

ಮಂಗಳೂರು : ಗ್ರಾಮೀಣ ಪ್ರದೇಶವಾದ ಉಜಿರೆಯಲ್ಲಿ ‘ಲಕ್ಷ್ಮೀ ಇಂಡಸ್ಟ್ರೀಸ್ ಸ್ಥಾಪಿಸಿ ’ಸಿಮೆಂಟ್ ದಾರಂದ, ಕಿಟಕಿ ಪ್ರೇಮ್, ಪೈಬರ್ ಬಾಗಿಲು ನಿರ್ಮಾಣದಲ್ಲಿ ಯಶಸ್ಸು ಸಾಧಿಸಿದ, ಬದುಕು ಕಟ್ಟೋಣ ಬನ್ನಿ ಎನ್ನುವ ಸೇವಾ ಸಂಸ್ಥೆಯ ರೂವಾರಿ ಮೋಹನ್ ಕುಮಾರ್ ಅವರು ವಿಆರ್‌ಎಲ್ ಸಮೂಹ ಸಂಸ್ಥೆಯ ‘ವಿಜಯವಾಣಿ’ ಮತ್ತು ‘ದಿಗ್ವಿಜಯ ನ್ಯೂಸ್ ‘24*7 ನ್ಯೂಸ್ ಚಾನಲ್ ವತಿಯಿಂದ ನೀಡಲಾದ ಪ್ರತಿಷ್ಠಿತ ‘ವಿಜಯರತ್ನ-2022‘ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಉಜಿರೆ, ಬೆಳ್ತಂಗಡಿ, ಧರ್ಮಸ್ಥಳ ಪರಿಸರದಲ್ಲಿ ಉದ್ಯಮ ಹಾಗೂ ಸಮಾಜ ಸೇವೆಯ ಮೂಲಕ ಮನೆ ಮಾತಾಗಿರುವ ಮೋಹನ್ ಕುಮಾರ್ ಕಠಿಣ ಹಾದಿಯಲ್ಲಿ ಸಾಗಿ ಬಂದು ಸ್ವಂತ ಪರಿಶ್ರಮದ ಮೂಲಕ ಉದ್ಯಮ ಕ್ಷೇತ್ರದಲ್ಲಿ ಯಶಸ್ಸು ಕಂಡವರು.
ಸಾಮಾನ್ಯ ಯುವಕನೋರ್ವ ಪ್ರಾಮಾಣಿಕ ದುಡಿಮೆಯಿಂದ ಹೇಗೆ ಸಮಾಜದಲ್ಲಿ ಬೆಳೆಯಬಲ್ಲ ಎನ್ನುವುದಕ್ಕೆ ಅವರು ಶ್ರೇಷ್ಠ ಉದಾಹರಣೆ.
ಧರ್ಮಾಧಿಕಾರಿ ಅವರ ಆಶೀರ್ವಾದ
80ರ ದಶಕದಲ್ಲಿ ಮೋಹನ್ ಅವರ ತಂದೆ ರಾಜು ಮೇಸ್ತ್ರಿ ಅವರು ಉಜಿರೆಯಲ್ಲಿ ಮರಕ್ಕೆ ಪರ್ಯಾಯವಾಗಿ ಸಿಮೆಂಟಿನ ಮೂಲಕ ಕಿಟಕಿ ನಿರ್ಮಿಸುವ ಸಣ್ಣ ಉದ್ಯಮ ಆರಂಭಿಸಿದ್ದರು. ಶಿಕ್ಷಣವನ್ನು ಪ್ರೌಢ ಶಾಲೆಯ ಹಂತಕ್ಕೆ ಮೊಟಕುಗೊಳಿಸಿದ ಮೋಹನ್ ಬಳಿಕ ತಂದೆಗೆ ಸಹಾಯಕನಾಗಿ ನಿಂತರು. ತಂದೆಯ ನಿಧನದ ಬಳಿಕ ಲಕ್ಷ್ಮೀ ಇಂಡಸ್ಟ್ರೀಸ್ ಹೆಸರಿನಲ್ಲಿ ಸ್ವಂತ ಉದ್ಯಮ ಆರಂಭಿಸಿದರು. ತಮ್ಮದೇ ಆದ ಪರಿಕಲ್ಪನೆಯಡಿ ನೂತನ ತಂತ್ರಜ್ಞಾನ ಬಳಸಿ ಸಿಮೆಂಟ್ ದಾರಂದ, ಕಿಟಕಿ ಪ್ರೇಮ್, ಫೈಬರ್ ಬಾಗಿಲು ನಿರ್ಮಾಣಕ್ಕೆ ಮುಂದಾದರು. ಇದೇ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳದ ವಸತಿ ಗೃಹ ಹಾಗೂ ಶಿಕ್ಷಣ ಸಂಸ್ಥೆಗಳ ಕಟ್ಟಡಗಳಿಗೆ ಇದನ್ನು ಬಳಸುವ ಸಲುವಾಗಿ ಆರ್ಡರ್ ನೀಡಿದರು. ಗುಣಮಟ್ಟದ ಉತ್ಪನ್ನಗಳನ್ನು ಪೂರೈಸಿದ ಮೋಹನ್‌ಕುಮಾರ್ ಅವರು ಧರ್ಮಾಧಿಕಾರಿ ಅವರ ಮೆಚ್ಚುಗೆ ಗಳಿಸಿದರು.
ಉದ್ಯೋಗದಾತ
ಧರ್ಮಸ್ಥಳ ಸಮೀಪದ ಉಜಿರೆ ಪೇಟೆಯಿಂದ ಚಾರ್ಮಾಡಿ ರಸ್ತೆಯಲ್ಲಿ ಸಾಗುತ್ತಿದ್ದಂತೆ ಬಲಭಾಗದಲ್ಲಿ ಮೋಹನ್ ಅವರ ‘ಲಕ್ಷ್ಮೀ ಇಂಡಸ್ಟ್ರೀಸ್- ಕನಸಿನ ಮನೆ ’ಹೆಸರಿನ ಆಕರ್ಷಕ ಶೋ ರೂಂ ಕಣ್ಮನ ಸೆಳೆಯುತ್ತದೆ. ಲಕ್ಷ್ಮೀ ಇಂಡಸ್ಟ್ರೀಸ್‌ನ ಉತ್ಪನ್ನಗಳಿಗೆ ಈಗ ದ.ಕ., ಉಡುಪಿ ಮಾತ್ರವಲ್ಲದೆ ರಾಜ್ಯದೆಲ್ಲೆಡೆ ಬೇಡಿಕೆ ಇದೆ. ಮರದಂತೆ ಕಾಣುವ ಪೈಬರ್ ದಾರಂದ , ಬಾಗಿಲು, ಡೆಸ್ಕ್, ಬೆಂಚ್, ಕಿಟಕಿಯ ಫ್ರೇಮ್ ದೀರ್ಘ ಬಾಳ್ವಿಕೆ ಹಾಗೂ ಕಡಿಮೆ ವೆಚ್ಚದಿಂದಾಗಿ ಗ್ರಾಹಕರನ್ನು ಆಕರ್ಷಿಸಿದೆ. 170ಕ್ಕೂ ಅಧಿಕ ಮಂದಿ ಅವರ ಸಂಸ್ಥೆಯಲ್ಲಿ ಪ್ರತೀ ದಿನ ದುಡಿಯುತ್ತಿದ್ದಾರೆ. ಅಭಿರುಚಿಗೆ ತಕ್ಕಂತೆ ನವೀನ ಮಾದರಿಯ , ಆಕರ್ಷಕ ವಿನ್ಯಾಸದ ಉತ್ಪನ್ನಗಳನ್ನು ಪೂರೈಸುವ ಮೂಲಕ ಗ್ರಾಹಕರ ಕನಸಿನ ಮನೆ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದ್ದಾರೆ.
ಭರವಸೆಯ ಬೆಳಕು
2019ರ ಆಗಸ್ಟ್ ತಿಂಗಳಲ್ಲಿ ಜಡಿ ಮಳೆಗೆ ಬೆಳ್ತಂಗಡಿ ತಾಲೂಕು ಅಕ್ಷರಶಃ ನಲುಗಿತ್ತು. ಚಾರ್ಮಾಡಿಯ ಅಂತರ, ಕೊಳಂಬೆ ಪ್ರದೇಶ ಸಂಪೂರ್ಣ ಕೊಚ್ಚಿ ಹೋಗಿತ್ತು. ಜನರು ಜೀವ ಕೈಯಲ್ಲಿ ಹಿಡಿದು ಆಸರೆಗೆ ಕಾಯುತ್ತಿದ್ದರು. ಆಗ ಜನರ ಬದುಕಿಗೆ ಆಸರೆಯ ಬೆಳಕಾಗಿ ಬಂದವರು ಮೋಹನ್ ಕುಮಾರ್ ಅವರ ನೇತ್ರತ್ವದ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರು. ಕೊಳಂಬೆ ಪ್ರದೇಶವನ್ನು ಸರಿ ಮಾಡಲು ಅಸಾಧ್ಯ ಎನ್ನುವ ಸ್ಥಿತಿ ಇತ್ತು. ‘ಬದುಕು ಕಟ್ಟೋಣ ಬನ್ನಿ ’ತಂಡದ ಯುವಕರ ದಂಡು ಇದನ್ನು ಸವಾಲಾಗಿ ಸ್ವೀಕರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಿತ 15ಕ್ಕೂ ಅಧಿಕ ಸಂಘ, ಸಂಸ್ಥೆಗಳ ಸದಸ್ಯರು ಸಾಥ್ ನೀಡಿದರು. ಕೊಳಂಬೆ ಅಂತರ ಪ್ರದೇಶದ ಚಿತ್ರಣವನ್ನೇ ಬದಲಿಸಿದರು. ಸರ್ಕಾರ ಹಾಗೂ ದಾನಿಗಳ ನೆರವು ಪಡೆದು 12 ಸುಸಜ್ಜಿತ ಮನೆಗಳನ್ನು ನಿರ್ಮಿಸಿದರು.
ಸಮಾಜಮುಖಿ ಕಾರ್ಯ
ಕರೊನಾ ಲಾಕ್‌ಡೌನ್ ಮೋಹನ್ ಅವರು ಕ್ಷೇತ್ರದ ಶಾಸಕರೊಂದಿಗೆ ಕೈಜೋಡಿಸಿದರು. ಅಶಕ್ತರಿಗೆ ಕಿಟ್
ಒದಗಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಿಗೆ ಹಾಗೂ ಸಂಘ, ಸಂಸ್ಥೆಗಳ ಸಾಮಾಜಿಕ ಕಾರ್ಯಗಳಿಗೆ ಸದಾ ತನ್ನಿಂದ ಆದಷ್ಟು ಕೊಡುಗೆ ನೀಡುತ್ತಾ ಕೊಡುಗೈ ದಾನಿಯಾಗಿ ಹೆಸರು ಪಡೆದಿರುವ ಮೋಹನ್ ಅವರ ಸೇವಾ ಕಾರ್ಯಗಳು ನೂತನ ಹಾಗೂ ವಿಭಿನ್ನ. ನೇತ್ರಾವತಿ ನದಿಯ ಸ್ವಚ್ಛತಾ ಕಾರ್ಯ, ವೃಕ್ಷ ಯಜ್ಞ, ಗೋವಿಗಾಗಿ ಮೇವು, ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ ..ಹೀಗೆ ನಿರಂತರ ಸೇವಾ ಕಾರ್ಯವನ್ನು ಬದುಕು ಕಟ್ಟೋಣ ಬನ್ನಿ ತಂಡದ ನಡೆಸುತ್ತಿದ್ದಾರೆ.
ಸುಖ ಸಂಸಾರ
ಮೋಹನ್ ಕುಮಾರ್ ಅವರು ಪತ್ನಿ ರೇಶ್ಮಾ ಮೋಹನ್ ಕುಮಾರ್, ಪುತ್ರಿಯರಾದ ಮೌಲ್ಯ ಲಕ್ಷ್ಮಿ ಮತ್ತು ಮಾನ್ವಿ ಲಕ್ಷ್ಮಿ ಅವರ ಜತೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. ಪತ್ನಿ ರೇಶ್ಮಾ ಮೋಹನ್ ಕುಮಾರ್ ಅವರು ಪತಿಯ ಸಮಾಜಮುಖಿ ಕಾರ್ಯಗಳಿಗೆ ಸಹಕರಿಸುತ್ತಾ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಡಿ. ಹರ್ಷೇಂದ್ರ ಕುಮಾರ್ ಅವರ ಆಶೀರ್ವಾದ, ಗ್ರಾಹಕರ ಸಹಕಾರದಿಂದ ನಮ್ಮ ಉದ್ಯಮ ಬೆಳೆದಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬದುಕು ಕಟ್ಟೋಣ ಬನ್ನಿ ತಂಡದ ಜತೆಗೂಡಿ ನಮ್ಮಿಂದ ಕೈಲಾದ ಸೇವೆ ನೀಡುತ್ತಿದ್ದೇನೆ.ಬದುಕು ಕಟ್ಟೋಣ ಬನ್ನಿ ತಂಡ ಕೆಲಸಕ್ಕೆ ಶಾಸಕ ಹರೀಶ್ ಪೂಂಜ ಅವರು, ದಾನಿಗಳು, ಸಂಘ ಸಂಸ್ಥೆಗಳು , ಸಾವಿರಾರು ಸ್ವಯಂ ಸೇವಕರು ಸಹಕರಿಸಿದ ಕಾರಣ ಯಶಸ್ಸು ಸಾಧ್ಯವಾಗಿದೆ.‘ವಿಜಯವಾಣಿ’ ಪತ್ರಿಕೆ ನಮ್ಮ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಬದುಕು ಕಟ್ಟೋಣ ಬನ್ನಿ ತಂಡದ ಎಲ್ಲ ಸದಸ್ಯರಿಗೆ ಸಂದ ಗೌರವ. ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲು ‘ವಿಜಯರತ್ನ’ ಪ್ರಶಸ್ತಿ ಸ್ಫೂರ್ತಿ ನೀಡಿದೆ.
-ಮೋಹನ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಲಕ್ಷ್ಮೀ ಗ್ರೂಪ್, ಉಜಿರೆ