ವಿಜಯಪುರ: ಬೃಹತ್ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಸಚಿವ ಡಾ.ಎಂ.ಬಿ. ಪಾಟೀಲ ಹಾಗೂ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರ ವಾಕ್ಸಮರ ತಾರಕಕ್ಕೇರಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ವಿಧಾನ ಸಭೆ ಚುನಾವಣೆ ಮುಂದಿಟ್ಟುಕೊಂಡು ಉಭಯ ನಾಯಕರು ನಡೆಸಿರುವ ವಾಗ್ದಾಳಿ, ಏಟಿಗೆ-ಎದಿರೇಟು, ತೀಕ್ಷ್ಣ ಪ್ರತಿಕ್ರಿಯೆ ಹಾಗೂ ಸವಾಲುಗಳು ಹೊಸ ಚರ್ಚೆ ಮತ್ತು ವಿಶ್ಲೇಷಣೆಗಳಿಗೆ ಮುನ್ನುಡಿ ಬರೆದಿದೆ. ಹಿಂದೂತ್ವ, ಮುಸ್ಲಿಂರ ಓಲೈಕೆ, ಹಾಲುಮತ ಸಮಾಜದ ಮತ ಸೆಳೆತದ ಅಂಶಗಳೇ ಚರ್ಚೆಯ ಪ್ರಮುಖ ವಿಷಯಗಳಾಗಿವೆ.
ಸೋಮವಾರ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಔಪಚಾರಿಕೆವಾಗಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲರು, ‘ಯತ್ನಾಳರ ಹಿಂದೂತ್ವ ಕೇವಲ ರಾಜಕೀಯಕ್ಕಾಗಿ, ಈ ಹಿಂದೆ ಇದೇ ಯತ್ನಾಳರು ಮುಸ್ಲಿಂ ಟೋಪಿ ಹಾಕಿ ನಮಾಜ್ ಮಾಡಿದ್ದು ಯಾರಿಗೆ ಗೊತ್ತಿಲ್ಲ ಹೇಳಿ..’ ಎಂದು ಪ್ರಶ್ನಿಸಿದ್ದರು.
ಮುಂದುವರಿದು, ‘ಈ ಯತ್ನಾಳರಿಗೆ ಸ್ವತಂತ್ರವಾಗಿ ಎಂಎಲ್‌ಸಿ ಮಾಡಿದ್ದೇ ನಾವು. ಈ ಹಿಂದೆ ಬಿಜೆಪಿಯನ್ನು ಸೋಲಿಸಲು ಜಿಲ್ಲೆಯ ಸ್ವಾಭಿಮಾನ ಇಟ್ಟುಕೊಂಡು ಯತ್ನಾಳರನ್ನು ಗೆಲ್ಲಿಸಲಾಯಿತು ಅಲ್ಲದೇ ಬಿಜೆಪಿಯನ್ನು ಸೋಲಿಸುವುದು ನಮ್ಮ ಫಿಲಾಸಫಿಯಾಗಿತ್ತು. ಎಂಎಲ್‌ಸಿ ಆದ ಬಳಿಕ ಯಡಿಯೂರಪ್ಪನವರ ಜೊತೆಗೆ ಬಿಜೆಪಿಗೆ ಹೋದರು. ಇದೀಗ ಅವರನ್ನೇ ಬೈಯ್ಯುತ್ತಿದ್ದಾರೆ’ ಎಂದು ಕಿಚಾಯಿಸಿದರು.
‘ಕೇಸರಿ ಧ್ವಜ ಹಾರಿಸುತ್ತೇನೆನ್ನುವ ಯತ್ನಾಳರು ಮೊದಲು ಭಾರತದ ಧ್ವಜ ಹಾರಿಸಲಿ. ಜೆಸಿಬಿ ಪಾರ್ಟಿ ಮಾಡುತ್ತೇನೆನ್ನುವುದು ಕೇವಲ ಬ್ಲಾಕ್ ಮೇಲ್. ತಾಕತ್ತಿದ್ದರೆ ಜೆಸಿಬಿಯಿಂದ ನಿಲ್ಲಲಿ. ಬಿಜೆಪಿಗೆ ಹೋಗಲ್ಲ ಎಂದು ಹೇಳಲಿ ನೋಡೋಣ’ ಎಂದ ಎಂ.ಬಿ. ಪಾಟೀಲರು, ‘ಕೇವಲ ವಿಜಯಪುರ ನಗರದ ಟಿಕೆಟ್ ಕೊಡಲಿ ಎಂಬುದೇ ಇವರ ಉದ್ದೇಶ. ಮುಂದಿನ ಚುನಾವಣೆಯಲ್ಲಿ ಮೊದಲು ವಿಜಯಪುರ ನಗರ ಕ್ಷೇತ್ರದ ವಿಜಯ ಪತಾಕೆ ಹಾರಿಸುತ್ತೇವೆ. ನನ್ನ ಕ್ಷೇತ್ರ ಏನಾದರೂ ಆಗಲಿ. ಮೊದಲು ವಿಜಯಪುರ ಹಾಗೂ ದೇ.ಹಿಪ್ಪರಗಿ ಗೆಲ್ಲುತ್ತೇವೆ. ಇನ್ನುಳಿದ ಕ್ಷೇತ್ರಗಳಂತೂ ನಮ್ಮ ವಶದಲ್ಲೇ ಇವೆ’ ಎಂದಿದ್ದರು.
ಶಾಸಕ ಯತ್ನಾಳ ತಿರುಗೇಟು
ಸಚಿವ ಎಂ.ಬಿ. ಪಾಟೀಲರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಯತ್ನಾಳರು, ‘ನಾನು ಸಿದ್ದರಾಮಯ್ಯಗೆ ದ್ರೋಹ ಮಾಡಿಲ್ಲವೆಂದು ಹೇಳಿದ್ದರೆ ಮುಗೀತಿತ್ತು. ಅದನ್ನು ಬಿಟ್ಟು ಟೊಪ್ಪಿಗೆ, ನಮಾಜ್ ಮಾತನಾಡೋದೇಕೆ? ಅದರ ಬದಲು ಸಿದ್ದರಾಮಯ್ಯ ಅವರಿಗೆ ನಾನು ದ್ರೋಹ ಮಾಡಿಲ್ಲವೆಂದು ಮನಃಸಾಕ್ಷಿಯಾಗಿ ಹೇಳಿದರೆ ಮುಗೀತು. ಸಿದ್ದರಾಮಯ್ಯ ಆಗ ಬೇಕಾಗಿದ್ದರಿಂದ ಅವರು ‘ನಾಯಕರು’ ಆಗಿದ್ದರು. ಬೇಡವಾದಾಗ ‘ನಾಯಿಕರು’ ಆಗುತ್ತಾರೆ. ಪಾಪ ಸಿದ್ದರಾಮಯ್ಯ ಈಗ ಹಿಂದೆ ಒಬ್ಬರೇ ಕೂತಿರುತ್ತಾರೆ. ಈ ಹಿಂದೆ ಸಿದ್ದರಾಮಯ್ಯ ಅವರಿಂದಾಗಿ ಹಾಲುಮತದ ಓಟುಗಳು ಕಾಂಗ್ರೆಸ್‌ಗೆ ಹೋಗುತ್ತಿದ್ದವು. ಈಗ ಅವರು ಸಹ ಕೈ ಬಿಟ್ಟಿದ್ದಾರೆ’ ಎಂದರು.
‘ನಾನು ಟೊಪ್ಪಿಗೆ ಹಾಕಿಕೊಂಡಿದ್ದು ನಿಜ. ಆ ಪಶ್ಚಾತಾಪಕ್ಕೆ ತಲೆ ಬೋಳಿಸಿಕೊಂಡು, ಗಂಗಾ ನದಿ ನೀರು ತಲೆ ಮೇಲೆ ಹಾಕಿಕೊಂಡಿದ್ದೇನೆ. ಇನ್ನೆಂದೂ ಆ ಕೆಲಸ ಮಾಡಲ್ಲ. ಅದನ್ನೇ ಪದೇ ಪದೇ ಎಷ್ಟು ಸಲ ಹೇಳುತ್ತೀರಿ’ ಎಂದು ಯತ್ನಾಳ ತಿವಿದರು.
‘ಜೆಸಿಬಿ ಪಕ್ಷ ಮಾಡಿದರೆ 130 ಸೀಟ್ ಬರುತ್ತವೆ. ಬರೆದಿಟ್ಟುಕೊಳ್ಳಿ’ ಎಂದರಲ್ಲದೇ ‘ಯಡಿಯೂರಪ್ಪ-ವಿಜಯೇಂದ್ರಗೆ ರೊಕ್ಕ ಕೊಟ್ಟು ವೀಕ್ ಕ್ಯಾಂಡಿಡೇಟ್ ಹಾಕಿಕೊಂಡುಬಂದು ಎಂ.ಬಿ. ಪಾಟೀಲ ಗೆಲ್ಲುತ್ತಾರೆ’ ಎಂದು ಗಂಭೀರ ಆರೋಪ ಮಾಡಿದರು.