ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತರ ಡೀರ ಭೇಟಿ
ಸಮುದಾಯ ಆರೋಗ್ಯ ಕೇಂದ್ರದ ದಂತ ಕೋಣೆಯ ದಾಖಲಾತಿ ಹಾಗೂ ಉಪಕರಣಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸುತ್ತಿರುವುದು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಮುದಾಯ ಆರೋಗ್ಯ ಕೇಂದ್ರ
ಅಧಿಕಾರಿಗಳು ಧಿಡೀರ ಭೇಟಿ
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ವಿಜಯಪುರದ ಲೋಕಾಯುಕ್ತ ಅಧಿಕಾರಿಗಳು ಧಿಡೀರ ಭೇಟಿ ನೀಡಿ, ವಿವಿಧ ಕಡತ ಹಾಗೂ ಎಲ್ಲ ವಿಭಾಗಗಳನ್ನು ಪರಶೀಲಿಸಿದರು.
ಆಸ್ಪತ್ರೆಯ ಎಕ್ಸರೇ, ಹೆರಿಗೆ ಕೋಣೆ, ಶಸ್ತ್ರ ಚಿಕಿತ್ಸೆ ಘಟಕ, ದಂತ ಹಾಗೂ ನೇತ್ರ ತಪಾಸಣೆ, ಲ್ಯಾಬರೋಟರಿ, ಡಯಾಲಿಸಿಸ್ ಕೋಣೆ ಹಾಗೂ ಇನ್ನಿತರ ವಿಭಾಗಗಳ ಎಲ್ಲ ಕೋಣೆಗಳ ಮೂಲೆ ಮೂಲೆಯನ್ನು ಜಾಲಾಡಿದರು.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರೈತರು ಪ್ರತಿಭಟನೆ ನಡೆಸಿ, ಪಟ್ಟಣದಲ್ಲಿ ಇರುವ ತಾಲೂಕಾ ಸಮುದಾಯ ಕೇಂದ್ರದಲ್ಲಿನ ವೈದ್ಯರು ರೈತರಿಗೆ ಹಾಗೂ ಸಾರ್ವಜನಿಕರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಒಂದು ವೇಳೆ ಚಿಕಿತ್ಸೆ ನೀಡಿದರೂ ಔಷಧಿಗಳನ್ನು ಹೊರಗಿನಿಂದ ತರಬೇಕು ಎಂದು ನಿರ್ದಾಕ್ಷಿಣ್ಯವಾಗಿ ಹೇಳುತ್ತಾರೆ ಎಂದು ಆರೋಪಿಸಿ, ತಹಸೀಲ್ದಾರ ಅವರಿಗೆ ಮನವಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಲೋಕಾಯುಕ್ತ ಭೇಟಿ ವೇಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲವು ಅವಧಿ ಮೀರಿದ ಔಷಧಿಗಳು ಅವರ ಗಮನಕ್ಕೆ ಬಂದಿದ್ದು, ಇಂತಹ ಔಷಧಿಗಳನ್ನು ರೋಗಿಗಳಿಗೆ ನೀಡಿದರೇ ಹೇಗೆ ಎಂದು ಆಸ್ಪತ್ರೆಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಆಸ್ಪತ್ರೆಯಲ್ಲಿ ಟ್ಯೂಬಲೈಟ್‌ಗಳು ಜೋತು ಬಿದ್ದಿದ್ದು ಹಾಗೂ ಗೋಡೆ, ಮೇಲ್ಛಾವಣಿ ಬಿರುಕು ಬಿಟ್ಟಿರುವುದನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ಇವುಗಳನ್ನು ಬೇಗನೆ ಸರಿಪಡಿಸಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಎಚ್ಚರಿಸಿದರು.
ಆಸ್ಪತ್ರೆಯ ಕಟ್ಟಡದ ಮುಂಭಾಗದಲ್ಲಿ ಎಲೆ, ಗುಟಕಾ ತಿಂದು ಉಗಳಿದ್ದರಿಂದ ಆಸ್ಪತ್ರೆಯ ಆವರಣ ಶುಚಿಯಾಗಿರದೇ ಗಲೀಜಾಗಿರುವುದನ್ನು ನೋಡಿ, ಮುಂದೆ ಆಸ್ಪತ್ರೆಯ ಆವರಣ ಹಾಗೂ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದರು. ಭೇಟಿ ವೇಳೆ ಲೋಕಾಯುಕ್ತ ಅಧಿಕಾರಿ ಆನಂದ ಸೇರಿ ಸಿಬ್ಬಂದಿಗಳು ಇದ್ದರು.
ಮಾದ್ಯಮದವರಿಗೆ ಯಾವುದೇ ಸರಿಯಾದ ಮಾಹಿತಿ ನೀಡದೇ ತೆರಳಿದ ಲೋಕಾಯುಕ್ತ ಅಧಿಕಾರಿಗಳು, ಮಾದ್ಯಮದವರು ಲೋಕಾಯುಕ್ತ ಅಧಿಕಾರಿಗಳಿಗೆ ಭೇಟಿಯ ಉದ್ದೇಶ ಹಾಗೂ ಪರಿಶೀಲಿಸಿದ ದಾಖಲೆಗಳ ಕುರಿತು ವಿಚಾರಿಸಿದಾಗ ಅಧಿಕಾರಿಗಳು ಯಾವುದೇ ಸರಿಯಾದ ಮಾಹಿತಿ ನೀಡದೇ ಕೇವಲ ಮೇಲಾಧಿಕಾರಿಗಳ ಆದೇಶದ ಮೇಲೆ ಭೇಟಿ ನೀಡಿದ್ದೇವೆ ಎಂದು ಹಾರಿಕೆ ಉತ್ತರ ನೀಡಿ ಅಲ್ಲಿಂದ ತೆರಳಿದರು.