

ಕಾರವಾರ:ಕನ್ನಡದ ನಂ-1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಸುದ್ದಿ ವಾಹಿನಿಯಿಂಸ್ವಾತಂತ್ರೊತ್ಸವದ ಅಂಗವಾಗಿ ಸೋಮವಾರ ಆಯೋಜಿಸಿದ್ದ ಪದಬಂಧ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉತ್ತರ ಕನ್ನಡ ಜಿಲ್ಲಾ ಘಟಕ, ಸದಾಶಿವಗಡ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಮಧ್ಯಾಹ್ನ 11.20 ರಿಂದ 11.50 ರವರೆಗೆ ಸ್ಪರ್ಧೆ ನಡೆಯಿತು. ಕಾರವಾರ ತಾಲೂಕು ಹಾಗೂ ಜಿಲ್ಲೆಯ ವಿವಿಧೆಡೆಗಳಿಂದ ಕಾಲೇಜ್‌ಗಳ ಆಯ್ದ 32 ಸ್ಪರ್ಧಿಗಳು ಆಗಮಿಸಿದ್ದರು.
ಅದರಲ್ಲಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಸರಿ ಉತ್ತರ ನೀಡಿದ ಐವರಿಗೆ ನಗದು ಬಹುಮಾನ, ಬ್ಯಾಗ್ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಯಿತು.
ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಮೆಮೋರಿಯಲ್ ಟ್ರಸ್ಟ್ನ ನರೇಂದ್ರ ದೇಸಾಯಿ ಅವರು ಬಹುಮಾನಗಳನ್ನು ಪ್ರಾಯೋಜಿಸಿದ್ದರು
ಇದನ್ನೂ ಓದಿ: ನನಸಾಗದ ಸ್ವಾತಂತ್ರ್ಯ ಸ್ಮಾರಕ ಭವನ ಕನಸು
ಬಹುಮಾನ ವಿತರಿಸಿ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಸಂಜೀವ ಕುಮಾರ ನಾಯ್ಕ, ಪತ್ರಿಕೆಯ ಓದು ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲಿದೆ ಎಂದರು. `ವಿಜಯವಾಣಿ' ಹಾಗೂ `ದಿಗ್ವಿಜಯ ನ್ಯೂಸ್' ವಿನೂತನ ಸ್ಪರ್ಧೆಯೊಂದನ್ನು ಆಯೋಜಿಸಿರುವುದು ಶ್ಲಾಘನೀಯ. ಪದಬಂಧ ಎಂಬುದು ಒಂದು ಮೈಂಡ್ ಗೇಮ್. ಇದರಿಂದ ಬುದ್ಧಿ ಚುರುಕಾಗಲಿದೆ. ವಿಶ್ಲೇಷಣಾ ಮನೋಭಾವ ಬೆಳೆಯಲಿದೆ ಎಂದರು.
ಮಾತೋಶ್ರೀ ಸರೋಜಾ ಬಾಳಾ ದೇಸಾಯಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ನರೇಂದ್ರ ದೇಸಾಯಿ ಮಾತನಾಡಿ, ನಾವು ಜಗತ್ತಿಗೆ ಬಂದ ಮೇಲೆ ನಮ್ಮ ಹೆತ್ತ ಮಾತೆ ಹಾಗೂ ಭಾರತ ಮಾತೆಯ ಋಣ ತೀರಿಸಬೇಕು. ಸೈನಿಕರು ಗಡಿಯಲ್ಲಿ ದೇಶ ಕಾಯುತ್ತಾರೆ. ನಾವು ದೇಶದ ಒಳಗೆ ಸ್ವಸ್ತ ಸಮಾಜ ನಿರ್ಮಾಣಕ್ಕೆ ನಮ್ಮ ಕೊಡುಗೆ ನೀಡಬೇಕು.ನಾವು ಒಳ್ಳೆಯವರಾದರೆ, ಸಮಾಜವೂ ಒಳ್ಳೆಯದಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸದಾಶಿವಗಡ ಲಯನ್ಸ್ ಕ್ಲಬ್ ಅಧ್ಯಕ್ಷ, ಕನ್ನಡ ಶಿಕ್ಷಕ ಗಣೇಶ ಬಿಷ್ಠಣ್ಣನವರ್ ನಿರ್ಣಾಯಕರಾಗಿದ್ದರು. ಪದಬಂಧ ಮನಸ್ಸಿಗೆ ಕೆಲಸ ಕೊಡುತ್ತದೆ. ಇಂದು ಆಧುನಿಕ ಯುಗದಲ್ಲಿ ಮೊಬೈಲ್ ಗೀಳಿನಲ್ಲಿ ಪದಬಂಧ ತುಂಬುವ ಹವ್ಯಾಸವೇ ಕಡಿಮೆಯಾಗುತ್ತಿದೆ. `ವಿಜಯವಾಣಿ," ದಿಗ್ವಿಜಯ ನ್ಯೂಸ್ ಇಂಥ ಅಪರೂಪದ ಸ್ಪರ್ಧೆ ಆಯೋಜಿಸಿದೆ ಎಂದರು.
ವಿಜಯವಾಣಿ ಜಿಲ್ಲಾ ವರದಿಗಾರ ಸುಭಾಸ ಧೂಪದಹೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿಗ್ವಿಜಯ ನ್ಯೂಸ್ ಜಿಲ್ಲಾ ವರದಿಗಾರ ಶೇಷಗಿರಿ ಮುಂಡಳ್ಳಿ ವಂದಿಸಿದರು. ವಿಜಯವಾಣಿ ಪ್ರಸರಣ ವಿಭಾಗದ ಅಶೋಕ ಗೊಟಗೋಡಿ, ದಿಗ್ವಿಜಯ ಕ್ಯಾಮರಾಮನ್ ಕಿಶನ್ ಗುರವ್ ಸಹಕರಿಸಿದರು.
ವಿಜೇತರು
ಕಾರವಾರ ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಚೈತ್ರಾ ಮಂಜುನಾಥ ನಾಯ್ಕ, ರೇಷ್ಮಾ ರಘುರಾಯ ಹರಿಕಂತ್ರ, ವಸಂತ ನಾಯ್ಕ, ಶಿರಸಿ ಎಂಇಎಸ್ ಕಾಮರ್ಸ್ ಕಾಲೇಜ್‌ನ ಝೇಬಾ ಬಶೀರಹಮದ್ ಖಾಜಿ, ಶಿವಾಜಿ ವಿದ್ಯಾಲಯದ ವಿನೀತಾ ಕಾಮತ್ ಬಹುಮಾನ ಪಡೆದುಕೊಂಡರು.
ಇದೊಂದು ವಿಭಿನ್ನ ಸ್ಪರ್ಧೆಯಾಗಿದೆ. ಮೊದಲ ಬಾರಿ ಪದಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದೆ. ಈ ಸ್ಪರ್ಧೆಯನ್ನು ಆಯೋಜಿಸಿ, ನಮಗೆ ಭಾಗವಹಿಸಲು ಅವಕಾಶ ನೀಡಿದ ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್‌ಗೆ ಧನ್ಯವಾದಗಳು.ಚೈತ್ರಾ ಮಂಜುನಾಥ ನಾಯ್ಕವಿಜೇತ ವಿದ್ಯಾರ್ಥಿನಿ