

ದಾವಣಗೆರೆ: ಚಿಕ್ಕವರಿರಲಿ, ಹಿರಿಯರಿರಲಿ ಇತ್ತೀಚಿನ ದಿನದಲ್ಲಿ ಹೃದಯದ ಆರೋಗ್ಯ ಕಾಳಜಿ ಮುನ್ನೆಲೆಗೆ ಬಂದಿದೆ. ವಿರಕ್ತಮಠದ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗಿಯಾದ ನಾಗರಿಕರು ಇದನ್ನು ಸಾಕ್ಷೀಕರಿಸಿದರು. ರಾಜ್ಯದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ವಾಹಿನಿಯಿಂದ, ಎಸ್‌ಎಸ್ ನಾರಾಯಣ ಹಾರ್ಟ್ ಸೆಂಟರ್ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಉಚಿತ ಹೃದಯ ತಪಾಸಣೆಗೆ ಉತ್ತಮ ಜನಸ್ಪಂದನೆ ವ್ಯಕ್ತವಾಯಿತು.
ಹಿರಿಯ ನಾಗರಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರಕ್ಕೆ ಹಾಜರಾಗಿ ತಪಾಸಣೆಯ ಕೂಪನ್ ಪಡೆದರು. ಸರದಿ ಸಾಲಿನಲ್ಲಿ ನಿಂತರು, ಕುರ್ಚಿಗೆ ಒರಗಿದರು. ಪತಿ ಮತ್ತು ಮಕ್ಕಳ ಆಸರೆ, ಊರುಗೋಲು ನೆಲಕ್ಕೂರುತ್ತಲೇ ಬಿಸಿಲು-ಸೆಖೆಯ ವಾತಾವರಣದಲ್ಲೂ ಹಿಂಜರಿಯದೆ ಪರೀಕ್ಷೆ ಮಾಡಿಸಿಕೊಂಡರು. ಬೆರಳೆಣಿಕೆಯ ಯುವಕರೂ ತಪಾಸಣೆಗೆ ಮುಂದಾದರು. ಇಸಿಜಿ, 2ಡಿ ಇಕೋ, ರಕ್ತದೊತ್ತಡ ಪರೀಕ್ಷೆಯೊಂದಿಗೆ ವೈದ್ಯರ ಸಲಹೆ ಪಡೆದರು. ವೈದ್ಯರು ಕೂಡ ನಿಯಮಿತ ಊಟದ ಜತೆಗೆ ವ್ಯಾಯಾಮ ಮಾಡಿ. ಆಗಾಗ್ಗೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ ಎಂಬ ಸಲಹೆ ಪಡೆದುಕೊಂಡರು. ಸುಮಾರು 200ಕ್ಕೂ ಹೆಚ್ಚು ಜನರು ಶಿಬಿರದ ಲಾಭ ಪಡೆದರು.
ಜೀವನ ಶೈಲಿ ಬದಲಿಸಿಕೊಳ್ಳಿ: ಎಸ್‌ಎಸ್‌ಐಎಂಎಸ್‌ನ ಪ್ರಾಂಶುಪಾಲ ಡಾ. ಬಿ.ಎಸ್.ಪ್ರಸಾದ್ ಮಾತನಾಡಿ, ನಾವಿಂದು ಎಷ್ಟೇ ಪೂಜೆ ಮಾಡಿದರೂ ಜೀವನಶೈಲಿ ಬದಲಿಸಿಕೊಳ್ಳಬೇಕು. ದೈನಂದಿನ ಒತ್ತಡದಿಂದ ಮುಕ್ತರಾಗಲು ದೈಹಿಕ ವ್ಯಾಯಾಮ, ಯೋಗಾಭ್ಯಾಸ, ಧ್ಯಾನ ಮಾಡಬೇಕು. ದೈಹಿಕ ಚಟುವಟಿಕೆಯಿಂದ ಹೃದಯ ಸಂಬಂಧಿ ಕಾಯಿಲೆ ಕಡಿಮೆ ಮಾಡಬಹುದು. ರೋಗ ಬರುವ ಮುನ್ನ ಮುಂಜಾಗ್ರತೆ ವಹಿಸಬೇಕು ಎಂದರು.
ವ್ಯಾಯಾಮ ಅತಿಯಾದರೆ ಅಪಾಯಕಾರಿಯಾಗಲಿದೆ. ದಿನದಲ್ಲಿ 5 ಕಿಮೀ ವಾಯುವಿಹಾರ ಸಾಕು. ಊಟದಲ್ಲಿ ಮಿತಿಯಿರಲಿ. ಬೆಳಗ್ಗೆ ರಾಜನಂತೆ, ಮಧ್ಯಾಹ್ನ ರಾಣಿಯಂತೆ ಹಾಗೂ ರಾತ್ರಿ ಭಿಕ್ಷುಕನಂತೆ ಆಹಾರ ಸೇವಿಸಬೇಕು. ಬೆಳಗಿನ ತಿಂಡಿ ತ್ಯಜಿಸಿದರೆ ಮಧುಮೇಹ ಖಾತ್ರಿ ಎಂದು ಎಚ್ಚರಿಸಿದರು. ಇಂಗ್ಲೆಂಡಿನಲ್ಲಿ ಒಂದು ವಾರಕ್ಕೆ ಬಳಸುವಷ್ಟು ಉಪ್ಪನ್ನು ನಾವು ಒಂದು ದಿನದಲ್ಲಿ ವಿನಿಯೋಗಿಸುತ್ತಿದ್ದೇವೆ. ಕಡಿಮೆ ಬೆಲೆಗೆ ಸಿಗುವ ಅಡುಗೆ ಎಣ್ಣೆಯನ್ನು ತಿಂಡಿಯಂಗಡಿಗಳಲ್ಲಿ ಮರು ಬಳಕೆ ಮಾಡಲಾಗುತ್ತಿದೆ. ಇವೆರಡೂ ಆರೋಗ್ಯಕ್ಕೆ ಹಾನಿಕಾರಿ. ಆಹಾರದಲ್ಲಿ ಬಳಸುವ ಮಸಾಲೆ ಪದಾರ್ಥ, ಖಾರದಪುಡಿ ಕೆಂಬಣ್ಣಕ್ಕೆ ಬರಲು ಬಳಸುವ ರಾಸಾಯನಿಕವು ಹೃದಯ ಸಂಬಂಧಿ ರೋಗ ತರಲಿದೆ. ಮೂತ್ರಪಿಂಡಕ್ಕೆ ಹಾನಿ ಮಾಡಲಿದೆ ಎಂದರು.
ಎಸ್‌ಎಸ್ ನಾರಾಯಣ ಹಾರ್ಟ್ ಸೆಂಟರ್ ಎಸ್ಸೆಸ್ ಆಸ್ಪತ್ರೆ ಜತೆ ಸಂಯೋಜನೆಗೊಂಡ ನಂತರದಲ್ಲಿ ಒಂದು ದಿನಕ್ಕೆ 200ರಿಂದ 300 ಆಂಜಿಯೋಪ್ಲಾಸ್ಟಿ, ತಿಂಗಳಿಗೆ 40ರಿಂದ 50ರಷ್ಟು ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಕನಿಷ್ಠ 3ರಿಂದ 6 ತಿಂಗಳಿಗೊಮ್ಮೆ ಬಿಪಿ, ಮಧುಮೇಹ, ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಒಳಿತು ಎಂದರು. ರೋಟರಿ ಕ್ಲಬ್ ಅಧ್ಯಕ್ಷ ಆರ್.ಟಿ.ಮೃತ್ಯುಂಜಯ ಇದ್ದರು. ವಿಜಯವಾಣಿ ಸ್ಥಾನಿಕ ಸಂಪಾದಕ ಎಂ.ಬಿ.ನವೀನ್ ಪ್ರಾಸ್ತಾವಿಕ ಮಾತನಾಡಿದರು. ಚಿತ್ರದುರ್ಗ ವಿಶೇಷ ವರದಿಗಾರ ನಾಗರಾಜ್ ಶ್ರೇಷ್ಠಿ ಸ್ವಾಗತಿಸಿದರು. ಜಾಹೀರಾತು ವಿಭಾಗದ ಸಹಾಯಕ ವ್ಯವಸ್ಥಾಪಕ ಎಂ.ಎಸ್.ಕುಮಾರಸ್ವಾಮಿ ವಂದಿಸಿದರು. ಜಾನಪದ ಅಕಾಡೆಮಿ ಸದಸ್ಯೆ ರುದ್ರಾಕ್ಷಿಬಾಯಿ ಪ್ರಾರ್ಥಿಸಿದರೆ, ಕಲಾಕುಂಚ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.
ಭಾಗಿಯಾದ ವೈದ್ಯ ಸಿಬ್ಬಂದಿ: ಎಸ್‌ಎಸ್ ನಾರಾಯಣ ಹಾರ್ಟ್ ಸೆಂಟರ್‌ನ ಕಿರಿಯ ಹೃದ್ರೋಗ ತಜ್ಞ ಡಾ. ಗಣೇಶ್ ಹೆಗಡೆ, ಇಸಿಜಿ ಟೆಕ್ನಿಷಿಯನ್ ಕವಿತಾ, ಇಕೋ ಟೆಕ್ನಿಷಿಯನ್ ವಾತ್ಸಲ್ಯ, ಶಿಬಿರದ ಸಂಚಾಲಕ ಗುಡ್ಡಪ್ಪ ಅಂಚಿ ತಂಡ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತು. ವಿರಕ್ತಮಠದ ಸಭಾಂಗಣ ಹಾಗೂ ಎರಡು ಪ್ರತ್ಯೇಕ ಕೊಠಡಿಗಳಲ್ಲಿ ತಪಾಸಣೆ ನಡೆಸಲಾಯಿತು.