ಕದ್ರಿ ಸರ್ಕೀಟ್ ಹೌಸ್ ಬಳಿ ಗುಡ್ಡ ಕುಸಿತ ಅಪಾಯದ ಬಗ್ಗೆ ಮೊದಲೇ ಎಚ್ಚರಿಸಿದ್ದ ವಿಜಯವಾಣಿ

Mng-jul17-circut house
Published on

ಮಂಗಳೂರು: ನಗರದ ಪ್ರಮುಖ ರಸ್ತೆ ಕದ್ರಿ ಸರ್ಕೀಟ್ ಹೌಸ್ ಬಳಿಯಿಂದ ಬಿಜೈಗೆ ಹೋಗುವ ಬಟ್ಟಗುಡ್ಡದಲ್ಲಿ ರಸ್ತೆಗೆ ಬುಧವಾರ ರಾತ್ರಿಯ ಮಳೆಗೆ ಮೇಲ್ಭಾಗದ ಗುಡ್ಡ ಕುಸಿದು ಬಿದ್ದು, ಸಂಚಾರ ಸ್ಥಗಿತಗೊಂಡಿತು.

ಗುಡ್ಡ ಕುಸಿದು ಬೀಳುವ ಸಂದರ್ಭ ಅಲ್ಲಿ ವಾಹನ ಸಂಚಾರ ಇಲ್ಲದ ಕಾರಣ ಪ್ರಾಣಾಪಾಯ ತಪ್ಪಿದೆ. ಬೃಹತ್ ಬಂಡೆಯೊಂದು ರಸ್ತೆಗೆ ಉರುಳಿ ಬಿದ್ದಿದ್ದು, ಅದನ್ನು ತೆರವು ಮಾಡುವ ಕೆಲಸ ಗುರುವಾರ ಬೆಳಗ್ಗೆಯಿಂದಲೇ ನಡೆದಿದೆ. ಜೆಸಿಬಿ, ಟಿಪ್ಪರ್‌ಗಳ ಮೂಲಕ ಮಣ್ಣು ತೆಗೆಯುವ ಕಾರ್ಯ ಸಂಜೆಯ ತನಕ ಮುಂದುವರಿದಿದೆ. ಕೆಪಿಟಿಯಿಂದ ಬಿಜೈಗೆ ತೆರಳುವ ವಾಹನಗಳನ್ನು ಏಕಮುಖ ರಸ್ತೆಯಲ್ಲಿ ಸಂಚರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.

ನಿರಂತರವಾಗಿ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು ಬಿದ್ದಿದ್ದು, ತಕ್ಷಣ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದರು. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಚ್ಚರಿಸಿದ್ದ ವಿಜಯವಾಣಿ

ಸರ್ಕೀಟ್ ಹೌಸ್ ಹಿಂಭಾಗದ ಗುಡ್ಡ ಕಳೆದ ನಾಲ್ಕೈದು ವರ್ಷಗಳಿಂದ ಪ್ರತೀ ಮಳೆಗಾಲದಲ್ಲಿ ಕುಸಿದು ಬೀಳುತ್ತಿದ್ದು, ಅಪಾಯದ ಸ್ಥಿತಿಯಲ್ಲಿತ್ತು. ಪ್ರತೀ ವರ್ಷ ಮಳೆಗಾಲದಲ್ಲಿ ವಿಜಯವಾಣಿ ವರದಿ ಪ್ರಕಟಿಸಿ ಎಚ್ಚರಿಸಿತ್ತು. ಈ ಬಾರಿಯೂ ಜೂ.4ರಂದು ವಿಜಯವಾಣಿ ಅಪಾಯದ ಬಗ್ಗೆ ವರದಿ ಪ್ರಕಟಿಸಿ ಎಚ್ಚರಿಸಿತ್ತು.

ಗುಡ್ಡದ ಮಣ್ಣು ಕುಸಿದರೆ ಒಂದು ಭಾಗದ ರಸ್ತೆ ಮುಚ್ಚಿ ಹೋಗುವ ಸಾಧ್ಯತೆ ಇದೆ. ಈ ಸಂದರ್ಭ ವಾಹನಗಳು ಅದರಡಿ ಸಿಲುಕಿದರೆ ಅಪಾಯ ಎದುರಾಗಲಿದೆ. ಬೇಸಗೆ ಕಾಲದಲ್ಲಿ ಕಾಮಗಾರಿ ನಡೆಸಬೇಕಾಗಿದೆ. ಮಳೆಗಾಲದಲ್ಲಿ ಮಣ್ಣು ಶಿಥಿಲವಾಗುತ್ತಿದೆ. ಸಣ್ಣ ಮರವೂ ಇರುವುದರಿಂದ ಯಾವುದೇ ಸಮಯದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದೆ ಎಂದು ವರದಿಯಲ್ಲಿ ತಿಳಿಸಿಸಲಾಗಿತ್ತು.

ಬೇಸಿಗೆಯಲ್ಲಿ ಸಾಯಿಲ್ ನೇಯ್ಲಿಂಗ್ ತಂತ್ರಜ್ಞಾನ ಅಳವಡಿಕೆಯೊಂದೇ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿತ್ತು. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಈ ಕಾಮಗಾರಿ ನಡೆಸಲು ಅವಕಾಶವಿತ್ತು. ಜನಪ್ರತಿನಿಧಿಗಳ, ಅಧಿಕಾರಿ ವರ್ಗದವರ ನಿರುತ್ಸಾಹ ದುರಂತಗಳಿಗೆ ಕಾರಣವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net