ಸರ್ಕಾರದ ಆಶಯಕ್ಕೆ ತಕ್ಕುದಾಗಿ ಕೆಲಸ ಮಾಡಿ; ಅಧಿಕಾರಿಗಳಿಗೆ ಡಿಸಿ ಡಾ.ಆನಂದ ಕೆ ಸೂಚನೆ

ವಿಜಯಪುರ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅಧಿಕಾರಿಗಳ ಸಭೆ ನಡೆಸಿದರು. ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಇದ್ದಾರೆ.
ವಿಜಯಪುರ ಜಿಲ್ಲಾಡಳಿತ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅಧಿಕಾರಿಗಳ ಸಭೆ ನಡೆಸಿದರು. ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ
  • ಸಿಎಂ-ಡಿಸಿಎಂ ಅವರಿಂದ ಸಂವಾದ ಕಾರ್ಯಕ್ರಮ
  • ವಿಡಿಯೋ ಸಂವಾದ ಬಳಿಕ ಅಧಿಕಾರಿಗಳ ಸಭೆ
ವಿಜಯಪುರ: ರಾಜ್ಯ ಸರ್ಕಾರದ ಆಶಯಕ್ಕೆ ಅನುಗುಣವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಸರ್ಕಾರದ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಆ ಮೂಲಕ ಪ್ರತಿಯೊಂದು ಯೋಜನೆ ಫಲಾನುಭವಿಗಳಿಗೆ ತಲುಪಬೇಕೆಂದು ಜಿಲ್ಲಾಧಿಕಾರಿ ಡಾ.ಆನಂದ ಕೆ ಹೇಳಿದರು.
ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದ ಸಿಎಂ ಮತ್ತು ಡಿಸಿಎಂ ವಿಡಿಯೋ ಸಂವಾದದ ಬಳಿಕ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಜಿಲ್ಲೆಯಲ್ಲಿ ಮಳೆ ಅಭಾವದಿಂದಾಗಿ ಜನತೆಯ ಹಿತದೃಷ್ಟಿಯಿಂದ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಮತ್ತು ಉದ್ಯೋಗ ಖಾತ್ರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗದಂತೆ ತೀವ್ರ ನಿಗಾ ವಹಿಸಬೇಕು. ಸಮಸ್ಯೆ ಇರುವ ಕಡೆಗಳಲ್ಲಿ ತಕ್ಷಣವೇ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಿಳಂಬವಿಲ್ಲದೆ ತಕ್ಷಣವೇ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸೂಚಿಸಿದರು.
ಇದರೊಂದಿಗೆ ಜಿಲ್ಲೆಯಲ್ಲಿ ಮೇವಿನ ಕೊರತೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಮೇವು ಬೆಳೆ ಅಭಿವೃದ್ಧಿಗೆ ಲಭ್ಯವಿರುವ ಎಲ್ಲ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು. ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಆಹಾರ ಕಿಟ್ ಸಾಕಷ್ಟು ದಾಸ್ತಾನು ಹೊಂದಿರಬೇಕು ಎಂದರು.

ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ

ಜಿಲ್ಲೆಯು ಅಂತರ ರಾಜ್ಯ ಗಡಿಹೊಂದಿದ್ದು ಜಿಲ್ಲೆಯಿಂದ ಅನ್ಯ ರಾಜ್ಯಕ್ಕೆ ಮೇವಿನ ರವಾನೆಯಾಗದಂತೆ ಕಟ್ಟೆಚ್ಚರ ವಹಿಸಬೇಕು. ಮೇವು ಬೆಳೆ ಅಭಿವೃದ್ಧಿ ಪಡಿಸಲು ಹೋಬಳಿಗಳಲ್ಲಿ ವಿಬಿಜಿ ರಾಮ್ ಜಿ ಯೋಜನೆಯಡಿ ಮೇವಿನ ಕೊರತೆ ನೀಗಿಸಲು ಕ್ರಮವಹಿಸಿ. ಮೇವು ಸಂಗ್ರಹದ ನಿಖರ ಮಾಹಿತಿ ಹೊಂದಿರಬೇಕು ಎಂದರು.
ಗ್ರಾಮೀಣ ಭಾಗದ ಜನರು ಉದ್ಯೋಗ ಅರಸಿ ಬೇರೆ ಕಡೆಗೆ ಗುಳೆ ಹೋಗದಂತೆ ತಡೆಯಲು ಗ್ರಾಮ ಪಂಚಾಯತಿ ಮಟ್ಟದಲ್ಲಿ ವಿಬಿಜಿ ರಾಜ್ ಜಿ ಯೋಜನೆ ಕುರಿತ ವ್ಯಾಪಕ ಪ್ರಚಾರ ಕೈಗೊಂಡು ಸ್ಥಳೀಯವಾಗಿ ಉದ್ಯೋಗಗಳನ್ನು ಸೃಷ್ಟಿಸಬೇಕು ಎಂದರು.

ವಿಬಿಜಿ ರಾಮ್‌ಜಿಯಡಿ ಉದ್ಯೋಗ ಕಲ್ಪಿಸಿ

ವಿಬಿಜಿ ರಾಮ್ ಜಿ ಯೋಜನೆಯಡಿ ವೈಯಕ್ತಿಕ ಕಾಮಗಾರಿ ಹಾಗೂ ಸಮುದಾಯ ಆಧಾರಿತ ಅಭಿವೃದ್ಧಿ ಒಳಗೊಂಡಂತೆ ಒಟ್ಟು 318 ಕಾಮಗಾರಿಗಳನ್ನು ತೆಗೆದುಕೊಳ್ಳಲು ಮುಕ್ತ ಅವಕಾಶವಿದ್ದು, ಇವುಗಳನ್ನು ತಕ್ಷಣವೇ ಆರಂಭಿಸಿ ಹೆಚ್ಚು ಮಾನವ ದಿನಗಳ ಸೃಜನೆ ಮಾಡಿ, ಸಾರ್ವಜನಿಕರು ಮತ್ತು ರೈತರ ಸಮಸ್ಯೆಗೆ ಅಧಿಕಾರಿಗಳು ತಕ್ಷಣವೇ ಸ್ಪಂದಿಸಿ ಎಂದು ಸಿಎಂ ಹಾಗೂ ಡಿಸಿಎಂ ಅವರು ಸೂಚಿಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ಯೋಜನೆಗಳನ್ನು ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ತಲುಪಿಸಬೇಕೆಂದು ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅಂಗನವಾಡಿ ಹಾಗೂ ಶಾಲಾ ದುರಸ್ತಿಗೆ ವಿಬಿಜಿ ರಾಮ್ ಜಿ ಯೋಜನೆಯಡಿ ತೆಗೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಕೆರೆಗಳ ಭರ್ತಿ

ಕಡ್ಲೇವಾಡ ಹಾಗೂ ಜಂಬಗಿ ಸೇರಿದಂತೆ ವಿವಿಧ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕೆರೆಗಳನ್ನು ಭರ್ತಿ ಮಾಡಿಟ್ಟುಕೊಳ್ಳಬೇಕು. ಮುಳವಾಡ ಏತ ನೀರಾವರಿ ಕ್ಯಾನಲ್ ಮೇಲಿನ 23 ಕೆರೆಗಳನ್ನು ಮುಖ್ಯವಾಗಿ ಹಂಜಗಿ ಕೆರೆ ತುಂಬಿಸಲು ಕ್ರಮವಹಿಸಿ. ಮುಂದಿನ ಹತ್ತು ದಿನಗಳಲ್ಲಿ ನೀರು ತುಂಬಿಸಬೇಕು ಸೂಚನೆ ನೀಡಿದರು.
ಜಿಲ್ಲೆಯ ಎಲ್ಲ ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಪಟ್ಟಿ ಮಾಡಿ ಸಿಇಒ ಅವರಿಗೆ ವರದಿ ನೀಡಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಶಾಲೆಗಳಲ್ಲಿ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಟ್ಟಪ್ಪಣೆ ಮಾಡಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನೀರಿನ ಕೊರತೆಯಾಗದಂತೆ ಯೋಜನೆ ರೂಪಿಸಿಕೊಳ್ಳಬೇಕು. ನಗರದಲ್ಲಿ ಜಲಮಂಡಳಿ ಹಾಗೂ ಪಾಲಿಕೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದ ಅವರು, ಕಲುಷಿತ ನೀರು ಪೂರೈಕೆಯಾಗದಂತೆ ನೋಡಿಕೊಳ್ಳಬೇಕು ಕುಡಿಯುವ ನೀರಿನ ಜಮಮೂಲಗಳ ಹತ್ತಿರ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಮಳೆಗಾಲವಿರುವುದರಿಂದ ಕುಡಿಯುವ ನೀರನ್ನು ಪರೀಕ್ಷೆ ಕಡ್ಡಾಯವಾಗಿ ಮಾಡಿಯೇ ನೀರು ಸರಬರಾಜು ಮಾಡಬೇಕು. ಬೆಳೆ ವಿಮೆ ಯೋಜನೆಯಡಿ ರೈತರು ನೋಂದಾಯಿಸಿಕೊಳ್ಳಲು ಅಧಿಕಾರಿಗಳು ರೈತರಿಗೆ ತಿಳಿವಳಿಕೆ ನೀಡಬೇಕು ಎಂದರು.
ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಅಭಿಷೇಕ ಸೆಹರ್, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಎಡಿಸಿ ಔದ್ರಾಂ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕಾ ಜಂಟಿ ನಿರ್ದೇಶಕ ಸಿದ್ರಾಮಯ್ಯ ಬರಗಿಮಠ, ಆಹಾರ ಇಲಾಖೆಯ ಉಪ ನಿರ್ದೇಶಕ ವಿನಕುಮಾರ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬದ್ರುದ್ದಿನ ಸೌದಾಗರ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net