

ಬೆಂಗಳೂರು: ‘ಬೆಂಗಳೂರು ತಂತ್ರಜ್ಞಾನ ಶೃಂಗ’ (ಬಿಟಿಎಸ್) ಕರ್ನಾಟಕದ ಶಕ್ತಿ ಮತ್ತು ಸ್ವಾಭಿಮಾನದ ಪ್ರದರ್ಶನವಾಗಿರಲಿದ್ದು, ಆತ್ಮನಿರ್ಭರ ಭಾರತ ನಿರ್ವಣದತ್ತ ಒಂದು ದೊಡ್ಡ ಹೆಜ್ಜೆ ಎಂದು ಐಟಿಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಬಿಟಿಎಸ್-2021 ಹಿನ್ನೆಲೆ ವಿಜಯವಾಣಿ ಕಚೇರಿಯಲ್ಲಿ ಸಂವಾದ ನಡೆಸಿದ ಅವರು, ಕಾರ್ಯಕ್ರಮದ ಹಿನ್ನೆಲೆ, ಉದ್ದೇಶ, ಪರಿಣಾಮದ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದರು.
ನ.17ರಿಂದ 19ರವರೆಗೆ ನಡೆಯಲಿರುವ ಶೃಂಗದಲ್ಲಿ 30ಕ್ಕೂ ಹೆಚ್ಚು ದೇಶಗಳು ಪಾಲ್ಗೊಳ್ಳಲಿವೆ ಎಂದರು. 300ಕ್ಕೂ ಹೆಚ್ಚು ಮುಂಚೂಣಿ ಕಂಪನಿಗಳು ಭಾಗವಹಿಸಲಿದ್ದು, 5 ಸಾವಿರಕ್ಕೂ ಅಧಿಕ ನವೋದ್ಯ ಮಗಳು ಪಾಲ್ಗೊಳ್ಳಲಿವೆ. 20 ಸಾವಿರಕ್ಕೂ ಹೆಚ್ಚು ವಾಣಿಜ್ಯ ಪ್ರತಿನಿಧಿಗಳು ಸಕ್ರಿಯರಾಗಿ ಭಾಗವಹಿಸಲಿದ್ದು, ಒಟ್ಟಿನಲ್ಲಿ 5 ಲಕ್ಷ ತಾಂತ್ರಿಕೋದ್ಯಮ ಆಸಕ್ತರನ್ನು ತಲುಪಲಿದೆ ಎಂದು ಹೇಳಿದರು.
ಬರಲಿದೆ ಸೈಬರ್ ಸೆಕ್ಯುರಿಟಿ ಪಾಲಿಸಿ: ಸೈಬರ್ ಅಪರಾಧ ಪ್ರಕರಣ ಹೆಚ್ಚಾಗುತ್ತಿದ್ದಂತೆ ಸೈಬರ್ ಸೆಕ್ಯುರಿಟಿ ಪಾಲಿಸಿ ತರಲು ಬಯಸಿದೆ. ಡಿಜಿಟಲ್ ವ್ಯವಹಾರ ಹೆಚ್ಚಾಗುತ್ತಿದ್ದಂತೆ ಸೈಬರ್ ಅಪರಾಧ ಹೆಚ್ಚಾಗುತ್ತಿದೆ. ಹೀಗಾಗಿ ಇಂತಹ ಪ್ರಕರನ ಬೇಧಿಸುವುದಕ್ಕೆ ಪೊಲೀಸರು ಕೂಡ ತಾಂತ್ರಿಕವಾಗಿ ಅಪ್ಡೇಟ್ ಆಗಬೇಕಾಗುತ್ತದೆ, ಈ ಹಿನ್ನೆಲೆಯಲ್ಲಿ ನೀತಿ ತರಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಇದು ಬಂಡವಾಳ ತರಲಿದೆ ಎಂಬುದಕ್ಕಿಂತ ರಾಜ್ಯದ ಐಟಿ ಕ್ಷೇತ್ರದ ಸಾಮರ್ಥ್ಯವನ್ನು ಜಗತ್ತಿಗೆ ಶೋಕೇಸ್ ಮಾಡಲಿದೆ. ಈ ಕ್ಷೇತ್ರದಲ್ಲಿ ಯಾವ ರೀತಿ ಬದಲಾವಣೆಗಳು ಆಗಿವೆ, ಆವಿಷ್ಕಾರಗಳು ಮತ್ತು ಅದನ್ನು ಬಳಸಿಕೊಳ್ಳುವಿಕೆ, ಸೆಲ್ಯೂಷನ್ಗಳ ಲಭ್ಯತೆ, ಬೆಳವಣಿಗೆಯಾಗುತ್ತಿರುವ ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ), ಮಷೀನ್ ಲರ್ನಿಂಗ್ (ಯಂತ್ರ ಭಾಷೆ) ಕ್ಷೇತ್ರದಲ್ಲಿನ ವಿಚಾರಗಳು ಅನಾವರಣಗೊಳ್ಳಲಿವೆ.
ಕಳೆದ ವರ್ಷ ಒಂದು ತಿಂಗಳಲ್ಲಿ ಒಂದು ಲಕ್ಷ ನೇರ ಉದ್ಯೋಗ ಸೃಷ್ಟಿ, ಆರು ತಿಂಗಳಲ್ಲಿ ಮೂರು ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಿದೆ. ಈಗ ಇನ್ನಷ್ಟು ವಿಸ್ತರಣೆಯಾಗುತ್ತಿದೆ. ಯೂನಿಕಾರ್ನ್ಗಳ ಸಂಖ್ಯೆ ಹೆಚ್ಚಾಗಿದೆ. ದೇಶದ ಬಹುಪಾಲು ಯೂನಿಕಾರ್ನ್ ಕಂಪನಿಗಳು (ಒಂದು ಬಿಲಿಯನ್ಗಿಂತ ದೊಡ್ಡ ಮೌಲ್ಯದ ಕಂಪನಿ) ಬೆಂಗಳೂರಿನಲ್ಲೇ ಇವೆ. ಒಬ್ಬೊಬ್ಬ ಯೂನಿಕಾರ್ನ್ ಬಂದರೆ ನಮಗೆ ಹಬ್ಬ ಎನಿಸುತ್ತಿತ್ತು. ಈಗ ದೊಡ್ಡ ಸಂಖ್ಯೆಯಲ್ಲಿ ಯೂನಿಕಾರ್ನ್ಗಳು ಇಲ್ಲಿವೆ.
‘ಬಿಯಾಂಡ್ ಬೆಂಗಳೂರು’ ಕಲ್ಪನೆಯಲ್ಲಿ ಬಹಳ ದೊಡ್ಡ ಪ್ರಯತ್ನ ಮಾಡಲಾಗಿದೆ, ಪರಿಣಾಮ ಹುಬ್ಬಳ್ಳಿ, ಮಂಗಳೂರು, ಮೈಸೂರಲ್ಲಿ ವಿಸ್ತರಣೆಯಾಗುತ್ತಿದೆ. ಜಿಸಿಸಿ ಸೆಂಟರ್ ಬೇರೆ ನಗರಗಳಿಗೆ ಬರವಂತೆ ಪ್ರಯತ್ನಿಸಲಾಗಿದೆ. ಬೇರೆ ಬೇರೆ ಕಂಪನಿಗಳ ಜತೆ ಮಾತನಾಡಲಾಗಿದೆ. ತುಂಬ ಇಂಜಿನಿಯರಿಂಗ್ ಪ್ರಾಡಕ್ಟ್ ಟ್ರಯಲ್ ಮಾಡುವಾಗ ದೊಡ್ಡ ಜಾಗ ಬೇಕಾಗುತ್ತದೆ. ಇಂತಹ ನಗರಗಳಲ್ಲಿ ಅವಕಾಶ ಮಾಡಿಕೊಡಲಾಗುತ್ತದೆ. ಉದ್ಯಮಿಗಳಿಗೆ ಅಲ್ಲಿಗೆ ತೆರಳುವಂತೆ ಒತ್ತಾಯ ಮಾಡುತ್ತಿದ್ದೇವೆ. ಅವರಿಗೆ ಜಾಗವೂ ಸಿಗುತ್ತದೆ, ಟ್ಯಾಲೆಂಟ್ ಸಹ ಸಿಗಲಿದೆ. ನಾವು ಪ್ರೋತ್ಸಾಹ ಕೊಡುತ್ತಿದ್ದೇವೆ. ಬೆಂಗಳೂರೊಂದರಲ್ಲೇ 58 ಬಿಲಿಯನ್ ಯುಎಸ್ ಡಾಲರ್ ಉದ್ಯಮ ಬೆಳೆದಿದೆ. ಅದು ಬೇರೆ ನಗರಗಳಲ್ಲೂ ವಿಸ್ತರಣೆ ಆಗಬೇಕು.
ಕಲಾ, ವಾಣಿಜ್ಯ ಕೋರ್ಸ್ ನವರಿಗೆ ಸಹ ಟೆಕ್ನಾಲಜಿ ಇಂಟಿಗ್ರೇಟ್ ಮಾಡುತ್ತಿದ್ದೇವೆ, ಕಡ್ಡಾಯ ಗೊಳಿಸಲಾಗುತ್ತಿದೆ. ಡೇಟಾ ಅನಲಿಟಿಕ್ಸ್, ಕ್ಲೌಡ್ ಕಂಪ್ಯೂಟಿಂಗ್ ಸೇರಿ ಅನೇಕ ವಿಚಾರ ಒಳಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಏರೋಸ್ಪೇಸ್, ಡಿಫೆನ್ಸ್, ಆಟೋಮೊಬೈಲ್, ಎಲೆಕ್ಟ್ರಿಕ್ ವೆಹಿಕಲ್, ಸೈಬರ್ ಸೆಕ್ಯುರಿಟಿ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಎಲೆಕ್ಟ್ರಾನಿಕ್ಸ್ಗೆ (ಸೆಮಿಕಂಡಕ್ಟರ್, ಸಿಪ್ ಡಿಸೈನಿಂಗ್) ಹೆಚ್ಚು ಸ್ಕೋಪ್ ಸಿಗಬಹುದು.
ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಮಷೀನ್ ಲರ್ನಿಂಗ್, ಐಒಟಿ (ಇಂಟರ್ನೆಟ್ ಆಫ್ ಥಿಂಗ್ಸ್) ಡೇಟಾ ಅನಲಿಟಿಕ್ಸ್, ಸೈಬರ್ ಸೆಕ್ಯುರಿಟಿ ಈ ರೀತಿ ಬೇರೆ ಬೇರೆ ಕ್ಷೇತ್ರದಲ್ಲಿ ಹೆಚ್ಚು ಸ್ಟಾರ್ಟ್ ಅಪ್ ಬರುತ್ತಿವೆ. ನಾವೀನ್ಯತೆಗೆ ಇಡೀ ದೇಶದಲ್ಲಿ ಒಂದೇ ನಗರ ಬೆಂಗಳೂರು. ಇಲ್ಲಿನ ಸ್ಥಾನ ಮಾನ ಎಲ್ಲೋ ಇದೆ. ಇದರ ಮಾನಿಟೈಸ್ ಮಾಡಿಕೊಳ್ಳಬೇಕಿದೆ.