ಕುಡಿಯುವ ನೀರು ಪೂರೈಕೆಗೆ ಆಕ್ರೋಶ

ರಸ್ತೆ ತಡೆ ನಡೆಸಿ ಹೋರಾಟ ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ
ಬಸವನಬಾಗೇವಾಡಿ ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆ ಮಾಡಿಲ್ಲ ಎಂದು ಇಂದಿರಾ ನಗರದ ನಿವಾಸಿಗಳು ರಸ್ತೆ ತಡೆ ಹಿಡಿದು ಪ್ರತಿಭಟನೆ ನಡೆಸಿದರು. ರಮೇಶ ಭಜಂತ್ರಿ, ಅಶೋಕ ಭಜಂತ್ರಿ, ಶಿವು ಬೆಲ್ಲದ, ಮಹೇಶ ಹಂಗರಗಿ ಮತ್ತಿತರರಿದ್ದರು.
ಬಸವನಬಾಗೇವಾಡಿ ಪಟ್ಟಣದಲ್ಲಿ ಕುಡಿಯುವ ನೀರು ಪೂರೈಕೆ ಮಾಡಿಲ್ಲ ಎಂದು ಇಂದಿರಾ ನಗರದ ನಿವಾಸಿಗಳು ರಸ್ತೆ ತಡೆ ಹಿಡಿದು ಪ್ರತಿಭಟನೆ ನಡೆಸಿದರು. ರಮೇಶ ಭಜಂತ್ರಿ, ಅಶೋಕ ಭಜಂತ್ರಿ, ಶಿವು ಬೆಲ್ಲದ, ಮಹೇಶ ಹಂಗರಗಿ ಮತ್ತಿತರರಿದ್ದರು.
Published on: 

ಬಸವನಬಾಗೇವಾಡಿ: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ 21ರ ಇಂದಿರಾ ನಗರದಲ್ಲಿ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆ ಇಲ್ಲಿನ ನಿವಾಸಿಗಳು ಬಕೆಟ್, ಬಿಂದಿಗೆಗಳನ್ನು ತಲೆ ಮೇಲೆ ಹೊತ್ತು ಬಸವನಬಾಗೇವಾಡಿ-ಆಲ್ಲಮಟ್ಟಿ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿ, ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ, ಪ್ರತಿಭಟನೆ ನೇತೃತ್ವ ವಹಿಸಿದ್ದ ಕರವೇ ಮುಖಂಡ ಅಶೋಕ ಹಾರಿವಾಳ ಹಾಗೂ ರೈತ ಸಂಘದ ಉಪಾಧ್ಯಕ್ಷ ಕಲ್ಲು ಸೊನ್ನದ ಮಾತನಾಡಿ, ಇಂದಿರಾ ನಗರ ಸೇರಿ ಪುರಸಭೆ ವ್ಯಾಪ್ತಿಯ ಎಲ್ಲ 23 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದೆ. ಈ ವಿಷಯವಾಗಿ ಪುರಸಭೆ ಇಂಜಿನಿಯರ್ ಹಾಗೂ ಅಧಿಕಾರಿಗಳಿಗೆ ತಿಳಿಸಿದರೂ ಸ್ಪಂದಿಸುತ್ತಿಲ್ಲ. ನಾಳೆ ನೀರು ಬಿಡುವುದಾಗಿ ಹೇಳುತ್ತ ದಿನ ದೂಡುತ್ತಿದ್ದಾರೆ. ಮುಖ್ಯಾಧಿಕಾರಿಗಳು ಕಚೇರಿಗೆ ಬರುವುದೇ ಅಪರೂಪವಾಗಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವವರಿಲ್ಲ ಎಂದು ಆರೋಪಿಸಿದರು.

ಪಟ್ಟಣದಲ್ಲಿ ಪ್ರತಿ ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದರೂ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗುತ್ತಿಲ್ಲ. ಕೂಡಲೇ ಎಲ್ಲ ವಾರ್ಡ್‌ಗಳಿಗೆ ನೀರು ಪೂರೈಸಬೇಕು. ತಹಸೀಲ್ದಾರ್ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ನೀರು ಪೂರೈಕೆಗೆ ಭರವಸೆ ನೀಡುವವರೆಗೂ ರಸ್ತೆ ತಡೆ ಹಿಂಪಡೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಸ್ಥಳಕ್ಕೆ ಆಗಮಿಸಿದ ಪುರಸಭೆ ಕಂದಾಯ ಅಧಿಕಾರಿ ಶಬ್ಬೀರ ರೇವೂರಕರ ಶುಕ್ರವಾರ ನೀರು ಪೂರೈಸುವುದಾಗಿ ಭರವಸೆ ನೀಡಿ ಪ್ರತಿಭಟನೆ ಕೈಬಿಡುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ, ತಹಸೀಲ್ದಾರ್ ಅವರೇ ಸ್ಥಳಕ್ಕೆ ಬಂದು ಭರವಸೆ ನೀಡಬೇಕು ಎಂದು ಆಗ್ರಹಿಸಿ ನಿವಾಸಿಗಳು ಪ್ರತಿಭಟನೆ ಮುಂದುವರಿಸಿದರು.

ಸುಮಾರು ಒಂದು ಗಂಟೆ ನಡೆದ ರಸ್ತೆ ತಡೆ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಹಾಗೂ ಪಿಐ ಗುರುಶಾಂತ ದಾಶ್ಯಾಳ ಆಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಶುಕ್ರವಾರ ಸಂಜೆಯೊಳಗೆ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಹೋರಾಟ ಹಿಂಪಡೆದರು.

ಕರವೇ ಮುಖಂಡರಾದ ರಮೇಶ ಭಜಂತ್ರಿ, ಅಶೋಕ ಭಜಂತ್ರಿ, ಶಿವು ಬೆಲ್ಲದ, ಮಹೇಶ ಹಂಗರಗಿ, ನಿವಾಸಿಗಳಾದ ಗಂಗವ್ವ ಹಡಪದ, ಇಸಾಕ್ ಇನಾಂದಾರ್, ಸುಭಾಸ್ ನಾವಿ, ಜಗ್ಗು ಹಡಪದ, ಬಸು ಅಗಸರ, ರವಿ ಬಂಡಿವಡ್ಡರ, ರವಿ ಚವಾಣ್, ಬಸವರಾಜ ಹೂಗಾರ, ರವಿ ಹಂಜಗಿ ಇತರರಿದ್ದರು.