ವಿಬಿಜಿ ರಾಮ್ ಜಿ ಕಾಮಗಾರಿ ಪರಿಶೀಲನೆ, ಸಂಚಲನ ಸೃಷ್ಠಿಸಿದ ಸಂಸದರ ಸಂವಾದ

ವಿಜಯಪುರ ತಾಲೂಕಿನ ಹಳ್ಳಿಯೊಂದರಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಮುಖಂಡರಾದ ಸಂಜೀವ ಐಹೊಳಿ, ಮಳುಗೌಡ ಪಾಟೀಲ, ಅಧಿಕಾರಿ ಪ್ರಕಾಶ ವಡ್ಡರ್ ಮತ್ತಿತರರಿದ್ದಾರೆ.
ವಿಜಯಪುರ ತಾಲೂಕಿನ ಹಳ್ಳಿಯೊಂದರಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ ಸಂಸದ ರಮೇಶ ಜಿಗಜಿಣಗಿ ಮಾತನಾಡಿದರು. ಮುಖಂಡರಾದ ಸಂಜೀವ ಐಹೊಳಿ, ಮಳುಗೌಡ ಪಾಟೀಲ, ಅಧಿಕಾರಿ ಪ್ರಕಾಶ ವಡ್ಡರ್ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಕೂಲಿಕಾರರಿಗೆ ಯೋಜನೆ ಕುರಿತು ಜಾಗೃತಿ
  • ಸಂತಸ ಹಂಚಿಕೊಂಡ ಗ್ರಾಮೀಣರು
  • ಪ್ರಧಾನಿ ಮೋದಿ ಸಾಧನೆ ವಿವರಿಸಿದ ರಮೇಶ ಜಿಗಜಿಣಗಿ
ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ವಿಬಿಜಿ ರಾಮ್ ಜಿ’ ಯೋಜನೆ ಅನುಷ್ಟಾನಕ್ಕೆ ಸಂಬಂಧಿಸಿದಂತೆ ವಿಜಯಪುರ ತಾಲೂಕು ಹಾಗೂ ನಾಗಠಾಣ ಕ್ಷೇತ್ರದ ಹಳ್ಳಿಗಳ್ಳಲ್ಲಿ ಜಾಗೃತಿ ಮೂಡಿಸುವ ಮೂಲಕ ಮತ್ತು ಕಾಮಗಾರಿ ಪರಿಶೀಲಿಸಿ ಕೂಲಿಕಾರರೊಂದಿಗೆ ಸಂವಾದ ನಡೆಸುವ ಮೂಲಕ ಸಂಸದ ರಮೇಶ ಜಿಗಜಿಣಗಿ ಸಂಚಲನ ಸೃಷ್ಠಿಸಿದರು.
ವಿಜಯಪುರ ತಾಲೂಕಿನ ನಾಗಠಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಣಶ್ಯಾಳ ಗ್ರಾಮದ ಕೆರೆ, ಹಡಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಹಾಗೂ ನಾಗಠಾಣ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಣಶ್ಯಾಳ ಕೆರೆ ಮತ್ತು ಹಡಗಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿಬಿಜಿ ರಾಮ್ ಜಿ ಯೋಜನೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಕೂಲಿಕಾರರೊಂದಿಗೆ ಅವರು ಸಂವಾದ ನಡೆಸಿದರು.
‘ಕೂಲಿಕಾರರ ಹಿತರಕ್ಷಣೆಯ ದೃಷ್ಟಿಯಿಂದ ಅವರು ದುಡಿದ ಹಣ ನೇರವಾಗಿ ತಲುಪಲಿ ಎಂದು ಪಾರದರ್ಶಕ ವ್ಯವಸ್ಥೆಯನ್ನು ಪ್ರಧಾನಿ ಮೋದಿ ಅವರು ರೂಪಿಸಿದ್ದಾರೆ, ಎಷ್ಟೇ ವಿರೋಧ ವ್ಯಕ್ತವಾದರೂ ಬಡವರ ಹಿತಕ್ಕೆ ಪ್ರಾಮುಖ್ಯತೆ ನೀಡಿ ವಿಬಿಜಿರಾಮ್-ಜೀ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಾರೆ’ ಎಂದರು.
‘ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ಮತ್ತು ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ಸರ್ಕಾರವು ವಿಬಿಜಿ ರಾಮ್ಜಿ ಎಂಬ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ಕೂಲಿ ಕಾರ್ಮಿಕರು ನಿರ್ವಹಿಸಿದ ಕೆಲಸದ ವೇತನವನ್ನು ನಿಗದಿತ ಕಾಲಾವಧಿಯಲ್ಲಿಯೇ ತಕ್ಷಣಕ್ಕೆ ನೇರವಾಗಿ ಪಾವತಿಯಾಗಲಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ಪ್ರಧಾನಿ ಮೋದಿ ಸಾಧನೆ

‘ಈ ಹಿಂದೆ ಕೂಲಿಕಾರರ ಹಣ ಪಾವತಿಗೆ ಸಾಕಷ್ಟು ತೊಂದರೆ ಇತ್ತು. ಅದನ್ನು ಸರಳೀಕರಿಸಲಾಗಿದೆ. ಪ್ರಧಾನಿ ಮೋದಿ ಅವರು ಈ ಹಿಂದಿನ ಯೋಜನೆಯನ್ನು ಮಾರ್ಪಾಡು ಮಾಡಿ ನೇರವಾಗಿ ನಿಮಗೆ ಹಣ ದೊರಕಿಸುವಂತೆ ಮಾಡುವ ಮೂಲಕ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದಾರೆ, ಕಾರ್ಮಿಕರಿಗೆ ನೇರವಾಗಿ ಹಣ ವರ್ಗಾವಣೆ ಬೇಡ ಎಂದು ಅನೇಕ ಶಕ್ತಿಗಳು ವಿರೋಧ ವ್ಯಕ್ತಪಡಿಸಿದವು, ಆದರೆ ಕೂಲಿಕಾರ್ಮಿಕರ ಬಗ್ಗೆ ಅಪಾರ ಕಾಳಜಿ ಇರುವ ನಮ್ಮ ಪ್ರಧಾನಿ ಮೋದಿ ಅವರು ಎಲ್ಲ ವಿರೋಧವನ್ನು ಲೆಕ್ಕಿಸದೇ ಈ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಿದರು’ ಎಂದು ವಿವರಿಸಿದರು.

ಯೋಜನೆ ವಿವರ

ಈ ಹೊಸ ಯೋಜನೆ ಅನ್ವಯ ಹೊಸ ಕೂಲಿ ದರ 370.ರೂ ಗಳಿಂದ 382ರೂ. ಗೆ ಹೆಚ್ಚಿಸಲಾಗಿದೆ ಹಾಗೂ ಮಾನವ ದಿನಗಳನ್ನು 100 ರಿಂದ 125 ಕ್ಕೆ ಹೆಚ್ಚಿಸಲಾಗಿದೆ. ಆದ್ದರಿಂದ ಕೂಲಿಕಾರರು ವಲಸೆ ಹೋಗದೆ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗವನ್ನು ಪಡೆಯುವ ಹಕ್ಕನ್ನು ಹೊಂದಿರುವ ಕುರಿತು ಮಾಹಿತಿ ನೀಡಿದರು.
ಅಕುಶಲ ಕೆಲಸ ಮಾಡಲು ಬಯಸುವ ಕೂಲಿಕಾರರು ಉದ್ಯೋಗ ಚೀಟಿ ಪಡೆದುಕೊಂಡಿದ್ದಲ್ಲಿ ನಮೂನೆ 6 ರಲ್ಲಿ ತಮ್ಮ ಅರ್ಜಿಯನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಬೇಕಾಗುತ್ತದೆ. ಮುಂದುವರೆದು 318 ಅನುಮೋದಿತ ಕಾಮಗಾರಿಗಳಲ್ಲಿ ತಮ್ಮ ಗ್ರಾಮದ ಮೂಲ ಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ ಕಾಮಗಾರಿಗಳ ಜೊತೆಗೆ ರೈತರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೂಡಾ ಅನುಷ್ಠಾನಗೊಳಿಸಲು ಅವಕಾಶವಿರುವುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಿ’ ಎಂದು ಮನವಿ ಮಾಡಿದರು.
ಮುಖಂಡರಾದ ಸಂಜೀವ ಐಹೊಳೆ, ನವೀನ್ ಅರಕೇರಿ, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ್, ಪಾಲಿಕೆ ಸದಸ್ಯ ಮಲ್ಲನಗೌಡ ಪಾಟೀಲ, ವಿಜಯ ಜೋಶಿ, ಉದಯ ಕನ್ನಳ್ಳಿ, ರವಿ ಬಿರಾದಾರ, ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ಸಹಾಯಕ ನಿರ್ದೇಶಕ ಎಸ್.ಆರ್. ಕಟ್ಟಿ, ನಾಗಠಾಣ ಪಿಡಿಒ ನಾಮದೇವ ಸಿಂಧಿ, ಹಡಗಲಿ ಪಿಡಿಒ ವಿಜಯಲಕ್ಷ್ಮಿ ಹಿಟ್ನಳ್ಳಿ, ತಾಂತ್ರಿಕ ಸಂಯೋಜಕ ಪರಶುರಾಮ ಶಹಾಪುರ, ಐಇಸಿ ಸಂಯೋಜಕ ರಾಘವೇಂದ್ರ ಭಜಂತ್ರಿ, ತಾಂತ್ರಿಕ ಸಹಾಯಕ ಮಂಜುನಾಥ ಶಟಗಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net