

ಮೈಸೂರು: ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ಶೈಕ್ಷಣಿಕ ಮಾರ್ಗದರ್ಶನ ನೀಡುವ ಸಲುವಾಗಿ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ವತಿಯಿಂದ ಮೇ 10 ಮತ್ತು 11 ರಂದು ನಗರದ ವಿನೋಬಾ ರಸ್ತೆಯ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ಎಜುಕೇಷನ್ ಎಕ್ಸ್‌ಪೋ-2025’ ಆಯೋಜಿಸಲಾಗಿದೆ.
ವಿಆರ್‌ಎಲ್ ಮೀಡಿಯಾ ಪ್ರೈ.ಲಿ.ನಿಂದ ವಿದ್ಯಾನಗರಿ ಮೈಸೂರಿನಲ್ಲಿ ನಡೆಯುತ್ತಿರುವ ನಾಲ್ಕನೇ ಶೈಕ್ಷಣಿಕ ಮೇಳ ಇದಾಗಿದೆ. ಒಂದೇ ಸೂರಿನಡಿ ಹಲವು ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳಲಿದ್ದು ಪಾಲಕರು-ವಿದ್ಯಾರ್ಥಿಗಳು ತಮ್ಮ ಭವಿಷ್ಯದ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಉತ್ತಮ ಅವಕಾಶ ಇದಾಗಿದೆ.
ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಮಳಿಗೆಗಳು ಇರಲಿದ್ದು, ವಿದ್ಯಾರ್ಥಿಗಳು ಯಾವ ಶಾಲೆಗೆ ಸೇರಬೇಕು? ಪದವಿ ಪೂರ್ವ, ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯಾವ ಕೋರ್ಸ್ ಮತ್ತು ಸೌಲಭ್ಯಗಳಿವೆ? ಪ್ರವೇಶ ಪ್ರಕ್ರಿಯೆ ಹೇಗೆ? ಪಿಯುಸಿ ಬಳಿಕ ಯಾವ ಕೋರ್ಸ್ ಆಯ್ಕೆ ಮಾಡಿಕೊಂಡರೆ ಭವಿಷ್ಯ ಉಜ್ವಲವಾಗುತ್ತದೆ? ಯಾವ ಕೋರ್ಸ್ ಓದಿದರೆ ಉದ್ಯೋಗ ದೊರೆಯುತ್ತದೆ? ಯಾವ ಕೋರ್ಸ್‌ಗೆ ಹೆಚ್ಚು ಬೇಡಿಕೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಎಕ್ಸ್‌ಪೋನಲ್ಲಿ ಉತ್ತರ ಸಿಗಲಿದೆ.
ಈ ಶೈಕ್ಷಣಿಕ ಮೇಳಕ್ಕೆ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಮುಖ್ಯ ಪ್ರಾಯೋಜಕತ್ವ ವಹಿಸಿದ್ದು, ಬೆಂಗಳೂರಿನ ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯ ಸಹ ಪ್ರಾಯೋಜಕತ್ವ ನೀಡಿದೆ.
ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಮಳಿಗೆಗಳು, ಶಿಕ್ಷಣ ಕುರಿತ ಮಾಹಿತಿ ಕಣಜವೇ ಮೇಳದಲ್ಲಿ ಇರಲಿದೆ. ಇದು ಮುಂದಿನ ಕಲಿಕೆಗೆ ಕೈಗನ್ನಡಿ. ವಿದ್ಯಾರ್ಥಿಗಳು ಯಾವ ಶಾಲೆಗೆ ಸೇರಬೇಕು? ಪದವಿಪೂರ್ವ, ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಯಾವ ಕೋರ್ಸ್ ಮತ್ತು ಸೌಲಭ್ಯಗಳಿವೆ? ಪ್ರವೇಶ ಪ್ರಕ್ರಿಯೆ ಹೇಗೆ? ಎಂಬುದರ ಮಾಹಿತಿ ಸಿಗಲಿದೆ.
ಮೈಸೂರು ವಿದ್ಯಾಕಾಶಿ. ಇಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ನೆಲೆಯೂರಿವೆ. ದೇಶ-ವಿದೇಶಗಳಿಂದ ಉನ್ನತ ಶಿಕ್ಷಣ ಕಲಿಕೆಗಾಗಿ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಸುತ್ತಲಿನ ಜಿಲ್ಲೆಗಳ ಮಕ್ಕಳಿಗೂ ಈ ನಗರವೇ ಪಾಠಶಾಲೆ. ಶಿಕ್ಷಣಕ್ಕೆ ರಾಜ್ಯದಲ್ಲೇ ಮೈಸೂರು ಹೆಸರುವಾಸಿ. ಅದಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳಿವೆ. ಮೈಸೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳು ಸೇರಿದಂತೆ ರಾಜ್ಯದ ಖ್ಯಾತ ಶಿಕ್ಷಣ ಸಂಸ್ಥೆಗಳು ಕೂಡ ಮೇಳದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಲಿವೆ. ಎಕ್ಸ್‌ಪೋನಲ್ಲಿ ಒಟ್ಟು 31 ಮಳಿಗೆಗಳು ಇರಲಿದ್ದು, ಮುಖ್ಯವಾಗಿ ವಿವಿಧ ತಾಂತ್ರಿಕ ವಿಶ್ವವಿದ್ಯಾಲಯಗಳು, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳು, ವೈದ್ಯಕೀಯ ವಿವಿಗಳು, ಹೋಟೆಲ್ ಮ್ಯಾನೇಜ್‌ಮೆಂಟ್, ಬಾಹ್ಯಾಕಾಶ ತಂತ್ರಜ್ಞಾನ, ಕಂಪೂಟರ್ ಸೈನ್ಸ್ ಅನಿಮೇಷನ್, ಇಂಜಿನಿಯರಿಂಗ್, ಬ್ಯಾಂಕಿಂಗ್ ಎಜುಕೇಷನ್, ಸ್ಟೋರ್ಟ್ಸ್ ಎಜುಕೇಷನ್, ಸಮೂಹ ಸಂವಹನ, ಐಟಿಐ ಕಾಲೇಜು, ಪಾಲಿಟೆಕ್ನಿಕ್, ಫ್ಯಾಷನ್ ಡಿಸೈನ್, ಆರ್ಕಿಟೆಕ್ಚರ್, ಬಿಸಿನೆಸ್ ಮ್ಯಾನೇಜ್‌ಮೆಂಟ್, ಬ್ಯಾಂಕ್‌ಗಳು, ಚಾರ್ಟರ್ಡ್ ಅಕೌಂಟೆನ್ಸಿ, ಐಎಎಸ್/ಕೆಎಎಸ್/ ಬ್ಯಾಂಕಿಂಗ್ ಸೇರಿದಂತೆ ಇತರ ಸ್ಪರ್ಧಾತ್ಮಕ ಕೋಚಿಂಗ್ ಸೆಂಟರ್‌ಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳಲಿವೆ. ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ದೊರೆಯಲಿದೆ. ವಿದೇಶ ಶಿಕ್ಷಣದ ಬಗ್ಗೆಯೂ ಮಾಹಿತಿ ದೊರೆಯಲಿದೆ. ಎರಡೂ ದಿನ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆವರೆಗೆ ನಡೆಯಲಿರುವ ಎಕ್ಸ್‌ಪೋದಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಎರಡೂ ದಿನವೂ ಬೆಳಗ್ಗೆ 9 ರಿಂದ 10 ಗಂಟೆ ಅವಧಿಯಲ್ಲಿ ನೋಂದಣಿಯಾಗುವ ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ಸ್ಥಳದಲ್ಲಿಯೇ ಲಕ್ಕಿ ಡಿಪ್ ಮೂಲಕ ಆಕರ್ಷಕ ಉಡುಗೊರೆ ನೀಡಲಾಗುತ್ತದೆ.
ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳು ‘ಎಜುಕೇಷನ್ ಎಕ್ಸ್‌ಪೋ-2025’ದಲ್ಲಿ ಭಾಗಿಯಾಗಿ ಫಲಿತಾಂಶಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ನೀಡಿದರೆ ಮೈಸೂರು ಟಾರ್ಪಾಲಿನ್ಸ್‌ನಿಂದ ಡಿಸ್ಕೌಂಟ್ ಕೂಪನ್ ನೀಡಲಾಗುತ್ತದೆ.