ನದಿ ತೆರವಿನ ಧ್ವನಿಗೆ ಜನರು ಸಾಥ್

BKT-28-11-A
Published on

ಅಶೋಕ ಶೆಟ್ಟರ
ಬಾಗಲಕೋಟೆ: ಒತ್ತುವರಿಯ ಕೂಪಕ್ಕೆ ಸಿಕ್ಕು ವಿಲವಿಲ ಅನ್ನುತ್ತಿರುವ ಮಲಪ್ರಭಾ ನದಿಯ ಅಂಟಿರುವ ಶಾಪ ವಿಮೋಚನೆ ಬಗ್ಗೆ ಸರ್ಕಾರದ ಕಡೆಯಿಂದ ಧ್ವನಿ, ಪ್ರತಿಧ್ವನಿ ಆಗುತ್ತಿರುವುದು ನದಿ ತೀರದ ಜನರಲ್ಲಿ ಹೊಸ ಆಶಾಭಾವನೆ ಮೂಡಿಸುತ್ತಿದೆ.

ಇದಂತೂ ಒಳ್ಳೆಯ ಬೆಳವಣಿಗೆ. ಒತ್ತುವರಿ ತೆರವಿಗೆ ಈಗ ಕಾಲ ಕೂಡಿ ಬಂದಂತಿದೆ. ಇದನ್ನು ಮಿಸ್ ಮಾಡಲೇಬಾರದು. ಎಷ್ಟೇ ಒತ್ತಡಗಳು ಎದುರಾದರೂ ಅದನ್ನು ಮೆಟ್ಟಿ ನದಿ ಒತ್ತುವರಿ ತೆರವುಗೊಳಿಸಬೇಕು. ಇದು ಎಷ್ಟು ಬೇಗವೋ ಅಷ್ಟು ಬೇಗ ಅನುಷ್ಠಾನಕ್ಕೆ ಬರಬೇಕು.

ಹೀಗಂತ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಅನೇಕ ಯುವಕರು ಒಂದೇ ಉಸಿರಿಗೆ ತಮ್ಮ ಖಚಿತ ಮತ್ತು ಸ್ಪಷ್ಟ ನಿರ್ಧಾರವನ್ನು ಹೊರಹಾಕುತ್ತಾರೆ.

ಹೌದು, ಕಮತಗಿ ಪಟ್ಟಣವೂ ಸಹ ಮಲಪ್ರಭಾ ನದಿ ಪ್ರವಾಹಕ್ಕೆ ಸಿಕ್ಕು ನಲುಗಿ ಹೋಗುತ್ತಿರುವ ಗ್ರಾಮ, ಪಟ್ಟಣಗಳಲ್ಲಿ ಇದು ಒಂದು. ನದಿಗೆ ಹೊಂದಿಕೊಂಡಿರುವ ಈ ಪಟ್ಟಣ 2019ರ ಪ್ರವಾಹದಲ್ಲಿ ಮನೆಗಳೆಲ್ಲಿವೆ ಎಂದು ಹುಡುಕಾಡುವಷ್ಟರ ಮಟ್ಟಿಗೆ ನೀರು ಆವರಿಸಿತ್ತು. ನದಿ ದಡದ ಜಮೀನುಗಳು ಕೊಚ್ಚಿ ಹೋಗಿದ್ದವು. ಬಿದ್ದ ಮನೆಗಳು ಇನ್ನು ಸಹ ಅಸ್ಥಿಪಂಜರ ದಂತೆ ನೇತಾಡುತ್ತಿವೆ. ಅನೇಕರ ಮನೆಗಳಿಗೆ ನೀರು ನುಗ್ಗಿದ್ದರಿಂದ ನೇಕಾರಿಕೆ ಮಗ್ಗಗಳು ಹಾಳಾಗಿ ಬದುಕಿಗೆ ಬರೆ ಎಳೆದಿತ್ತು. ನೂರಾರು ಕುಟುಂಬಗಳು ಗಂಜಿ ಕೇಂದ್ರದಲ್ಲಿ ಇರುವಂತಾಗಿತ್ತು. ಹಸುಗೂಸು, ಬಾಣಂತಿ, ವೃದ್ಧರು, ಮಹಿಳೆಯರು ಗಂಜಿ ಕೇಂದ್ರದಲ್ಲಿ ಕಣ್ಣೀರು ಹಾಕುತ್ತಲೇ ಇದ್ದರು. ಸಾಕಪ್ಪ ಸಾಕು ಜೀವನ ಎನ್ನುವಷ್ಟರ ಮಟ್ಟಿಗೆ ಅವರೆಲ್ಲ ನೊಂದುಕೊಂಡಿದ್ದರು.

ಈ ವರ್ಷ ನೀರು ಪಟ್ಟಣವನ್ನು ಜಲಾವೃತಗೊಳಿಸಿಲ್ಲವಾದರೂ ಬೆಳೆಗಳು ಆಪೋಶನ್ ಆಗಿವೆ. ಒಂದು ವಾರ ಕಾಲ ನದಿ ಭೋರ್ಗರೆಯುತ್ತಿದ್ದರೆ ಇವರಿಗೆಲ್ಲ ನಿದ್ದೆ ಬಂಗಾರವಾಗಿತ್ತು. ಯಾವಾಗ ಏನಾಗುತ್ತೋ ಅಳಕು, ಆತಂಕ, ಜೀವಭಯ.
ಹೀಗಾಗಿಯೇ ಇಲ್ಲಿನ ಜನರಿಗೂ ಈಗ ಪ್ರವಾಹದಿಂದ ತಪ್ಪಿಸಿಕೊಳ್ಳಲು ಒಂದು ಶಾಶ್ವತ ಪರಿಹಾರ ಬೇಕಿದೆ. ಅದು ನದಿ ಒತ್ತುವರಿ ತೆರವು ಎನ್ನುವುದು ಎಲ್ಲರಂತೆ ಇಲ್ಲಿನ ಜನರಿಗೂ ಅರಿವಿಗೆ ಬಂದಿರುವ ಸತ್ಯ. ಕೂಡಲೇ ಆ ನಿಟ್ಟಿನಲ್ಲಿ ಪ್ರಾಥಮಿಕ ಕಾರ್ಯಗಳು ಆರಂಭವಾಗಲಿ ಎನ್ನುವುದು ಜನರ ಒತ್ತಾಯವಾಗಿದೆ.

ತೆರವು ಸುಲಭವಲ್ಲ, ಅಸಾಧ್ಯ ಅಲ್ಲವೇ ಅಲ್ಲ
ಮಲಪ್ರಭಾ ನದಿ ಒತ್ತುವರಿ ಒಂದು, ಎರಡು ವರ್ಷಗಳಲ್ಲಿ ಆಗಿದ್ದಲ್ಲ. ಅರ್ಧ ದಶಕದಿಂದ ಈ ಅನಧಿಕೃತ ಕೆಲಸ ಸಾಗಿಕೊಂಡು ಬಂದಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಒತ್ತುವರಿಯಂತೂ ಆಗಿದೆ. ಇದೀಗ ನದಿಗೆ ಸಂಕಷ್ಟ ಎದುರಾಗಿದೆ. ಇದರಿಂದ ಜನರು ಅಪಾರ ನಷ್ಟ ಅನುಭವಿಸಬೇಕಾಗಿದೆ. ನದಿ ಉಳಿಯಬೇಕು, ಜನಜೀವನ ನರಕಯಾತನೆಯಿಂದ ಹೊರಬರಬೇಕು. ಈ ಎರಡು ಸದುದ್ದೇಶಕ್ಕಾಗಿ ನದಿ ಒತ್ತುವರಿ ತೆರವು ಅಗತ್ಯವಾಗಿದೆ.

ಒತ್ತುವರಿ ತೆರವು ಆಗಬೇಕೆಂದು ಈ ಹಿಂದೆಯೇ ಅನೇಕರು ಧ್ವನಿ ಎತ್ತಿದ್ದರು. ಡಾ.ಪೂರ್ಣಿಮಾ ಗೌರೋಜಿ ಕಾನೂನು ಹೋರಾಟವನ್ನು ಮಾಡಿಕೊಂಡು ಬಂದಿದ್ದಾರೆ. ಹೀಗಿದ್ದಾಗ್ಯೂ ನದಿ ಒತ್ತುವರಿ ಸಂಪೂರ್ಣ ತೆರವು ಆಗಿಲ್ಲ. ಇಲ್ಲಿ ಅನೇಕ ಒತ್ತಡಗಳು ಬರುತ್ತವೆ. ರೈತರ ಹೆಸರಿನಲ್ಲಿ ಕೆಲ ಮರಳು ದಂಧೆಕೋರರು ತೆರವು ಆಗದಂತೆ ನೋಡಿಕೊಂಡು ಬಂದಿದ್ದಾರೆ ಎನ್ನುವ ಮಾತುಗಳು ಇವೆ.

ಸರ್ಕಾರ ಮನಸ್ಸು ಮಾಡಿದರೆ ಯಾವುದೂ ದೊಡ್ಡದಲ್ಲ. ಒತ್ತಡಗಳಿಗೆ ಮಣಿಯದೇ ರೈತರು ಮತ್ತು ನದಿ ಪಾತ್ರಗಳ ಜನರ ವಿಶ್ವಾಸ ಗಳಿಸಿಕೊಳ್ಳಬೇಕು. ಒತ್ತುವರಿಯಿಂದ ಆಗುತ್ತಿರುವ ಅನಾಹುತಗಳಿಂದ ಲಕ್ಷಾಂತರ ಎಕರೆ ಜಮೀನು, ಸಾವಿರಾರು ಕುಟುಂಬಗಳು ಬೀದಿಗೆ ಬರುತ್ತಿರುವ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಬೇಕು. ಯಾರೋ ಒಬ್ಬಿಬ್ಬರು ಅಡ್ಡಿಪಡಿಸಿದರು, ತಂಟೆ ತೆಗೆದರು ಅಂತ ಸಬೂಬು ಹೇಳಿ ಅಧಿಕಾರಿಗಳು ವಿಮುಖರಾಗಬಾರದು. ಆಗಾಗದಂತೆ ಅಧಿಕಾರಿಗಳ ಮೇಲೆ ಸರ್ಕಾರ ಚಾಟಿ ಬೀಸುವುದು ಅಗತ್ಯವಾಗಿದೆ ಎನ್ನುತ್ತಾರೆ ಮಾಜಿ ಶಾಸಕರೊಬ್ಬರು.

ಮಲಪ್ರಭಾ ನದಿ ಒತ್ತುವರಿಯಿಂದ ಅನಾಹುತಗಳು ಮೇಲಿಂದ ಮೇಲೆ ಆಗುತ್ತಿವೆ. ಒತ್ತುವರಿ ಬಗ್ಗೆ ನಿರ್ದಿಷ್ಟ ಕ್ರಮ ತೆಗೆದುಕೊಳ್ಳಲು ಮೊದಲು ಸರ್ವೇ ಮಾಡಬೇಕು. ಬಳಿಕ ಒತ್ತುವರಿ ಯಾರೇ ಮಾಡಿದ್ದರೂ ಖಾಲಿ ಮಾಡಿಸಬೇಕು. ನದಿ ಅಗಲ ಕಡಿಮೆ ಆಗಿದ್ದರಿಂದ ಜನತೆ ಅನುಭವಿಸುವ ಸಂಕಷ್ಟಕ್ಕೆ ಕೊನೆಯಾಡಬೇಕು. ಒತ್ತುವರಿ ವಿಚಾರವಾಗಿ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅದಕ್ಕೆ ಎಲ್ಲರೂ ಸಹಕರಿಸಬೇಕು.
ಎಸ್.ಜಿ. ನಂಜಯ್ಯನಮಠ, ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು, ಬಾಗಲಕೋಟೆ.

ಮಲಪ್ರಭಾ ನದಿ ಒತ್ತುವರಿ ತೆರವುಗೊಳಿಸಬೇಕು ಎಂದು ಸ್ವತಃ ಡಿಸಿಎಂ ಗೋವಿಂದ ಕಾರಜೋಳ ಅವರು ಧ್ವನಿ ಎತ್ತಿದ್ದಾರೆ. ಇದಕ್ಕೆ ಸಿಎಂ ಸಹ ಪೂರಕವಾಗಿ ಸ್ಪಂದಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಅಧಿಕಾರಿಗಳು ಸರ್ವೇ ಮಾಡಿ ಎಲ್ಲೆಲ್ಲಿ ಒತ್ತುವರಿಯಾಗಿದೆ ಎಂದು ಮನವರಿಕೆ ಮಾಡಿಕೊಟ್ಟಾಗ ಅದನ್ನು ಎಲ್ಲರೂ ಒಪ್ಪುತ್ತಾರೆ. ತೆರವಿಗೆ ಸಹಕಾರ ನೀಡುತ್ತಾರೆ.
ಶಾಂತಗೌಡ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷರು, ಬಾಗಲಕೋಟೆ.

ನವಿಲುತೀರ್ಥದಿಂದ ಕೂಡಲಸಂಗಮದ ವರೆಗೂ ಮಲಪ್ರಭಾ ನದಿ ಸಾಕಷ್ಟು ಪ್ರಮಾಣದಲ್ಲಿ ಒತ್ತುವರಿ ಆಗಿದೆ. ಈಗ ಡಿಸಿಎಂ ಅವರೇ ಒತ್ತುವರಿ ತೆರವು ಆಗಬೇಕು ಎಂದು ಧ್ವನಿ ಎತ್ತಿರುವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಇದನ್ನು ಸಡಿಲ ಬಿಡಬಾರದು ಮತ್ತು ಪ್ರವಾಹ ಬಂದಾಗಷ್ಟೆ ತೆರವು ವಿಷಯ ಮುನ್ನೆಲೆಗೆ ಬಂತು ಎನ್ನುವಂತಾಗಬಾರದು. ತೆರವು ಕಾರ್ಯ ಅನುಷ್ಠಾನಕ್ಕೆ ಬರಬೇಕು.
ಪ್ರಕಾಶ ಗುಳೇದಗುಡ್ಡ, ಪುರಸಭೆ ಸದಸ್ಯರು, ಕಮತಗಿ.

ಮಲಪ್ರಭಾ ನದಿ ಒತ್ತುವರಿಗೆ ಸರ್ಕಾರದ ನಿರ್ಧಾರಕ್ಕೆ ನಾವೆಲ್ಲ ಬೆಂಬಲವಾಗಿ ನಿಲ್ಲುತ್ತೇವೆ. ಇದು ಬೃಹತ್ ಸಮಸ್ಯೆ ಆಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲೇಬೇಕು. ಒತ್ತುವರಿ ಸರ್ವೇ ಕಾರ್ಯ ಆರಂಭಿಸಿ ತೆರವು ಕಾರ್ಯಕ್ಕೆ ಮುಂದಾಗಬೇಕು. ಈ ವಿಚಾರವಾಗಿ ವಿಜಯವಾಣಿ/ದಿಗ್ವಿಜಯ ನ್ಯೂಸ್ ಹಮ್ಮಿಕೊಂಡಿರುವ ನದಿ ಉಳಿಸಿ, ಒತ್ತವರಿ ತೆರವುಗೊಳಿಸಿ ಅಭಿಯಾನಕ್ಕೆ ನಮ್ಮ ಬೆಂಬಲ ಇದೆ.
ಚಂದ್ರು ಕುರಿ, ಕಮತಗಿ ಪಟ್ಟಣದ ನಿವಾಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net