`ವಿಜಯವಾಣಿ' ವರದಿ ಫಲಶ್ರುತಿ: ರಾಷ್ಟ್ರೀಯತೆಯ ಆಚರಣೆಯ ಸುತ್ತ' ಲೇಖನ ಹಿಂತೆಗೆತ

kudphoto
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿಶ್ವವಿದ್ಯಾಲಯದ 2024- 25ನೇ ಸಾಲಿನ ಬಿ.ಎ ಪ್ರಥಮ ಸೆಮಿಸ್ಟರ್‌ನ ಕನ್ನಡ ಪಠ್ಯಪುಸ್ತಕ `ಬೆಳಗು' 1ರಲ್ಲಿ ರಾಮಲಿಂಗಪ್ಪ ಟಿ. ಬೇಗೂರ ಅವರು ಬರೆದ 4ನೇ ಅಧ್ಯಾಯದ `ರಾಷ್ಟ್ರೀಯತೆಯ ಆಚರಣೆಯ ಸುತ್ತ' ಲೇಖನವನ್ನು ಕೈ ಬಿಡಲಾಗಿದೆ.

ಭಾರತಾಂಬೆಯ ಕಲ್ಪನೆ, ರಾಷ್ಟ್ರೀಯತೆಯ ಕಲ್ಪಿತ ಚಹರೆಗಳು, ಕನ್ನಡಮ್ಮನ ಕಲ್ಪನೆ, ರಾಷ್ಟ್ರೀಯತೆ- ಅತಿ ರಾಷ್ಟ್ರೀಯತೆ ಎಂಬಿತ್ಯಾದಿ ಅಂಶಗಳನ್ನು ಒಳಗೊಂಡ ಅವಹೇಳನಕಾರಿ ಬರಹದ ಕುರಿತು `ವಿಜಯವಾಣಿ' ಜ. 21ರಂದು ವರದಿ ಪ್ರಕಟಿಸಿತ್ತು. ಬಿಎ ಪಠ್ಯದಲ್ಲಿ ಭಾರತಾಂಬೆಗೆ ಅವಮಾನ ಮಾಡಿರುವುದನ್ನು ಬೆಳಕಿಗೆ ತಂದ ಬೆನ್ನಲ್ಲೇ ವಿಶ್ವವಿದ್ಯಾಲಯದ ನಡೆಯ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಬಿಜೆಪಿ, ಎಬಿವಿಪಿ ಹಾಗೂ ಹಿಂದುಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.

ಎಚ್ಚೆತ್ತುಕೊಂಡ ಕುಲಪತಿ ಡಾ. ಎಸ್. ಜಯಶ್ರೀ ಅವರು ಜ. 22ರಂದು ಬೋರ್ಡ್ ಆಫ್ ಸ್ಟಡೀಸ್ (ಬಿಒಎಸ್) ಹಾಗೂ ಡೀನ್ ಕಮೀಟಿ ಸಭೆ ನಡೆಸಿದ್ದರು. ಈ ಕುರಿತು ನಾಲ್ವರ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿದ್ದರು.

ಕುಲಸಚಿವ ಡಾ. ಎ. ಚನ್ನಪ್ಪ ಪ್ರಕಟಣೆ ನೀಡಿದ್ದು, `ರಾಷ್ಟ್ರೀಯತೆಯ ಆಚರಣೆಯ ಸುತ್ತ' ಲೇಖನವನ್ನು ಕೈ ಬಿಡಲಾಗಿದೆ ಎಂದು ತಿಳಿಸಿದ್ದಾರೆ. ಲೇಖನ ಕೆಲ ಆಕ್ಷೇಪಾರ್ಹ ಅಂಶಗಳನ್ನು ಒಳಗೊಂಡಿರುವ ಕುರಿತು ಮಾಧ್ಯಮದಲ್ಲಿ ಪ್ರಕಟ ವರದಿಗೆ ಗಣ್ಯರಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯ ಆಡಳಿತ ವಿವಿಧ ಪ್ರಾಽಕಾರಗಳ ಸಭೆ ಜರುಗಿಸಿ ನಿಯಮಾನುಸಾರ ಲೇಖನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು ಕ್ರಮ ಜರುಗಿಸಿದೆ. ಘಟಕ 1ರ 4ನೇ ಅಧ್ಯಾಯದ ಲೇಖನವನ್ನು ಕೈಬಿಟ್ಟು `ಬೆಳಗು- 1' ಪಠ್ಯಪುಸ್ತಕವನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಪರೀಕ್ಷೆಗೆ ಸಂಬAಽಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕುಲಸಚಿವ ಡಾ. ಚನ್ನಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net