

ವಿಜಯಪುರ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಬ್ಯಾಂಕ್ ದರೋಡೆ ಪ್ರಕರಣಗಳು, ಭೀಕರ ಹತ್ಯೆ, ಚಡ್ಡಿಗ್ಯಾಂಗ್ ಹಾವಳಿಯಂತ ಪ್ರಮುಖ ಪ್ರಕರಣಗಳನ್ನು ಭೇದಿಸಿ ಭೇಷ್ ಎನ್ನಿಸಿಕೊಂಡಿದ್ದ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ವರ್ಗಾವಣೆಗೊಂಡಿದ್ದಾರೆ.
ರಾಜ್ಯ ಸರ್ಕಾರ ಬುಧವಾರ ಹಲವು ಹಿರಿಯ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದು ಅದರಲ್ಲಿ ಲಕ್ಷ್ಮಣ ನಿಂಬರಗಿ ಸಹ ಒಬ್ಬರು. ಇವರನ್ನು ಬೆಂಗಳೂರು ನಗರದ ಕೇಂದ್ರದ ಸಿಟಿ ಆರ್ಮ್ಡ್ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಮೂಲತಃ ವಿಜಯಪುರ ಜಿಲ್ಲೆಯವರೇ ಆಗಿದ್ದ ಲಕ್ಷ್ಮಣ ನಿಂಬರಗಿ ಅವರು ಯುವಕರ ಪ್ರೇರಣೆಯಾಗಿದ್ದರಲ್ಲದೇ ಕಳ್ಳಕಾಕರಿಗೆ, ರೌಡಿಶೀಟರ್ಗಳಿಗೆ ಸಿಂಹಸ್ವಪ್ನವಾಗಿದ್ದರು. ಸುಮಾರು ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿದ್ದ ಲಕ್ಷ್ಮಣ ನಿಂಬರಗಿ ಅವರಿಂದಾಗಿ ಕಾನೂನು ಸುವ್ಯವಸ್ಥೆಯನ್ನು ತಹಬದಿಗೆ ತರಲಾಗಿತ್ತು. ಇಲಾಖೆಯ ಆಡಳಿತಾತ್ಮಕ ಸುಧಾರಣೆಗೂ ಆದ್ಯತೆ ನೀಡಲಾಗಿತ್ತು. ಇತ್ತೀಚೆಗಷ್ಟೇ ಪೊಲೀಸ್ ಐಟಿ ಡ್ಯಾಶ್ಬೋರ್ಡ್ನ ಮಾಸಿಕ ಕಾರ್ಯಕ್ಷಮತೆ ಮೌಲ್ಯಮಾಪನದಲ್ಲಿ ವಿಜಯಪುರ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವಂತೆ ಮಾಡಿದ್ದರು. ‘ವೆರಿಗುಡ್’ ಎಂಬ ಶ್ರೇಯಾಂಕ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದರು.
ಮಾತ್ರವಲ್ಲ, ಮನಗೂಳಿ ಬ್ಯಾಂಕ್ ಕಳ್ಳತನ ಪ್ರಕರಣ, ಚಡಚಣದ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ, ಚಿನ್ನದ ಅಂಗಡಿಯಲ್ಲಿನ ದಾಳಿ ಪ್ರಕರಣ ಭೇದಿಸಿ ಸಾರ್ವಜನಿಕರಿಂದ ಭೇಷ್ ಎನ್ನಿಸಿಕೊಂಡಿದ್ದರು. ಚೆಡ್ಡಿ ಗ್ಯಾಂಗ್ ಹಾವಳಿ ಮಟ್ಟಹಾಕಿದ್ದು, ರೌಡಿಶೀಟರ್ಗಳನ್ನು ಗಡಿಪಾರು ಮಾಡಿದ್ದು, ಭೂಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಳಿಸಿ ಚಾರ್ಜ್ಶೀಟ್ ಸಲ್ಲಿಸಿ ಭೂಮಿ ಮರಳಿ ಕೊಡಿಸಿದ್ದು ಲಕ್ಷ್ಮಣ ನಿಂಬರಗಿ ಅವರ ಮೇಲಿನ ಅಭಿಮಾನ ಇಮ್ಮಡಿಸುವಂತೆ ಮಾಡಿತ್ತು.
ಎಲ್ಲಕ್ಕಿಂತ ಹೆಚ್ಚಾಗಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸಲು ಲಕ್ಷ್ಮಣ ನಿಂಬರಗಿ ಸಾಕಷ್ಟು ಶ್ರಮಿಸಿದ್ದರು. ಅದಕ್ಕಾಗಿ ಎಐ ತಂತ್ರಜ್ಞಾನ ಆಧಾರಿತ ಸಿಗ್ನಲ್ ವ್ಯವಸ್ಥೆ ಜಾರಿಗೊಳಿಸಿದ್ದು, ಕಾಮಗಾರಿ ಪ್ರಗತಿಯಲ್ಲಿರುವಾಗಲೇ ವರ್ಗಾವಣೆಗೊಂಡಿರುವುದು ಸಾರ್ವಜನಿಕರ ಅತೃಪ್ತಿ ಮತ್ತು ಅಸಮಾಧಾನಕ್ಕೆ ಕಾರಣವಾಯಿತು. ಅಕ್ರಮ ಶಸ್ತ್ರಾಸ್ತ್ರಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿದ್ದ ಲಕ್ಷ್ಮಣ ನಿಂಬರಗಿ ಅವರ ಸೇವೆ ಸ್ಮರಣೀಯ.