

ಕೆ.ಆರ್.ಪುರ: ರಾಮಮೂರ್ತಿನಗರ ರಿಂಗ್ರಸ್ತೆಯಿಂದ ಟಿ.ಸಿ.ಪಾಳ್ಯ ರಸ್ತೆಯಲ್ಲಿನ ಮುನೇಶ್ವರನಗರದಲ್ಲಿ ಒಂದೂವರೆ ವರ್ಷದ ಹಿಂದೆ ಒಳಚರಂಡಿ ಕಾಮಗಾರಿ, ಮೋರಿ, ರಸ್ತೆ, ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ್ದರೂ ಕಾಮಗಾರಿಗಳು ಮಾತ್ರ ಪೂರ್ಣಗೊಂಡಿರಲಿಲ್ಲ. ಇದೀಗ ಅಧಿಕಾರಿಗಳು ಕಾಮಗಾರಿಯನ್ನು ಮರು ಆರಂಭಿಸಿದ್ದಾರೆ.
‘ಗುಂಡಿಮಯ ಮುನೇಶ್ವರನಗರ’ ಎನ್ನುವ ಶೀರ್ಷಿಕೆ ಯಡಿ ಸೆ. 24ರಂದು ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಗೊಂಡ ಅಧಿಕಾರಿಗಳು ಕಾಮಗಾರಿ ಚುರುಕುಗೊಳಿಸಿದ್ದಾರೆ.
ರಸ್ತೆ ಮಧ್ಯದಲ್ಲಿಯೇ ಒಂದು ದೊಡ್ಡ ಹಳ್ಳ ತೆಗೆದು ಹಾಗೇ ಬಿಡಲಾಗಿತ್ತು, ವಾಹನ ಸವಾರರು ಪ್ರಾಣವನ್ನು ಅಂಗೈನಲ್ಲಿಟ್ಟುಕೊಂಡು ಸಂಚರಿಸುತ್ತಿದ್ದರು. ಸೆ.24ರಂದು ಸಹ ಮಹಿಳೆ ಮತ್ತು ಮಗು ಗುಂಡಿಗೆ ಬಿದ್ದು ಅದೃಷ್ಟಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಅಧಿಕಾರಿಗಳು ನಾಲ್ಕು ದಿನಗಳಿಂದ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಾವೇರಿ ಪೈಪ್ಲೈನ್ ಸರಿಪಡಿಸಲಾಗಿದೆ. ಗೇಲ್ ಗ್ಯಾಸ್, ಒಳಚರಂಡಿ, ಬೆಸ್ಕಾಂ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು ಇನ್ನೆರೆಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ, ನಂತರ ಗುಂಡಿಗಳನ್ನು ಸರಿಪಡಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಶೀಘ್ರವೇ ರಸ್ತೆ ಕಾಮಗಾರಿ
ಬಿಡ್ಲೂ್ಯಎಸ್ಎಸ್ಬಿಯು ಕಾವೇರಿ ಪೈಪ್ ಲೈನ್ ಪೂರ್ಣಗೊಳಿಸಿದ್ದು, ಗೇಲ್ ಗ್ಯಾಸ್, ಸ್ಯಾನಿಟರಿ ಪೈಪ್ ಲೈನ್, ಬೆಸ್ಕಾಂ ಪೈಪ್ ಲೈನ್ ಕಾಮಗಾರಿ ಪ್ರಾರಂಭದಲ್ಲಿದ್ದು 2-3 ದಿನಗಳಲ್ಲಿ ಪೂರ್ಣಗೊಳಿಸಿ ನಂತರ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಕಾವೇರಿ ಪೈಪ್ಲೈನ್ ಸರಿಪಡಿಸಲೆಂದು ತಿಂಗಳ ಹಿಂದೆ ದೊಡ್ಡ ಹಳ್ಳ ತೆಗೆಯಲಾಗಿತ್ತು, ಕಾಮಗಾರಿ ಪ್ರಾರಂಭ ಮಾಡದೇ ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹೇಳಿಕೊಂಡು ಕೆಲಸ ಮಾಡದೆ ಹಾಗೆಯೆ ಬಿಟ್ಟಿದ್ದರು, ವಿಜಯವಾಣಿ ಪತ್ರಿಕೆಯಲ್ಲಿ ಸುದ್ದಿ ಬಂದ ನಂತರ ಅಧಿಕಾರಿಗಳು ಕಾಮಗಾರಿ ಪ್ರಾರಂಭಮಾಡಿದ್ದಾರೆ. | ರಂಜಿತ್ ಸ್ಥಳೀಯ ಅಂಗಡಿ ಮಾಲೀಕ