ತಾಳಿಕೋಟೆಯಲ್ಲಿ ಜೋಳಿಗೆ ಹಿಡಿದು ಹಣ ಸಂಗ್ರಹ

ರಾಜ್ಯ ಸರ್ಕಾರದ ವಿರುದ್ಧ ಅಖಂಡ ಕರ್ನಾಟಕ ರೈತ ಸಂಘದಿಂದ ವಿನೂತನ ಭಿಕ್ಷಾಟನೆ ಚಳವಳಿ
ಬರಗಾಲ ಪರಿಹಾರ ರಾಜ್ಯ ಸರ್ಕಾರ ರೈತರಿಗೆ 2500 ರೂ. ನೀಡಿದ್ದನ್ನು ಖಂಡಿಸಿ ರೈತ ಸಂಘದ ನೇತತ್ವದಲ್ಲಿ ತಾಳಿಕೋಟೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭೀಕ್ಷಾಟನೆಯ ಮೂಲಕ ಹಣ ಸಂಗ್ರಹಿಸುತ್ತಿರುವುದು. ಅರವಿಂದ ಕುಲಕರ್ಣಿ, ವಿಠ್ಠಲ ಬಿರಾದಾರ, ಬಾಲಪ್ಪಗೌಡ ಲಿಂಗದಳ್ಳಿ ಮತ್ತಿತರರಿದ್ದರು.
ಬರಗಾಲ ಪರಿಹಾರ ರಾಜ್ಯ ಸರ್ಕಾರ ರೈತರಿಗೆ 2500 ರೂ. ನೀಡಿದ್ದನ್ನು ಖಂಡಿಸಿ ರೈತ ಸಂಘದ ನೇತತ್ವದಲ್ಲಿ ತಾಳಿಕೋಟೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭೀಕ್ಷಾಟನೆಯ ಮೂಲಕ ಹಣ ಸಂಗ್ರಹಿಸುತ್ತಿರುವುದು. ಅರವಿಂದ ಕುಲಕರ್ಣಿ, ವಿಠ್ಠಲ ಬಿರಾದಾರ, ಬಾಲಪ್ಪಗೌಡ ಲಿಂಗದಳ್ಳಿ ಮತ್ತಿತರರಿದ್ದರು.
Published on: 

ತಾಳಿಕೋಟೆ: ಸರ್ಕಾರಕ್ಕೆ ಯಾವುದೇ ಆರ್ಥಿಕ ದುರ್ಗತಿ ಬರಬಾರದು ಎಂದು ಆಕ್ರೋಶ ವ್ಯಕ್ತಪಡಿಸಿ ಅಖಂಡ ಕರ್ನಾಟಕ ರೈತ ಸಂಘದ ನೇತೃತ್ವದಲ್ಲಿ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಿಂದ ಪ್ರಮುಖ ರಸ್ತೆಗಳಲ್ಲಿ ರಾಜ್ಯ ಸರ್ಕಾರಕ್ಕೆ ನೆರವು ನೀಡಲು ರೈತ ಸಂಘದ ಅರವಿಂದ ಕುಲಕರ್ಣಿ ಅವರ ನೇತತ್ವದಲ್ಲಿ ಜೋಳಿಗೆ ಹಿಡಿದು ದೇಣಿಗೆ ಸಂಗ್ರಹ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಅಖಂಡ ಕರ್ನಾಟಕ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರವು ಇನ್‌ಪುಟ್ ಸಬ್ಸಿಡಿ ರೂಪದಲ್ಲಿ ಕೇವಲ 2500 ರೂ.ವರೆಗೆ ಪರಿಹಾರ ನೀಡಲು ಮುಂದಾಗಿರುವುದು ರೈತರನ್ನು ಭಿಕ್ಷುಕರಂತೆ ನೋಡಿದಂತಾಗಿದೆ. ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿರುವ ರಾಜ್ಯ ಸರ್ಕಾರಕ್ಕೆ ವ್ಯಾಪಾರಸ್ಥರು ಹಾಗೂ ತರಕಾರಿ ಮಾರಾಟ ಮಾಡುವ ರೈತರಿಂದ ದೇಣಿಗೆ ಸಂಗ್ರಹಿಸಿ, ಡಿಡಿ (ಚೆಕ್) ಮುಖಾಂತರ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಮುಖ್ಯ ರಸ್ತೆಯ ಅಂಗಡಿ ಮಾಲೀಕರು, ರೈತ ಮಹಿಳೆಯರು ಹಾಗೂ ಶಾಲಾ ವಿದ್ಯಾರ್ಥಿನಿಯರು ಈ ಅಭಿಯಾನದಲ್ಲಿ ತಮ್ಮ ಶಕ್ಯಾನುಸಾರ ಹಣ ನೀಡಿದರು. ಒಟ್ಟು 3,485 ದೇಣಿಗೆ ಸಂಗ್ರಹವಾಯಿತು. ಸಂಗ್ರಹವಾದ ಹಣವನ್ನು ತಹಸೀಲ್ದಾರರಿಗೆ ಹಸ್ತಾಂತರಿಸಲು ಹೋದಾಗ ಅವರು ಸ್ವೀಕರಿಸಲು ನಿರಾಕರಿಸಿದ್ದರಿಂದ, ಗುರುವಾರ ಡಿಡಿ ಮುಖಾಂತರ ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗುವುದು ಎಂದು ಅರವಿಂದ ಕುಲಕರ್ಣಿ ಅವರು ತಿಳಿಸಿದರು.

ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ ಹಾಗೂ ಉಪಾಧ್ಯಕ್ಷ ರಾಮನಗೌಡ ಹಾದಿಮನಿ ಮಾತನಾಡಿ, ಜನಸಾಮಾನ್ಯರಿಂದ ಕೋಟ್ಯಂತರ ರೂ. ತೆರಿಗೆ ಸಂಗ್ರಹವಾಗುತ್ತಿದ್ದರೂ ಹಣ ಎಲ್ಲಿಗೆ ಹೋಯಿತು? ಆಡಳಿತಾರೂಢ ಸರ್ಕಾರಗಳು ಅನಗತ್ಯ ಯೋಜನೆಗಳನ್ನು ಜಾರಿಗೆ ತಂದು ರಾಜ್ಯವನ್ನು ಆರ್ಥಿಕವಾಗಿ ಹಾಳು ಮಾಡುತ್ತಿವೆ. ರೈತರ ಹಿತ ಕಾಯುವುದನ್ನು ಬಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ಬೊಟ್ಟು ಮಾಡಿ ತೋರಿಸುತ್ತಾ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರವು ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುವ ಬದಲು, ರೈತರು ರಾಷ್ಟ್ರೀಕತ ಬ್ಯಾಂಕ್‌ಗಳಲ್ಲಿ ಮಾಡಿರುವ ಕೃಷಿ ಸಾಲವನ್ನು ತಕ್ಷಣವೇ ಸಂಪೂರ್ಣ ಮನ್ನಾ ಮಾಡಬೇಕು. ಸರ್ಕಾರಗಳು ರೈತರ ವಿಷಯದಲ್ಲಿ ಗೌರವದಿಂದ ನಡೆದುಕೊಳ್ಳದಿದ್ದರೆ ಮುಂಬರುವ ಚುನಾವಣೆಯಲ್ಲಿ ಸೂಕ್ತ ಪಾಠ ಕಲಿಸ ಬೇಕಾಗುತ್ತದೆ’’ ಎಂದು ಎಚ್ಚರಿಸಿದರು.

ವಿಠ್ಠಲ ಬಿರಾದಾರ, ತಾಲೂಕು ಅಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ರಾಮನಗೌಡ ಹಾದಿಮನಿ, ಬಸವರಾಜ ಹೊಸಳ್ಳಿ, ಸಂತೋಷ ಬಿರಾದಾರ, ಹಣಮಂತರಾಯ ಹಂದ್ರಾಳ, ಸಿದ್ಧಲಿಂಗಪ್ಪ ಬಿರಾದಾರ, ಸಂಗನಗೌಡ ಬಿರಾದಾರ, ಮಲ್ಲಿಕಾರ್ಜುನ ಬಿರಾದಾರ, ಪ್ರಭುಗೌಡ ಬಿರಾದಾರ, ಸುಭಾಷ ಗುದಗಿ, ಹನುಮಂತರಾಯ ಸಾಸನೂರ, ಸಂಗನಗೌಡ ಕೊಳೂರು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net