ಬಸ್ ನಿಲ್ದಾಣದ ತೆರೆದ ಚರಂಡಿಯಲ್ಲಿ ಕಸ-ಕಡ್ಡಿ

ಸಾರ್ವಜನಿಕರ ಆಕ್ರೋಶ * ಸೊಳ್ಳೆಗಳ ಉತ್ಪತ್ತಿ * ಮೂಗು ಮುಚ್ಚಿಕೊಂಡು ಓಡಾಟ
ಇಂಡಿಯ ಬಸ್ ನಿಲ್ದಾಣದ ಕಾಂಪೌಡ್‌ಗೆ ಹೊಂದಿ ಕೊಂಡಿರುವ ತೆರೆದ ಚರಂಡಿ.
ಇಂಡಿಯ ಬಸ್ ನಿಲ್ದಾಣದ ಕಾಂಪೌಡ್‌ಗೆ ಹೊಂದಿ ಕೊಂಡಿರುವ ತೆರೆದ ಚರಂಡಿ.
Published on: 

ಇಂಡಿ : ನಗರದ ಬಸ್ ನಿಲ್ದಾಣದ ತೆರೆದ ಚರಂಡಿಯು ಸಂಪೂರ್ಣವಾಗಿ ಕಸಕಡ್ಡಿಗಳಿಂದ ತುಂಬಿ ಗಬ್ಬು ವಾಸನೆ ಬೀರುತ್ತಿದ್ದು, ಸಾರ್ವಜನಿಕರ ಆರೋಗ್ಯಕ್ಕೆ ತೀವ್ರ ಕಂಟಕವಾಗಿ ಪರಿಣಮಿಸಿದೆ. ಪ್ರತಿದಿನ ಸಾವಿರಾರು ಪ್ರಯಾಣಿಕರು ಮತ್ತು ಸಾರ್ವಜನಿಕರು ಓಡಾಡುವ ಈ ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ಚರಂಡಿ ದುರಸ್ತಿ ಕಾಣದೆ ನರಕ ಸದೃಶವಾಗಿದೆ.

ಚರಂಡಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ತ್ಯಾಜ್ಯ ವಸ್ತುಗಳು ಬಿದ್ದಿರುವುದರಿಂದ ನೀರಿನ ಸರಾಗ ಹರಿವಿಲ್ಲದೆ ನಿಂತು, ವಿಪರೀತ ಸೊಳ್ಳೆಗಳು ಉತ್ಪತ್ತಿಯಾಗುತ್ತಿದ್ದು ಅದರಿಂದ ಮಲೇರಿಯಾ, ಡೆಂೆನಂತಹ ಮಾರಕ ರೋಗಗಳು ಹರಡುವ ಭೀತಿ ಎದುರಾಗಿದೆ. ಚರಂಡಿಯ ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಯುತ್ತಿದೆ ಅನಾಹುತ !: ಚರಂಡಿಗೆ ಯಾವುದೇ ಸುರಕ್ಷತಾ ತಡೆಗೋಡೆ ಅಥವಾ ಮುಚ್ಚಳ (ಸ್ಲ್ಯಾಬ್) ಇಲ್ಲದಿರುವುದರಿಂದ ಸಾರ್ವಜನಿಕರು ಅಥವಾ ಶಾಲಾ ಮಕ್ಕಳು ಆಕಸ್ಮಿಕವಾಗಿ ಅದರಲ್ಲಿ ಬೀಳುವ ಸಾಧ್ಯತೆ ಹೆಚ್ಚಾಗಿದೆ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವಾಗ ಚರಂಡಿ ಇರುವುದು ಸರಿಯಾಗಿ ಕಾಣಿಸದೆ ವಾಹನ ಸವಾರರು ಮತ್ತು ಪಾದಚಾರಿಗಳು ಅಪಾಯಕ್ಕೆ ಸಿಲುಕುವಂತಾಗಿದೆ.

ಸಾರ್ವಜನಿಕರ ಒತ್ತಾಯ: ಯಾರಾದರೂ ಚರಂಡಿಗೆ ಬಿದ್ದು ಪ್ರಾಣಾಪಾಯ ಅಥವಾ ದೊಡ್ಡ ಅನಾಹುತ ಸಂಭವಿಸುವ ಮೊದಲೇ ಸಂಬಂಧಪಟ್ಟ ಪುರಸಭೆ ಹಾಗೂ ಬಸ್ ನಿಲ್ದಾಣದ ಅಧಿಕಾರಿಗಳು ಜಂಟಿಯಾಗಿ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಚರಂಡಿಯಲ್ಲಿರುವ ಕಸವನ್ನು ಸ್ವಚ್ಛಗೊಳಿಸಿ, ಅದಕ್ಕೆ ಸೂಕ್ತ ಮುಚ್ಚಳವನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಅನಾಹುತವಾಗುವ ಮೊದಲೇ ಅಧಿಕಾರಿಗಳು ಎಚ್ಚೆತ್ತು ಚರಂಡಿಗೆ ಸ್ಲಾೃಬ್ ವ್ಯವಸ್ಥೆ ಮಾಡಬೇಕು. ಒಂದು ವೇಳೆ ಇಲಾಖೆಯ ನಿರ್ಲಕ್ಷ್ಯದಿಂದ ಏನಾದರೂ ಅನಾಹುತ ಸಂಭವಿಸಿದರೆ, ಅದಕ್ಕೆ ನೇರವಾಗಿ ಕೆಎಸ್‌ಆರ್‌ಟಿಸಿ ಮತ್ತು ಪುರಸಭೆ ಆಡಳಿತವೇ ಹೊಣೆಯಾಗಬೇಕಾಗುತ್ತದೆ.
ಸುನಿಲಗೌಡ ಬಿರಾದಾರ, ಕರವೇ ಜಿಲ್ಲಾ ಉಪಾಧ್ಯಕ್ಷರು,