ಯುವಜನತೆ ಒತ್ತಡ ನಿರ್ವಹಣೆ ರೂಢಿಸಿಕೊಳ್ಳಬೇಕು, ಡಿಸಿ ಡಾ.ಆನಂದ ಮಹತ್ವದ ಸಲಹೆ
ವಿಜಯಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಯುವ ಸೌರಭ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಆನಂದ .ಕೆ ಉದ್ಘಾಟಿಸಿದರು. ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ, ವಾರ್ತಾಧಿಕಾರಿ ಅಮರೇಶ ದೊಡಮನಿ ಇತರರಿದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಯುವ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವ
ಜಿಲ್ಲಾಡಳಿತ-ಜಿಲ್ಲಾ ಪಂಚಾಯಿತಿ ಸಹಯೋಗ
ವಿಜಯಪುರ: ‘ನಾಡಿನ ಪಾರಂಪರಿಕ ಕಲೆ, ಜಾನಪದ ಹಾಗೂ ರಂಗಭೂಮಿ ಕಲೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವಲ್ಲಿ ಯುವಜನತೆಯ ಪಾತ್ರ ಮಹತ್ತರವಾದದ್ದು. ‘ಯುವ ಸೌರಭ’ದಂತಹ ವೇದಿಕೆಗಳು ಗ್ರಾಮೀಣ ಹಾಗೂ ಉದಯೋನ್ಮುಖ ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ನೀಡಲಿವೆ’ ಎಂದು ಜಿಲ್ಲಾಧಿಕಾರಿ ಡಾ. ಆನಂದ .ಕೆ ಅವರು ಹೇಳಿದರು.
ನಗರದ ನವಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ‘ಯುವ ಸೌರಭ’ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಪೀಳಿಗೆಯು ದೇಶದ ಸಂಸ್ಕೃತಿ, ಕಲೆ ಮತ್ತು ಜಾನಪದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಇಂತಹ ವೇದಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯುವಕರು ವ್ಯಾಸಂಗದ ಜೊತೆಗೆ ಸಾಂಸ್ಕೃತಿಕ ರಂಗದಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದರು.
‘ಯುವ ಸೌರಭ’ ಸಾಂಸ್ಕೃತಿಕ ಕಾರ್ಯಕ್ರಮ
‘ಪ್ರಸ್ತುತ ವಿದ್ಯಾರ್ಥಿಗಳ ಮೇಲೆ ಸಮಾಜ ಹಾಗೂ ಕುಟುಂಬದ ನಿರೀಕ್ಷೆಗಳು ಹೆಚ್ಚಿರುವುದರಿಂದ ಯಶಸ್ವಿ ಜೀವನಕ್ಕೆ ಗಮನ ಕೇಂದ್ರೀಕರಿಸುವುದು ಮತ್ತು ಒತ್ತಡ ನಿರ್ವಹಣೆ ಕಲಿಯುವುದು ಅತ್ಯಗತ್ಯ. ಮೊಬೈಲ್ ಫೋನ್ ಅನ್ನು ಹಿತಮಿತವಾಗಿ ಬಳಸಿ, ದೈನಂದಿನ ಓದಿನಲ್ಲಿ ಧ್ಯಾನ ಮತ್ತು ಶಿಸ್ತನ್ನು ರೂಢಿಸಿಕೊಳ್ಳಬೇಕು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕೆಲಸದ ಸಾಮರ್ಥ್ಯ ಹೆಚ್ಚುತ್ತದೆ. ಇದು ಸೃಜನಶೀಲತೆ ಬೆಳೆಸುತ್ತದೆ’ ಎಂದರು.
ವಿದ್ಯಾರ್ಥಿಗಳಿಗೆ ಯಾವುದೇ ಮಾನಸಿಕ ಒತ್ತಡವಿದ್ದರೆ ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗದ ‘ಟೆಲಿಮನಸ್’ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು, ಇಲ್ಲಿ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ಕಿವಿಮಾತು ಹೇಳಿದರು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯುವ ಕಲಾವಿದರು ನೀಡಿದ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು.
‘ಯುವ ಸೌರಭ’ ಸಾಂಸ್ಕೃತಿಕ ಕಾರ್ಯಕ್ರಮ
ಮಾಳವಿಕಾ ಮಹಿಪತಿ ಜೋಷಿ ಅವರಿಂದ ಸುಗಮ ಸಂಗೀತ ಮತ್ತು ಭಾವಗೀತೆ ಗಾಯನ, ಬಸವರಾಜ ನಾಟೀಕಾರ ಅವರಿಂದ ಜಾನಪದ ಗೀತೆಗಳು ಹಾಗೂ ದೀಕ್ಷಾ ಬೀಸೆ ಮತ್ತು ತಂಡದವರಿಂದ ಆಕರ್ಷಕ ಸಮೂಹ ನೃತ್ಯ ಪ್ರದರ್ಶನಗೊಂಡವು.
ಅಂಜನಾ ಸಂಕಣ್ಣವರ ಅಭಿನಯದ ‘ಹೆಣ್ಣು ಅಬಲೆ ಅಲ್ಲ ಸಬಲೆ’ ನಾಟಕ ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಬಬಲೇಶ್ವರ ತಾಲೂಕಿನ ಸಾರವಾಡದ ಮುಬಾರಕ ನದಾಫ ಅವರಿಂದ ‘ಗೊಂಬೆ ಕುಣಿತ’ ಹಾಗೂ ಆಲಮೇಲ ತಾಲೂಕಿನ ಗುಂದಗಿಯ ಮಲ್ಲಪ್ಪ ಸೋಮನಿಂಗ ದೊಡ್ಡಮನಿ ಮತ್ತು ತಂಡದವರಿಂದ ಅದ್ದೂರಿ ‘ಡೊಳ್ಳು ಕುಣಿತ’ ಪ್ರದರ್ಶನಗೊಂಡವು. ಇದರೊಂದಿಗೆ ವೀರಗಾಸೆ, ಕಂಸಾಳೆ ಮತ್ತು ಯಕ್ಷಗಾನ ರೂಪಕಗಳು ಕಾರ್ಯಕ್ರಮದ ಆಕರ್ಷಣೆಯನ್ನು ದ್ವಿಗುಣಗೊಳಿಸಿದವು.
ಕಾರ್ಯಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲ ಯುವ ಕಲಾವಿದರು ಹಾಗೂ ಕಲಾತಂಡಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅಭಿನಂದನಾ ಪ್ರಮಾಣಪತ್ರಗಳನ್ನು ವಿತರಿಸಿ ಗೌರವಿಸಲಾಯಿತು.
ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಚಿದಾನಂದ ಎಸ್. ಆನೂರ, ಲಲಿತ ಕಲಾ ಅಕಾಡೆಮಿಯ ಸದಸ್ಯೆ ರಾಜೇಶ್ವರಿ ಮೋಪಗಾರ, ಮೋಹನ ಕಟ್ಟಿಮನಿ ಇತರರಿದ್ದರು.