ಮುದ್ದೇಬಿಹಾಳ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಎಸ್. ಬಾಲಾಜಿ ಸದ್ಭಾವನಾ ಪ್ರಶಸ್ತಿ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಚಂದ್ರು ಕರೇಕಲ್ಲ, ಅಪ್ಪುಗೌಡ ಪಾಟೀಲ, ಬಿ. ಎಲ್. ಬಿರಾದಾರ, ಸುಚೀತ ಚಳಿಗೇರಿ, ಮಹ್ಮದ ರಫೀಕ ಶಿರೋಳ, ಶಿವು ದಡ್ಡಿ ಇದ್ದರು.
ಯುವ ನೀತಿ ಜಾರಿ ಮಾಡುವ ಮೂಲಕ ಕ್ರೀಡೆ ಜತೆಗೆ ಯುವ ಜನರ ಸಬಲೀಕರಣ ಆಗಬೇಕು. ರಾಜ್ಯ ಯುವ ಪ್ರಶಸ್ತಿಗಳನ್ನು ಪುನಃ ಸ್ಥಾಪಿಸಿ ತಾಲೂಕು, ಜಿಲ್ಲಾ, ವಿಭಾಗಮಟ್ಟದಿಂದ ರಾಜ್ಯಮಟ್ಟದವರೆಗಿನ ಯುವ ಮೇಳವನ್ನು ಪುನಃ ಆರಂಭಿಸುವಂತೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಎಸ್.ಬಾಲಾಜಿ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಕಳೆದ 25 ವರ್ಷಗಳಿಂದ ರಾಜ್ಯಾದ್ಯಂತ ಯುವ ಸಂಘಟನೆ, ಸಮಾಜ ಸೇವೆಯಲ್ಲಿ ತೊಡಗಿಸಿ ರಾಜ್ಯದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯ ನಿರಂತರ ಮಾಡುತ್ತಿದೆ. ಅದರಂತೆ ವಿಜಯಪುರ ಜಿಲ್ಲಾ ಹಾಗೂ ಮುದ್ದೇಬಿಹಾಳ ತಾಲೂಕು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ಕನ್ನಡ ಜಾನಪದ ಪರಿಷತ್ ಮಹಿಳಾ ಘಟಕ, ಜಾನಪದ ಯುವ ಘಟಕ ಹಾಗೂ ಸಾಧನಾ ಮಹಿಳಾ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಜ.31 ಶನಿವಾರ ಸಾಯಂಕಾಲ ವಿಬಿಸಿ ಹೈಸ್ಕೂಲಿನ ಸಿದ್ಧೇಶ್ವರ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯುತ್ಸವ ಹಾಗೂ ರಾಜ್ಯ, ರಾಷ್ಟ್ರ ಅಂತರರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಷ್ಟ್ರೀಯ ಯುವ ವೈಭವ, ವಿವೇಕ ಯುವ ಚೈತನ್ಯ ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ವೇಳೆ ರಾಜ್ಯದ ವಿವಿಧ ಜಿಲ್ಲೆಗಳ ಸಾಧಕರಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವಕರ ಸಾಧನೆಯನ್ನು ಗುರುತಿಸದೆ ಮೂಲೆ ಗುಂಪು ಮಾಡಿ, ಯುವ ಚಿಂತಕರಿಗೆ ಸಿಗಬೇಕಾದ ಸ್ಥಾನ ಮಾನ, ಯುವ ಚೈತನ್ಯಶೀಲರಿಗೆ ಗೌರವಿಸುವ ಕಾರ್ಯಮಾಡುತ್ತಿಲ್ಲ. ಸರ್ಕಾರ ಮಾಡಬೇಕಾಗಿದ್ದ ಕೆಲಸವನ್ನು ನಮ್ಮ ಸಂಘಟನೆ ಹಲವು ಕಾರ್ಯಕ್ರಮ ಆಯೋಜಿಸಿ ಪ್ರತಿ ಜಿಲ್ಲೆಯಲ್ಲಿರುವ ಪ್ರತಿಭೆಯನ್ನು ಗುರುತಿಸುತ್ತಿದೆ ಎಂದರು.
ರಾಜ್ಯ ಯುವ ಸಂಘಗಳ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ಮಾತನಾಡಿ, ಸದ್ಭಾವನಾ ಪ್ರಶಸ್ತಿ ಸಮಾರಂಭ ಜತೆಗೆ ಯುವ ಜನ ಮೇಳ, ಸಾಂಸ್ಕೃತಿಕ ಕಾರ್ಯಕ್ರಮ, ಸ್ವಾಮಿ ವಿವೇಕಾನಂದ ಭವ್ಯ ಮೆರವಣಿಗೆಯಲ್ಲಿ ವಿವಿಧ ಜಾನಪದ, ಸಾಂಸ್ಕೃತಿಕ ಕಲಾ ತಂಡ ಭಾಗವಹಿಸಲಿವೆ.
ತಾಲೂಕಿನ ಯುವ ಮಿತ್ರರು ಗಣ್ಯರು, ಮಹಿಳಾ ಸಾಧಕರು, ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.