

‘ನಾನು ಅನಾಮಿಕನಾಗಿದ್ದಾಗ ಕೂಡ ಸಮ್ಮೇಳನಗಳಿಗೆ ಹೋಗುತ್ತಿದ್ದೆ. ನನ್ನ ನೆಚ್ಚಿನ ಲೇಖಕರು ಸಮ್ಮೇಳನ ಅಧ್ಯಕ್ಷರಾದಾಗ ಅವರ ಮಾತುಗಳನ್ನು ಕೇಳಲು ಹೋಗುತ್ತಿದ್ದೆ. ಅದೊಂದು ವಿಚಿತ್ರ ಆಕರ್ಷಣೆ. ಅಲ್ಲದೆ, ಕನ್ನಡದ ದೊಡ್ಡ ಸಮುದಾಯ ಇದೆಯಲ್ಲ, ಅದನ್ನು ಒಟ್ಟಾಗಿ ನೋಡುವ ಅದ್ಭುತ ಅವಕಾಶ ಅಲ್ಲಿ ಸಿಗುತ್ತದೆ. ದೊಡ್ಡ ಗುಂಪುಗಳಲ್ಲಿ ನಾನೊಬ್ಬ ಕೂತುಕೊಂಡು ನಿಬ್ಬೆರಗಿನಿಂದ ನೋಡುತ್ತಿದ್ದೆ. ಪುತಿನ ಏನು ಹೇಳುತ್ತಾರೆ, ಅಡಿಗರು, ನರಸಿಂಹಸ್ವಾಮಿ ಏನು ಹೇಳುತ್ತಾರೆ, ಇದನ್ನೆಲ್ಲ ಒಬ್ಬ ಕೇಳುಗನಾಗಿ ಸಂತೋಷಪಡುತ್ತಿದ್ದೆ. ಆದರೆ, ನಾನು ಸಮ್ಮೇಳನದ ಅಧ್ಯಕ್ಷನಾಗುತ್ತೇನೆಂದು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಬಯಸದೆ ಬಂದ ಭಾಗ್ಯವಿದು..’ -85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಮನದಾಳದ ಮಾತುಗಳಿವು. ವಿಜಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಳೆಯ ನೆನಪುಗಳು, ಸಮ್ಮೇಳನದ ನಂಟು, ಕನ್ನಡದ ನಾಳೆಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದರು.
# ಸಮ್ಮೇಳನಾಧ್ಯಕ್ಷರ ಆಯ್ಕೆ ಸಂಭ್ರಮವೂ ಹೌದು, ದೊಡ್ಡ ಜವಾಬ್ದಾರಿಯೂ ಹೌದು. ಇಂಥ ಹೊತ್ತಲ್ಲಿ ತಾವು ಅನುಭವಿಸುತ್ತಿರುವ ಭಾವನೆಗಳು?
ತುಂಬ ಚೆನ್ನಾಗಿ ಹೇಳಿದ್ರಿ. ಇಲ್ಲಿ ಸಂಭ್ರಮವೂ ಇದೆ, ಜವಾಬ್ದಾರಿಯೂ ಇದೆ. ‘ಮಲ್ಲಿಗೆ ಹಾರ ಕೊರಳಿಗೆ ಭಾರ’ ಎಂದು ಕೆ.ಎಸ್.ನರಸಿಂಹಸ್ವಾಮಿ ಹೇಳಿದ್ದರು. ಮಲ್ಲಿಗೆ ಹಾರದಿಂದ ಕಂಪು ಸಿಗುತ್ತದೆ, ಆದರೆ ಅದು (ಜವಾಬ್ದಾರಿ) ಭಾರವೂ ಹೌದು. ಈ ಗೌರವ ಮತ್ತು ಜವಾಬ್ದಾರಿಯ ಸಮ್ಮಿಶ್ರ ಭಾವ ಹೊಂದಿದ್ದೇನೆ. ನಾವಾಗಿ ಅಪೇಕ್ಷೆ ಪಡದೆ ಸಂತೋಷ ಕೊಡುವಂಥ ಸಂಗತಿ ಸಂಭವಿಸಿದರೆ ಹೆಚ್ಚು ಆನಂದ ಆಗುತ್ತದೆ. ಅಂಥ ಆನಂದವನ್ನೂ ಅನುಭವಿಸುತ್ತಿದ್ದೇನೆ.
# ಕಲಬುರಗಿ ಕಲ್ಯಾಣ ಕರ್ನಾಟಕದ ಕೇಂದ್ರ ಭಾಗ, ಶರಣರ ನಾಡು. ಈ ಭಾಗದೊಂದಿಗೆ ನಿಮ್ಮ ನಂಟು ಹೇಗಿದೆ?
ಕಲಬುರಗಿ ಮತ್ತು ಈ ಭಾಗದೊಟ್ಟಿಗೆ ಆಪ್ತವಾದ ನಂಟಿದೆ. ಹಿಂದೆ ಕಲಬುರಗಿಯ ಪ್ರತಿಭಾವಂತ ಕವಿ ಮಹಾಂತಪ್ಪ ನಂದುರ್ ಅವರ ಕವಿತೆಗಳನ್ನು ಇಷ್ಟಪಟ್ಟು, ಅವರ ಮೊದಲ ಕವನ ಸಂಕಲನವನ್ನು ನಾನೇ ಪ್ರಕಟಿಸಿದ್ದೆ ಮತ್ತು ಅದು ಕಲಬುರಗಿಯಲ್ಲೇ ಲೋಕಾರ್ಪಣೆಗೊಂಡಿತ್ತು (ಅದೂ ಉರಿ ಬಿಸಿಲಿನಲ್ಲಿ!). ಹೊಸ ಲೇಖಕರ ಬರಹಗಳು ಇಷ್ಟವಾದರೆ ನಾನೇ ಮುಂದಾಗಿ ಪುಸ್ತಕ ಪ್ರಕಟಿಸುತ್ತೇನೆ. ಮಹಾಂತಪ್ಪ ಬಗೆಗಿನ ಕಾವ್ಯಪ್ರೀತಿಯೇ ಆ ಪ್ರಕಟಣೆಗೆ ಕಾರಣವಾಗಿತ್ತು. ಆ ಬಳಿಕ ಸಂಬಂಧಿಕರೊಂದಿಗೂ ಇಲ್ಲಿನ ದೇವಸ್ಥಾನ, ದರ್ಗಾಗಳಿಗೆ ಭೇಟಿ ನೀಡಿದ್ದೇನೆ. ಬಯಲುಸೀಮೆ ಅಂದರೆ ಬಯಲನ್ನು ಕೂಡ ನಾನು ಇಷ್ಟಪಡುತ್ತೇನೆ.
# ಸಮ್ಮೇಳನಗಳ ಉದ್ದೇಶ ಈಡೇರುತ್ತಿಲ್ಲ ಎಂಬ ಹಳಹಳಿಕೆಗಳು ಇವೆಯಲ್ಲ?
ನಾವು ಸಕಾರಾತ್ಮಕವಾಗಿ, ಗುಣಾತ್ಮಕವಾಗಿ ಯೋಚಿಸಬೇಕು. ಲಕ್ಷಾಂತರ ಜನ ಕನ್ನಡಕ್ಕಾಗಿ ಸೇರುತ್ತಾರೆ ಎಂದಾಗ ಸ್ವಾಭಾವಿಕವಾಗಿಯೇ ಕೆಲವರಲ್ಲಾದರೂ ಕನ್ನಡದ ಉದ್ದಿಪನ ಆಗುತ್ತದೆ, ಪ್ರೀತಿ ಬೆಳೆಯುತ್ತದೆ. ಅಭಿಮಾನ ಬರುತ್ತದೆ. ಅಭಿಮಾನ ಕೂಡ ಸಕಾರಣವಾಗಿರಬೇಕು. ‘ನಾನು ಕನ್ನಡವನ್ನು ಪ್ರೀತಿಸುತ್ತೇನೆ’ ಎಂದು ಬಾಯಿಮಾತಿನಲ್ಲೇ ಹೇಳಿದರೆ ಸಾಲದು. ಹಾಗೇ ಹೇಳುವವನು ಪಂಪನನ್ನು ಓದಿಕೊಂಡಿರಬೇಕು, ಸಂಸ್ಕೃತಿಯನ್ನು ಅರಿತುಕೊಂಡಿರಬೇಕು. ಅಭಿಮಾನ ಎಂಬುದು ಆರೋಪಣವಾಗಬಾರದು. ಅದು ಹೃದಯದಲ್ಲಿ ಬೆಳೆಯುವಂಥದ್ದು. ವಚನಕಾರರನ್ನು ಓದಬೇಕು, ದಾಸರನ್ನು ಕೇಳಬೇಕು, ಪಂಪನನ್ನು ಓದಬೇಕು, ಕುಮಾರವ್ಯಾಸನನ್ನು ಕೇಳಬೇಕು. ಹೀಗೆ ಕೇಳುವ, ಓದುವ ಮೂಲಕ ನಮ್ಮ ಅದ್ಭುತ ಸಾಹಿತ್ಯಿಕ ಪರಂಪರೆಯನ್ನು ನಮ್ಮದಾಗಿ ಮಾಡಿಕೊಂಡರೆ ನಾವು ಕನ್ನಡದ ಅಭಿಮಾನಿ ಪುರುಷರಾಗುತ್ತೇವೆ.
# ಅಬ್ಬರ, ಆವೇಶ, ಆರ್ಭಟವಿಲ್ಲದೆ ಮೃದುಮಾತಿಗೆ ಹೆಚ್ಚು ಶಕ್ತಿ ಇದೆ ಎಂದು ನಂಬಿದವರು ನೀವು. ಅಷ್ಟೇ ಅಲ್ಲ, ನಿಮ್ಮ ಜೀವನಧೋರಣೆ, ಬರವಣಿಗೆಯಲ್ಲೂ ಅದನ್ನು ಪ್ರತಿಪಾದಿಸಿದ್ದೀರಿ. ಈ ಗುಣವಿಶೇಷದ ಬಗ್ಗೆ ಏನು ಹೇಳುತ್ತೀರಿ?
ನಮಗೆ ಈ ಕುರಿತು ಮಾದರಿಯೇ ಇದೆಯಲ್ಲ. ಸಾತ್ವಿಕವಾಗಿದ್ದುಕೊಂಡು ಒಳ್ಳೆಯ ಸಾಹಿತ್ಯವನ್ನು ಬರೆಯಬಹುದು ಅಂತ ಮಾಸ್ತಿ ತೋರಿಸಿಕೊಟ್ಟರು. ಕಣವಿಯವರು ಅದೇ ಆದರ್ಶ ಮುಂದುವರಿಸಿದ್ದಾರೆ. ಹತ್ತಿರದಿಂದ ನಾವು ಅವರನ್ನು ಕಂಡವರು. ಅವರ ಜತೆ ಬದುಕಿದ್ದೇವೆ. ಒಳ್ಳೆಯ ನುಡಿ, ನಡೆ ಇದೇ ರಕ್ಷಣೆಯಲ್ಲವೇ? ಇದು ನನ್ನ ಸಿದ್ಧಾಂತ. ಹಾಗಂತ, ಎಲ್ಲರೂ ಇದನ್ನೇ ಅನುಕರಿಸಬೇಕೆಂದು ಬಯಸುವುದಿಲ್ಲ. ಮೃದುಮಾತಿನಿಂದ ಹೃದಯ ಮುಟ್ಟಬಹುದು ಅಂದುಕೊಂಡಿದ್ದೇನೆ. ಅದನ್ನೇ ಅನುಸರಿಸುತ್ತಿದ್ದೇನೆ ಅಷ್ಟೇ.
# ಸರಳ ವ್ಯಕ್ತಿತ್ವದ ತಾವು ಅಧ್ಯಕ್ಷರಾಗಿರುವುದರಿಂದ ನಿರೀಕ್ಷೆಗಳು ಕೂಡ ಹೆಚ್ಚಿವೆಯಲ್ಲ, ಈ ಬಗ್ಗೆ ಏನಂತೀರಿ?
ನಿರೀಕ್ಷೆಗಳ ಬಗ್ಗೆ ಅಷ್ಟಾಗಿ ಗಮನ ನೀಡಿಲ್ಲ. ನಾನು ಏನು ಹೇಳಬೇಕು ಎಂಬುದನ್ನು ಯೋಚಿಸಿದೆ. ಕನ್ನಡದ ಮಟ್ಟಿಗೆ ಯಾವುದು ಪ್ರಮುಖ ಸಮಸ್ಯೆಯಾಗಿ ನನಗೆ ಗೋಚರಿಸುತ್ತಿದೆಯೋ, ಆ ಬಗ್ಗೆ ಏನು ಹೇಳಬೇಕು ಅಂತ ತೀರ್ವನಿಸಿದ್ದೇನೆ. ಕನ್ನಡ ಶಿಕ್ಷಣ ಮಾಧ್ಯಮ ಆಗುವುದು ಹೇಗೆ ಅತ್ಯಗತ್ಯ ಅನ್ನುವುದರ ಬಗ್ಗೆ ಅಧ್ಯಕ್ಷೀಯ ಭಾಷಣದಲ್ಲಿ ಒತ್ತು ನೀಡಲಿದ್ದೇನೆ.
# ಇಂದಿನ ಹೊಸಪೀಳಿಗೆ ಕನ್ನಡದ ಬಗ್ಗೆ ಕೀಳರಿಮೆ ಹೊಂದುತ್ತಿದೆ. ಯಾರೂ ಮಕ್ಕಳಿಗೆ ಮಾತೃಭಾಷೆ/ರಾಜ್ಯಭಾಷೆ ಕಲಿಸಲು ಮುಂದಾಗುತ್ತಿಲ್ಲ, ಈ ಮುಖ್ಯ ಸಮಸ್ಯೆ ಬಗೆಹರಿಯದೆ ನಾಳೆಗಳು ಆಶಾವಾದದಿಂದ ಕೂಡಿರಲು ಸಾಧ್ಯವೇ?
ಆ ಬಗೆಯ ಸಮಸ್ಯೆ ಇರುವುದು ನಿಜ. ಆದರೆ, ಸಾರಾಸಗಟಾಗಿ ಎಲ್ಲರೂ ಹಾಗೇ ಎಂಬ ತೀರ್ವನಕ್ಕೆ ಬರಲಾಗದು. ಹೊಸ ಪೀಳಿಗೆಯ ಪಾಲಕರು ಸಹ ತಮ್ಮ ಮಗು ಕನ್ನಡ ಭಾವಗೀತೆ ಕಲಿಯಬೇಕು, ಕನ್ನಡ ಚೆನ್ನಾಗಿ ಮಾತನಾಡಬೇಕು ಎಂದು ಹಂಬಲಿಸುವವರು ಸಾಕಷ್ಟು ಇದ್ದಾರೆ. ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿದವರೂ ಇದ್ದಾರೆ. ಕನ್ನಡದ ಬಗ್ಗೆ ತುಂಬ ಮುಖ್ಯವಾಗಿ ಹಾಗೂ ಯಾರೂ ಅಡ್ಡಿಪಡಿಸಲಾಗದ ಕಾರ್ಯವೊಂದನ್ನು ಎಲ್ಲರೂ ಮಾಡಬಹುದಾಗಿದೆ. ಅದುವೇ, ಮೊದಲು ನಮ್ಮ ಮಕ್ಕಳೊಂದಿಗೆ ಕನ್ನಡ ಮಾತನಾಡಬೇಕು. ಮನೆಯ ಅಂಗಳದ ಎಲ್ಲ ವ್ಯವಹಾರಗಳು, ಆಪ್ತ ಮಾತುಕತೆಗಳು ಕನ್ನಡದಲ್ಲೇ ನಡೆಯಬೇಕು. ನಮ್ಮ ಮಕ್ಕಳನ್ನು ಕನ್ನಡದಲ್ಲೇ ಮುದ್ದಿಸಬೇಕು. ವ್ಯವಹಾರದ ಭಾಷೆ ಕನ್ನಡ ಆಗುವಂತೆಯೇ ಮನೆಯ ಭಾಷೆ ಮತ್ತು ಹೃದಯದ ಭಾಷೆ ಕನ್ನಡವಾಗಬೇಕು. ಇದು ನಿತ್ಯಾನುಷ್ಠಾನವಾಗಬೇಕು. ನಿತ್ಯೋತ್ಸವವಾಗಬೇಕು. ನಿತ್ಯೋತ್ಸವವೆಂದರೆ ಬರೀ ಕಾರ್ಯಕ್ರಮಗಳನ್ನು ಮಾಡುವುದಲ್ಲ. ನಮ್ಮ ಮನೆಯಲ್ಲಿ ಕನ್ನಡವನ್ನು ಚೆನ್ನಾಗಿ ಬಳಸುವುದು, ಬೆಳೆಸುವುದು ನಿಜವಾದ ನಿತ್ಯೋತ್ಸವ. ಇದನ್ನು ಸರ್ಕಾರ ಮಾಡಬೇಕು. ಮತ್ತೊಬ್ಬರು ಮಾಡಬೇಕು ಅಂತೇನಿಲ್ಲ. ಕನ್ನಡ ಮಾತನಾಡಲು ಈ ದಿನ, ಈ ಕ್ಷಣವೇ ಮುಹೂರ್ತವಾಗಲಿ. ಪ್ರತಿನಿತ್ಯ, ಪ್ರತಿಕ್ಷಣ ಕನ್ನಡದ ಜಾಗೃತಿಗಾಗಿ ಹೋರಾಟ ಮಾಡಬೇಕು. ಇದನ್ನು ಪ್ರಜ್ಞಾಪೂರ್ವಕವಾಗಿ ಮಾಡಿದರೆ, ಮುಂದೆ ಅದುವೇ ಅಪ್ರಜ್ಞಾಪೂರ್ವಕವಾಗಿ ಮುಂದುವರಿಯುತ್ತದೆ. ಇದಕ್ಕಾಗಿ ಸಾತ್ವಿಕ ಸಂಕಲ್ಪ ಮಾಡಬೇಕು. ಸ್ನೇಹಿತರೊಂದಿಗೆ, ಶಿಕ್ಷಕರೊಂದಿಗೆ, ಸಾಹಿತಿಗಳೊಂದಿಗೆ ಕನ್ನಡದಲ್ಲೇ ಮಾತನಾಡುತ್ತೇನೆ, ವ್ಯವಹರಿಸುತ್ತೇನೆ ಎಂದು. ನಿತ್ಯ ವ್ಯವಹಾರ ಭಾಷೆಯಾಗಿ ಬಳಸಿದರೆ ಅದು ಎಲ್ಲ ಕಡೆ ಹಬ್ಬುತ್ತದೆ. ಅಭಿಮಾನ ಕೂಡ ಸಾಂಕ್ರಮಿಕವಾಗುತ್ತದೆ!
# ಇದೇ ಊರಲ್ಲಿ ಇಂದು (ಬುಧವಾರ) ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ, ಹೇಗನಿಸುತ್ತಿದೆ?
ನನಗೆ ಮೆರವಣಿಗೆ ಅಂದರೆ ಸ್ವಲ್ಪ ಅಲರ್ಜಿ, ನಾಚಿಕೆ. ಆದರೆ ಕಸಾಪ ಅಧ್ಯಕ್ಷರು, ಇತರರು ಇದೊಂದು ಸಂಪ್ರದಾಯ, ಮಾಡಲೇಬೇಕು ಎಂದು ಹೇಳಿರುವುದರಿಂದ ಅವರ ಪ್ರೀತಿಯ ಒತ್ತಾಸೆಗೆ ಮಣಿದು ಒಪ್ಪಿದ್ದೇನೆ.
ಸಂದರ್ಶನ: ರವೀಂದ್ರ ಎಸ್. ದೇಶಮುಖ್