ಪ್ರಕಾಶ ರಾಠೋಡರನ್ನು ಸೋಲಿಸಲು ಪ್ರಯತ್ನಿಸಿದ್ದು ಯಾರು? ಕಾಂಪ್ರಮೈಸ್ ರಾಜಕಾರಣದ ಬಗ್ಗೆ ನಡಹಳ್ಳಿ ಮಾರ್ಮಿಕ ಮಾತು

ಹೊಂದಾಣಿಕೆ ರಾಜಕಾರಣ ಇರಬಹುದು * ನಡಹಳ್ಳಿ ಎಂದೂ ಕಾಂಪ್ರಮೈಸ್ ಮಾಡಿಕೊಂಡವನಲ್ಲ
ಪ್ರಕಾಶ ರಾಠೋಡರನ್ನು ಸೋಲಿಸಲು ಪ್ರಯತ್ನಿಸಿದ್ದು ಯಾರು? ಕಾಂಪ್ರಮೈಸ್ ರಾಜಕಾರಣದ ಬಗ್ಗೆ ನಡಹಳ್ಳಿ ಮಾರ್ಮಿಕ ಮಾತು
Published on: 

ವಿಜಯಪುರ: ‘ಪ್ರಕಾಶ ರಾಠೋಡ ಅವರನ್ನು ಸೋಲಿಸಬೇಕೆಂದು ಪ್ರಯತ್ನ ಪಟ್ಟವರು ಯಾರು ಮತ್ತು ಗೆಲ್ಲಿಸಬೇಕೆಂದು ಪ್ರಯತ್ನ ಪಟ್ಟವರು ಯಾರು’ ಎಂಬುದನ್ನು ಸ್ವತಃ ಪ್ರಕಾಶ ರಾಠೋಡ ಅವರನ್ನೇ ಕೇಳಿ ನೋಡಿ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಅಚ್ಚರಿಯ ಹೇಳಿಕೆ ಹೊರಹಾಕಿದ್ದಾರೆ.

‘ಪ್ರಕಾಶ ರಾಠೋಡ ಮೊದಲ ಬಾರಿ ಚುನಾವಣೆಗೆ ನಿಂತಿದ್ದರಲ್ಲ ಅವರಿಗೆ ಎ.ಎಸ್. ಪಾಟೀಲ ಎಷ್ಟು ಸಹಾಯ ಮಾಡಿದ್ದಾರೆ ಎಂಬುದನ್ನು ಕೇಳಿ ನೋಡಿ, ಅವರನ್ನು ಸೋಲಿಸಲು ಪ್ರಯತ್ನ ಪಟ್ಟರು ಮತ್ತು ಗೆಲ್ಲಿಸಲು ಯಾರು ಪ್ರಯತ್ನಿಸಿದರು’ ಎಂಬುದು ಗೊತ್ತಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಮಾರ್ಮಿಕವಾಗಿ ಉತ್ತರಿಸಿದರು.

ಇತ್ತೀಚೆಗೆ ಯಾಕೋ ಎಂ.ಬಿ. ಪಾಟೀಲರ ವಿಷಯದಲ್ಲಿ ಮೃದು ಧೋರಣೆ ತಾಳಿದ್ದೀರಿ ಎಂದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಅವರು, ‘ನಾನು ಯಾವುತ್ತು ಎಂ.ಬಿ. ಪಾಟೀಲರ ಜೊತೆ ಕಾಂಪ್ರಮೈಸ್ ಮಾಡಿಕೊಂಡಿಲ್ಲ, ಈ ಹಿಂದೆ ಮಾಧ್ಯಮದವರ ಮುಂದೆಯೇ ನನ್ನ ಮೇಲೆ ಅಟ್ಯಾಕ್ ಆಯಿತು, ಆ ಕೇಸ್ ಈಗಲೂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದ ನಡಹಳ್ಳಿ ‘ನಾನು ಯಾವತ್ತೂ ಸಚಿವ ಎಂ.ಬಿ. ಪಾಟೀಲರ ಮನೆ ಬಾಗಿಲಿಗೆ, ಕಚೇರಿಗೆ ಹೋಗಿಲ್ಲ, ಅವರ ಮೊಬೈಲ್ ನಂಬರ್ ಸಹ ನನ್ನ ಬಳಿ ಇಲ್ಲ’ ಎಂದರು.

‘ಈ ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣ ಇರಬಹುದು ಆದರೆ ನಾನೆಂದೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಈ ಹಿಂದೆ ನೀರಾವರಿ ವಿಷಯದಲ್ಲಿ ಎಂ.ಬಿ. ಪಾಟೀಲರಿಗೂ ನನಗೂ ಭಿನ್ನಾಭಿಪ್ರಾಯ ಉಂಟಾಗಿದ್ದು ನಿಜ. ಕಾಂಗ್ರೆಸ್‌ನಿಂದ ಹೊರಬಂದ ಮೇಲೆ ಸಿದ್ದರಾಮಯ್ಯ ಅವರ ಮನೆ ಬಾಗಲಿಗೂ ಹೋದವನಲ್ಲ ನಾನು’ ಎಂದರು.

‘ನಾನು ಯಾವ ಪಕ್ಷದಲ್ಲಿ ಇರುತ್ತೇನೋ ಆ ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ನ ಒಳಜಗಳದ ಲಾಭ ಪಡೆಯುವ ದರ್ದು ಏನಿದೆ ನನಗೆ? ಸೋಲು-ಗೆಲುವು ನಾಯಕರಿಂದ ನಿರ್ಧಾರ ಆಗಲ್ಲ, ಜನರು ತೀರ್ಮಾನ ಮಾಡಬೇಕು’ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net