ಮೋದಿ ಅಚ್ಛೇ ದಿನದಲ್ಲಿ ಏನಾಗಬೇಕೋ ಅದಾಗುತ್ತಿದೆ ! ಸಚಿವ ಎಂ.ಬಿ.ಪಾಟೀಲ ತೀಕ್ಷ್ಣ ಪ್ರತಿಕ್ರಿಯೆ

ಸಚಿವ ಡಾ.ಎಂ.ಬಿ. ಪಾಟೀಲ
ಸಚಿವ ಡಾ.ಎಂ.ಬಿ. ಪಾಟೀಲ
Published on

ಪ್ರಮುಖ ಮುಖ್ಯಾಂಶಗಳು

  • ಅಂಧಭಕ್ತರಿಗೆ ಇನ್ನೂ ಅರ್ಥವಾಗಿಲ್ಲ
  • ಮಾಧ್ಯಮಗಳ ಮಾಲೀಕರೂ ಹೈಜಾಕ್
  • ವಿದೇಶಾಂಗ ನೀತಿ ಸಂಪೂರ್ಣ ವಿಫಲ
  • ದೇಶದ ಆರ್ಥಿಕತೆ ಅಧೋಗತಿಗೆ
ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಛೇ ದಿನದಲ್ಲಿ ಏನೆಲ್ಲ ಆಗಬೇಕೋ ಅದೆಲ್ಲವೂ ಆಗುತ್ತಿದೆ. ಕರೋನಾ ಸಮಯದಲ್ಲಿ ಔಷಧ ಕೊಡೋದನ್ನು ಬಿಟ್ಟು ತಮಟೆ ಹೊಡೆಯಿರಿ ಎಂದರು, ಇದೀಗ ದೇಶದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿಯುತ್ತಿದ್ದಂತೆ ಸೈಕಲ್ ಮೇಲೆ ಹೋಗಿ, ಗಾಡಿ ಬಳಸಬೇಡಿ ಎನ್ನುತ್ತಿದ್ದಾರೆ. ಆದರೂ ಮೋದಿಯ ಅಂಧಭಕ್ತರಿಗೆ ಇನ್ನೂ ಅರ್ಥವಾಗುತ್ತಿಲ್ಲವೆಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಲೇವಡಿ ಮಾಡಿದರು.
ದೇಶದ ಆರ್ಥಿಕತೆ ಅಧೋಗತಿಗೆ ಇಳಿದಿದೆ. ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಹೇಗಿತ್ತು? ಈಗ ಹೇಗಿದೆ ಎಂಬುದನ್ನು ಅವಲೋಕಿಸಿ. ಡಾಲರ್, ಪೆಟ್ರೋಲ್, ಡಿಸೇಲ್ ದರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ ವಿಡಿಯೋಗಳೇ ಇಂದು ಸಾಮಾಜಿಕ ಜಾಲತಾಣದಲ್ಲಿ ತಿರುಗಿಬೀಳುತ್ತಿದೆ. ಕಾಲಚಕ್ರ ಉರುಳುತ್ತಿದೆ. ಮೋದಿ ಆಡಿದ ಮಾತುಗಳೇ ವಾಪಸ್ ತಮಗೇ ಅನ್ವಯವಾಗುತ್ತಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿರುಗೇಟು ನೀಡಿದರು.
ಕೆಲವು ಮಾಧ್ಯಮಗಳ ಮಾಲೀಕರನ್ನೂ ಮೋದಿ ಸರ್ಕಾರ ಹೈಜಾಕ್ ಮಾಡಿದೆ. ನೀವೂ ಅಂಧಭಕ್ತರಂತೆ ಮಾತನಾಡುತ್ತಿದ್ದೀರಿ ಎಂದು ಸುದ್ದಿಗಾರರ ಕಾಲೆಳೆದ ಎಂ.ಬಿ. ಪಾಟೀಲರು, ಅಚ್ಛೇ ದಿನ್ ಬಂದಿತಾ? ರೈತರ ಆದಾಯ ದ್ವಿಗುಣ ಮಾಡುತ್ತೇವೆ, ಗ್ಯಾಸ್ ರೇಟ್ ಕಡಿಮೆ ಮಾಡುತ್ತೇವೆ ಎಂದಿದ್ದ ಮೋದಿ ಭಾಷಣ ಸಾಮಾಜಿಕ ಜಾಲತಾಣದಲ್ಲಿ ಈಗಲೂ ವೈರಲ್ ಆಗುತ್ತಿದೆ ನೋಡಿ ಎಂದರು.
ಮೋದಿ ವಿದೇಶಾಂಗ ನೀತಿ ವಿಫಲವಾಗಿದೆ. ಈ ಹಿಂದೆ ವಾಜಪೇಯಿ ಸಹ ನಮ್ಮ ವಿದೇಶಾಂಗ ನೀತಿಯನ್ನೇ ಮುಂದುವರಿಸಿಕೊಂಡು ಹೋಗಿದ್ದರು. ಅದು ಪ್ಯಾಲೆಸ್ತೇನ್, ಇರಾನ್ ಅಥವಾ ಬೇರೆ ಯಾವುದೇ ವಿಚಾರದಲ್ಲಾಗಿರಬಹುದು. ಆದರೆ, ಇಂದಿನ ಕೇಂದ್ರ ಸರ್ಕಾರದ ಧೋರಣೆಯಿಂದಾಗಿ ತಲೆತಗ್ಗಿಸುವಂತಾಗಿದೆ. ಇಸ್ರೇಲ್ ನಮ್ಮ ಫಾದರ್ ನೇಶನ್-ಇಂಡಿಯಾ ಮದರ್ ನೇಶನ್ ಎಂದ್ದಿದ್ದು ಎಲ್ಲವೂ ತಿರುಗಿ ಬೀಳುತ್ತಿದೆ.
ಭ್ರಷ್ಟಾಚಾರ ತಡೆಯುವ ಕುರಿತು ಮಾತನಾಡಿದ ಮೋದಿ ಸಂಪುಟದಲ್ಲಿ ಈಗ ಯಾರಿದ್ದಾರೆ? ಕ್ರಿಮಿನಲ್ಸ್‌ಗೆಳೆಲ್ಲ ಸಚ್ಛಾರಿತ್ರೃರಾಗುತ್ತಿದ್ದಾರೆ. ಬಿಜೆಪಿಯ ವಾಷಿಂಗ್ ಮಶೀನ್‌ನಲ್ಲಿ ಸ್ವಚ್ಛವಾಗುತ್ತಿದ್ದಾರೆ ಎಂದು ಕಿಚಾಯಿಸಿದರು.
ಇನ್ನು ಹಿಜಾಬ್-ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುತ್ತಾ, ನಮ್ಮ ಸರ್ಕಾರ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುತ್ತದೆ. ಹಿಜಾಬ್, ಜನಿವಾರ, ಲಿಂಗಕ್ಕೂ ಇದು ಅನ್ವಯವಾಗುತ್ತದೆ. ಸಿಖ್ಕರಿಗೆ ಪೇಟ ಹಾಕಿಕೊಳ್ಳಲೂ ಅವಕಾಶ ಕಲ್ಪಿಸಿದ್ದೇವೆ. ಎಲ್ಲ ಧರ್ಮ ಜಾತಿ ಜನಾಂಗಕ್ಕೂ ಅವಕಾಶ ಕೊಟ್ಟಿದ್ದೇವೆ ಎಂದರು.
ಹಾಗಾದರೆ, ಶಾಲಾ ಮಕ್ಕಳು ಕೇಸರಿ ಶಾಲು ಧರಿಸಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಈ ಹಿಂದೆ ಶಾಲೆ ಮಕ್ಕಳು ಯಾರಾದರೂ ಕೇಸರಿ ಧರಿಸುತ್ತಿದ್ದರಾ? ಗುಡಿ, ಗುಂಡಾರ ಮೇಲೆ ಕೇಸರಿ ಇರುತ್ತಿತ್ತು. ಪೂಜೆ ವೇಳೆ ಕೇಸರಿ ಶಾಲು ಧರಿಸುತ್ತಿದ್ದರು. ಬಿಜೆಪಿಯದ್ದು ಭಂಡ ನ್ಯಾಯ ಎಂದರಲ್ಲದೇ ವಿಭೂತಿ, ಕುಂಕುಮ ಹಚ್ಚಿಕೊಂಡು ಹೋಗಲು ಯಾರದ್ದಾದರೂ ತಕರಾರು ಇದೆಯಾ? ಎಂದರು.
ಶಾಸಕ ಯತ್ನಾಳ ಹೊಸ ಪಕ್ಷ ಕಟ್ಟುವ ವಿಚಾರ ಕುರಿತು ತೀವ್ರವಾಗಿ ಲೇವಡಿ ಮಾಡಿದ ಎಂ.ಬಿ. ಪಾಟೀಲರು, ಯತ್ನಾಳ ಹೊಸ ಪಕ್ಷ ಕಟ್ಟಲ್ಲ. ಬಿಜೆಪಿಯನ್ನು ಬ್ಯ್ಲಾಕ್ ಮೇಲ್ ಮಾಡುತ್ತಿದ್ದಾರಷ್ಟೆ. ಹೇಗಾದರೂ ಮಾಡಿ ಪಕ್ಷಕ್ಕೆ ತೆಗೆದುಕೊಳ್ಳಲಿ ಎಂದು ಹಾಗೆ ಹೇಳುತ್ತಿದ್ದಾರೆ. ಹಾಗೊಂದು ವೇಳೆ ಹೊಸ ಪಕ್ಷ ಕಟ್ಟಿದರೆ ಅದಕ್ಕೆ ನಮ್ಮ ಬೆಂಬಲ ಇದೆ. ತಾಕತ್ ಇದ್ದರೆ ಮಾಡಲಿ, ಹಾಗೆ ಮಾಡಿದರೆ ಖಂಡಿತ ಇವರೂ ಸಿಎಂ ಆಗುತ್ತಾರೆ ಎಂದು ನಗೆ ಬೀರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net