

ಸರ್ಕಾರದ ರಾಜಸ್ವಕ್ಕೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಆದಾಯ ತುಂಬಿಸುವ ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಬಕಾರಿ ರಕ್ಷಕರಿಗೆ 10 ವರ್ಷಗಳಿಂದ ಸಮವಸ್ತ್ರ, ಶೂ, ಲಾಠಿ ಕೊಟ್ಟಿಲ್ಲ. ಬಡ್ತಿಯೂ ಸಿಕ್ಕಿಲ್ಲ. ಜತೆಗೆ ವೈದ್ಯಕೀಯ ವೆಚ್ಚ ಮಂಜೂರಾಗದಿರುವುದೂ ಸೇರಿ ನಾನಾ ಸಮಸ್ಯೆಗಳಿಂದ ಒದ್ದಾಡುತ್ತಿದ್ದಾರೆ. ಈ ಬಗ್ಗೆ ಅಬಕಾರಿ ರಕ್ಷಕರು ‘ವಿಜಯವಾಣಿ ಸಹಾಯವಾಣಿ’ಗೆ ಕರೆ ಮಾಡಿ ಅಳಲು ತೋಡಿಕೊಂಡಿದ್ದು, ವರದಿಗಾರ ಬೇಲೂರು ಹರೀಶ್ ಸಿದ್ಧಪಡಿಸಿರುವ ವರದಿ ಇಲ್ಲಿದೆ.
ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ 2475 ಅಬಕಾರಿ ರಕ್ಷಕರು ಒಂದಿಲ್ಲೊಂದು ಸಮಸ್ಯೆಯಿಂದ ಬಳಲುತ್ತಿದ್ದು, ಸಮಸ್ಯೆ ಬಗೆಹರಿಸುವಂತೆ ಸರ್ಕಾರ ಮತ್ತು ಇಲಾಖೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಕಡ್ಡಾಯವಾಗಿ ಎರಡು ವರ್ಷಕ್ಕೊಮ್ಮೆ ಎರಡು ಜತೆ ಸಮವಸ್ತ್ರ, ಶೂ ಮತ್ತ ಲಾಠಿ ಕೊಡಬೇಕೆಂಬ ನಿಯಮವಿದೆ. ನಾಮ್ ಕೇ ವಾಸ್ತೆಗಾಗಿ ಮೇಲಧಿಕಾರಿಗಳು ಕೆಲ ಜಿಲ್ಲೆಗಳಿಗೆ ಮಾತ್ರವೇ ನೀಡಿ, ಉಳಿದ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಕ್ಷಕರಿಗೆ ಕೊಟ್ಟಿಲ್ಲ. 25-30 ವರ್ಷ ಒಂದೇ ಹುದ್ದೆಯಲ್ಲಿ ಕೆಲಸ ನಿರ್ವಹಿಸಿ, ನಿವೃತ್ತಿಯಾಗುತ್ತಿದ್ದರೂ ಬಡ್ತಿ ನೀಡಿಲ್ಲ. 2005ರಿಂದ ಈವರೆಗೆ ಅಬಕಾರಿ ರಕ್ಷಕರ ರಾಜ್ಯ ಮಟ್ಟದ ಜೇಷ್ಠತಾ ಪಟ್ಟಿಯನ್ನೇ ತಯಾರಿಸಿಲ್ಲ. ಅಬಕಾರಿ ರಕ್ಷಕರ ಹೆಸರು ಬದಲು ಅಬಕಾರಿ ಪೇದೆ ಅಂತ ಬದಲಾಯಿಸಬೇಕು. ಸರ್ಕಾರದ ಮಟ್ಟದಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳು ಕುರಿತು ಬದಲಾವಣೆಯಾಗಿದೆ. ಈ ಬಗ್ಗೆ ಆದೇಶವಾದರೂ ನೇಮಕಾತಿ ನಿಯಮಗಳಲ್ಲಿ ಬದಲಾವಣೆ ಆಗಿಲ್ಲ ಎಂದು ನೊಂದ ರಕ್ಷಕರೊಬ್ಬರು ವಿಜಯವಾಣಿ ಜತೆ ಅಳಲು ತೋಡಿಕೊಂಡಿದ್ದಾರೆ.
ಅರ್ಹತೆ ಇದ್ದರೂ ಅವಕಾಶವಿಲ್ಲ: ಅಬಕಾರಿ ರಕ್ಷಕರಾಗಿ ನೇಮಕಾತಿ ಹೊಂದಿದವರಲ್ಲಿ ಅನೇಕ ಸಿಬ್ಬಂದಿ ಪದವಿ ಪೂರೈಸಿದ್ದು, ಬಡ್ತಿಗೆ ಅರ್ಹರಾಗಿದ್ದಾರೆ. ಅಂಥವರಿಗೂ ಬಡ್ತಿ ನೀಡುತ್ತಿಲ್ಲ. 2005ರ ವೃಂದ ಮತ್ತು ನೇಮಕಾತಿ ನಿಯಮಾವಳಿ ಪ್ರಕಾರ, ಶೇ.25 ಕೋಟಾ ಇದ್ದರೂ 728 ಅಬಕಾರಿ ಸಬ್ಇನ್ಸ್ಪೆಕ್ಟರ್ಗಳನ್ನು ನೇರ ನೇಮಕಾತಿ ಮಾಡಿಕೊಂಡಿದ್ದು, ಈವರೆಗೆ ಅವರಿಗೆ ಬಡ್ತಿಯೇ ನೀಡಿಲ್ಲ ಎಂದು ರಕ್ಷಕರು ಬೇಸರ ವ್ಯಕ್ತಪಡಿಸಿದರು.
ಮಂಜೂರಾಗದ ವೈದ್ಯಕೀಯ ವೆಚ್ಚ: ಹಗಲಿರುಳು ಕೆಲಸ ಮಾಡುತ್ತಿದ್ದು, ಕೆಲವರು ಗಂಭೀರ ಕಾಯಿಲೆಗಳಿಗೆ ತುತ್ತಾಗಿ ಚಿಕಿತ್ಸೆಗಾಗಿ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಇದರ ವೈದ್ಯಕೀಯ ವೆಚ್ಚದ ಬಿಲ್ಗಳನ್ನು ಇಲಾಖೆಗೆ ಸಲ್ಲಿಸಿದ್ದರೂ ಮಂಜೂರು ಮಾಡುತ್ತಿಲ್ಲ ಎಂದು ಮೊತ್ತೊಬ್ಬ ರಕ್ಷಕ ಬೇಸರ ವ್ಯಕ್ತಪಡಿಸಿದರು.
ರಕ್ಷಕರ ಕೆಲಸವೇನು?: ಅಬಕಾರಿ ಕೈಪಿಡಿ ಪ್ರಕಾರ ಗಸ್ತು, ದಾಳಿ ಸಂದರ್ಭ ಮೇಲಾಧಿಕಾರಿಗಳಿಗೆ ಸಹಕರಿಸುವುದು, ಕಚೇರಿಯಲ್ಲಿ ಕಾರ್ಯ ನಿರ್ವಹಿಸುವುದು, ಮತ್ತೊಂದು ಕಚೇರಿಗೆ ಟಪಾಲ್ಗಳನ್ನು ತಲುಪಿಸುವುದು, ಚುನಾವಣೆ ಸಂದರ್ಭ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ಹಾಗೂ ಕಚೇರಿಗಳಲ್ಲಿ ಕಾವಲು ಕಾಯುವುದು ಸೇರಿ ಮತ್ತಿತರರ ಕೆಲಸಗಳಿರುತ್ತವೆ.
ಔರಾದ್ಕರ್ ವರದಿ ಅನ್ವಯವಾಗಲಿ: ಪೊಲೀಸ್ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಜಾರಿಗೆ ಬಂದಿರುವ ಔರಾದ್ಕರ್ ವರದಿ ನಮಗೂ ಅನ್ವಯವಾಗಬೇಕು. ನಿತ್ಯ 12 ಗಂಟೆ ಹಾಗೂ ಚುನಾವಣೆ ವೇಳೆ 24 ಗಂಟೆ ಕರ್ತವ್ಯ ನಿರ್ವಹಿಸುತ್ತೇವೆ. ಅಲ್ಲದೆ, ಪೊಲೀಸ್ ಇಲಾಖೆಯಂತೆ ನಮ್ಮ ಇಲಾಖೆಗೆ ಸಮವಸ್ತ್ರ ಇದೆ. ಹೀಗಾಗಿ, ನಮಗೂ ಔರಾದ್ಕರ್ ವರದಿಯಂತೆ ವೇತನ ನೀಡಬೇಕು. 6ನೇ ವೇತನ ಆಯೋಗದ 2ನೇ ವರದಿಯಲ್ಲಿ ಅಬಕಾರಿ ರಕ್ಷಕರ ವೇತನ ಶ್ರೇಣಿಗಳು ಬದಲಾವಣೆ ಆಗಿದ್ದರೂ ಹಣಕಾಸು ಇಲಾಖೆ ಪರಿಷ್ಕೃತ ವೇತನ ಶ್ರೇಣಿಗಳನ್ನು ಬದಲಾವಣೆ ಮಾಡಿಲ್ಲ. ಈ ಬಗ್ಗೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂಬುದು ರಕ್ಷಕರ ಒತ್ತಾಯ.
| ಬಿ.ಶೋಭಾ ಹೆಚ್ಚುವರಿ ಆಯುಕ್ತೆ (ಆಡಳಿತ), ಅಬಕಾರಿ ಇಲಾಖೆ
ಅಬಕಾರಿ ರಕ್ಷಕರಿಗೆ ಕಳೆದ ಹತ್ತು ವರ್ಷಗಳಿಂದ ಸಮವಸ್ತ್ರ, ಶೂ ಮತ್ತು ಲಾಠಿ ನೀಡದಿರುವ ಬಗ್ಗೆ ಮಾಹಿತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಳ್ಳುತ್ತೇನೆ.