಿ ಪರಿಶ್ರಮ ಶ್ಲಾಘನೀಯ.

ಡಾ.ಸುಷ್ಮಾ ಆರ್. ಜೆಎಂಸಿ ವಿಭಾಗ ಆರ್‌ಸಿಯು, ಬೆಳಗಾವಿ

ದಿನಪತ್ರಿಕೆ ಓದುವುದಷ್ಟೇ ಗೊತ್ತಿತ್ತು. ಆದರೆ, ಅದರ ಹಿಂದಿನ ಸವಾಲುಗಳ ಬಗ್ಗೆ ತಿಳಿದಿರಲಿಲ್ಲ. ಹೀಗಾಗಿ, ನಾಡಿನ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಮುದ್ರಣ ಘಟಕಕ್ಕೆ ಭೇಟಿ ನೀಡಿ ಮುದ್ರಣ ಕಾರ್ಯ ವೀಕ್ಷಿಸಿದಾಗ ಹಲವು ಆಶ್ಚರ್ಯಕರ ಪ್ರಶ್ನೆಗಳಿಗೆ ಉತ್ತರ ದೊರಕಿದೆ. ಪತ್ರಿಕೋದ್ಯಮದ ಬಗ್ಗೆ ಹೊಸತನ ಅರಿಯಲು ಅವಕಾಶ ಒದಗಿಸಿದ ಪತ್ರಿಕಾ ಬಳಗಕ್ಕೆ ಧನ್ಯವಾದಗಳು.

ಪ್ರೀತಿ ಮಾಳವಧೆ ಪತ್ರಿಕೋದ್ಯಮ ವಿದ್ಯಾರ್ಥಿನಿ, ಆರ್‌ಸಿಯು

ಇಷ್ಟೊಂದು ವ್ಯವಸ್ಥಿತವಾಗಿ ಪತ್ರಿಕೆ ಮುದ್ರಣ ಕಾರ್ಯ ನಡೆಯುತ್ತದೆ ಎಂಬ ಬಗ್ಗೆ ಊಹಿಸಿರಲಿಲ್ಲ. ಆದರೆ, ಪ್ರತ್ಯಕ್ಷವಾಗಿ ವಿಜಯವಾಣಿ ಮುದ್ರಣ ಕಾರ್ಯ ವೀಕ್ಷಿಸಿರುವುದು ಸಂತಸ ತಂದಿದೆ. ಜತೆಗೆ ಪತ್ರಿಕಾ ಎಲ್ಲ ವಿಭಾಗಗಳ ಕಾರ್ಯನಿರ್ವಹಣೆ ಹಾಗೂ ಜವಾಬ್ದಾರಿ ಬಗ್ಗೆಯೂ ಮಾಹಿತಿ ದೊರೆತಿರುವುದು ಉತ್ಸಾಹ ಹೆಚ್ಚಿಸಿದೆ.

ಅಜಿತ್ ತಾಕತರಾವ್ ಪತ್ರಿಕೋದ್ಯಮ ವಿದ್ಯಾರ್ಥಿನಿ, ಆರ್‌ಸಿಯು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net