ರೈತರಿಗೆ ಮಳೆ ಚಿಂತೆಯಾದರೆ ಕಾಂಗ್ರೆಸ್‌ಗೆ ಬಿಡದಿ ಚಿಂತೆ, ಸಂಸದ ರಮೇಶ ಜಿಗಜಿಣಗಿ ಚಾಟಿ ಏಟು

ಸಂಸದ ರಮೇಶ ಜಿಗಜಿಣಗಿ
ಸಂಸದ ರಮೇಶ ಜಿಗಜಿಣಗಿ
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ
  • ಅನ್ನದಾತನ ಅಳಲು ಆಲಿಸದ ಶಾಸಕರು
  • ಕೂಡಲೇ ಬರ ಪರಿಹಾರ ಘೋಷಿಸಲು ಒತ್ತಾಯ
ವಿಜಯಪುರ: ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು ರೈತರು ಮಳೆಯ ಚಿಂತೆಯಲ್ಲಿದ್ದರೆ ಕಾಂಗ್ರೆಸ್ ಸರ್ಕಾರದ ಬಿಡದಿ ಟೌನ್‌ಶಿಪ್ ಚಿಂತೆಯಲ್ಲಿದೆ ಎಂದು ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಲೇವಡಿ ಮಾಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ತೀವ್ರ ಕುಂಠಿತ ಕಂಡಿದೆ. ರಾಜ್ಯದ ಜಲಾಶಯಗಳೆಲ್ಲ ಬರಿದಾಗುತ್ತಿವೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಾಗುತ್ತಿರುವ ಮಳೆಯಿಂದಾಗಿ ಕೆಲವು ಜಲಾಶಯಗಳಿಗೆ ಇದೀಗ ನೀರು ಹರಿದು ಬರುತ್ತಿದೆಯಾದರೂ ಅನ್ನದಾತನ ಪಾಲಿಗೆ ಅದು ಇನ್ನೂ ಮರೀಚಿಕೆಯಾಗಿದೆ. ಕೇವಲ ಕುಡಿಯುವ ಉದ್ಧೇಶಕ್ಕಾಗಿ ಮಾತ್ರ ನೀರು ಬಳಸಲು ಸರ್ಕಾರ ಆದೇಶಿಸಿದ್ದರಿಂದ ಕೃಷಿಗೆ ಹನಿ ನೀರು ಇಲ್ಲದಾಗಿದೆ. ಹೀಗಾಗಿ ಬಿತ್ತಿದ ಬೀಜ ಮೊಳಕೆಯೊಡುವ ಮೊದಲೇ ಕಮರಿದ್ದು, ಅನ್ನದಾತರು ಕಂಗಾಲಾಗಿದ್ದಾರೆಂದು ಅವರು ಆತಂಕ ವ್ಯಕ್ತಪಡಿಸಿದರು.
ಈಗಾಗಲೇ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಮಳೆ ಪ್ರಮಾಣ ತೀವ್ರ ಕುಂಠಿತಗೊಂಡಿದೆ. ಹೀಗಾಗಿ ರೈತರು ಬರಘೋಷಣೆಗೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದಾರೆ. ಇನ್ನೊಂದೆರೆ ಪರಿಹಾರ ಘೋಷಿಸಲು ಒತ್ತಾಯಿಸುತ್ತಿದ್ದಾರೆ. ಇಂಥ ಸಂದಿಗ್ದ ಪರಿಸ್ಥಿತಿಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಬೇಕಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇನ್ನೂ ಬಿಡದಿ ಗುಂಗಿನಿಂದ ಹೊರಬಂದಿಲ್ಲ. ಇನ್ನೊಂದೆಡೆ ಸಚಿವ ಸಂಪುಟದ ತಲೆನೋವಿನಿಂದಾಗಿ ಉಸಿರಾಡಲೂ ಆಗದೆ, ಕೊಸರಾಡಲೂ ಆಗದೆ ಚಡಪಡಿಸುತ್ತಿದ್ದಾರೆ. ಜನರಲ ಅಳಲು ಕೇಳಬೇಕಿದ್ದ ಶಾಸಕರು ಸಚಿವ ಸಂಪುಟದ ಲಾಬಿಯಲ್ಲಿ ತಲ್ಲೀನರಾಗಿದ್ದಾರೆ. ಹೀಗಾಗಿ ಜನ ಶಾಪ ಹಾಕದೇ ಬೇರೆ ದಾರಿಯಿಲ್ಲದಂತಾಗಿದೆ ಎಂದು ಜಿಗಜಿಣಗಿ ಹರಿಹಾಯ್ದಿದ್ದಾರೆ.
ಈಗಾಗಲೇ ಬಿಡದಿಯಲ್ಲಿ ರೈತರು ಸರ್ಕಾರಕ್ಕೆ ಪೊರಕೆ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಶಾಸಕರು ಮತ್ತು ಸಚಿವರಿಗೆ ೇರಾವ್ ಹಾಕಲು ಮುಂದಾಗಿದ್ದಾರೆ. ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ರೈತರ ಸಮಸ್ಯೆ ಆಲಿಸಬೇಕು. ಇಲ್ಲವಾದಲ್ಲಿ ಕಂಡ ಕಂಡಲ್ಲಿ ಜನ ಪೊರಕೆ ಸೇವೆ ಸಲ್ಲಿಸುವುದರಲ್ಲಿ ಅನುಮಾನವೇ ಇಲ್ಲವೆಂದು ಎಚ್ಚರಿಸಿದ್ದಾರೆ.

ಪಾಠ ಕಲಿಸೋದು ‘ಗ್ಯಾರಂಟಿ’

ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗುತ್ತಿದ್ದಂತೆ ಪರಿಷ್ಕರಣೆ ನೆಪದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಬ್ರೇಕ್ ಹಾಕುವ ಹುನ್ನಾರ ನಡೆದಿದೆ. ಪರಿಷ್ಕರಣೆ ಹೆಸರಲ್ಲಿ ಅನೇಕ ಫಲಾನುಭವಿಗಳು ಗ್ಯಾರಂಟಿ ಯೋಜನೆಯಿಂದ ವಂಚಿತರಾಗಲಿದ್ದಾರೆ. ಪಡಿತರ ಪಡೆಯಲು ಜಾತಿ ಪ್ರಮಾಣ ಪತ್ರ ಕೇಳುವ ಈ ಸರ್ಕಾರಕ್ಕೆ ನಾಚಿಕೆಯಾಗುವುದಿಲ್ಲವೇ? ಜಾತಿ ನೋಡಿ ಪಡಿತರ ನೀಡಲಾಗುತ್ತದೆಯೇ? ಬುದ್ದಿ ಇದೆಯೇ ಈ ಸರ್ಕಾರಕ್ಕೆ? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಜಿಗಜಿಣಗಿ ಅವರು, ಗ್ಯಾರಂಟಿ ಯೋಜನೆಗಳನ್ನು ಯಥಾವತ್ತಾಗಿ ಜಾರಿಗೊಳಿಸುವುದರ ಜೊತೆಗೆ ಗ್ಯಾರಂಟಿಯೇತರ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ರಸ್ತೆ ಅಭಿವೃದ್ಧಿ, ಶಿಥಿಲಾವಸ್ಥೆಯಲ್ಲಿರುವ ಶಾಲೆ ಕಟ್ಟಡಗಳ ನಿರ್ಮಾಣ ಸೇರಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net