ಗ್ರಾಮಾಭಿವೃದ್ಧಿಗೆ ‘ವಿಬಿ ಜಿ ರಾಮ್‌ಜಿ’ ಸಹಕಾರಿ; ಸಂಸದ ರಮೇಶ ಜಿಗಜಿಣಗಿ

RAMESH-JIGAJINAGI
RAMESH-JIGAJINAGI
Published on

ಪ್ರಮುಖ ಮುಖ್ಯಾಂಶಗಳು

  • ಭ್ರಷ್ಟಾಚಾರ-ಹಗರಣ ತಡೆಗೆ ಪ್ರಧಾನಿ ಮೋದಿ ಸಂಕಲ್ಪ
  • ಕಾಂಗ್ರೆಸ್‌ಗೆ ಮೋದಿ ಯೋಜನೆ ಅರಗಿಸಿಕೊಳ್ಳಲಾಗುತ್ತಿಲ್ಲ
  • ನರೇಗಾ ಯೋಜನೆಗೆ ಹೊಸ ಕಾಯಕಲ್ಪ
ವಿಜಯಪುರ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಸಂಪೂರ್ಣ ಹಳ್ಳ ಹಿಡಿದಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ‘ವಿಬಿ ಜಿ ರಾಮ್ ಜಿ’ ಹೆಸರಲ್ಲಿ ಆ ಯೋಜನೆಗೆ ಕಾಯಕಲ್ಪ ನೀಡಲು ಮುಂದಾಗಿದ್ದಾರೆಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.
ಈ ಮುಂಚೆ ನರೇಗೆ ಯೋಜನೆಗೆ ಯಾವುದೇ ಚೌಕಟ್ಟು ಇರಲಿಲ್ಲ. ಭ್ರಷ್ಟಾಚಾರ, ಅನುದಾನದ ದುರ್ಬಳಕೆ ವ್ಯಾಪಕವಾಗಿ ಕಂಡು ಬಂದ ಹಿನ್ನೆಲೆ ಪ್ರಧಾನಿ ಮೋದಿ ಅವರು, ಯೋಜನೆಗೆ ಹೊಸ ಸ್ಪರ್ಶ ನೀಡಲು ಮುಂದಾಗಿದ್ದಾರೆ. ಗಾಂಧಿ ಕನಸಿನ ಗ್ರಾಮ ಭಾರತ ನಿರ್ಮಾಣದ ಸಂಕಲ್ಪ ಕೈಗೊಂಡಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರಗಳು ಅನುದಾನ ಕೊಡುತ್ತಿರಲಿಲ್ಲ. ಈಗ 60: 40ರ ಅನುದಾನದ ಪಾಲನ್ನು ಕಡ್ಡಾಯಗೊಳಿಸಲಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
‘ವಿಬಿ ಜಿ ರಾಮ್ ಜಿ’ ಯೋಜನೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಮಹಾತ್ಮ ಗಾಂಧೀಜಿ ಅವರ ಕನಸಿನಂತೆ ಕಾನೂನಿನ ತಿದ್ದುಪಡಿ ಮಾಡಲಾಗಿದೆ. ಇದು ಕಾಂಗ್ರೆಸ್‌ನವರಿಗೆ ಸಹಿಸಲಾಗುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಂದ್ರ ಸರ್ಕಾರದ ಯೋಜನೆಗಳೆಂದರೆ ಹೊಟ್ಟೆ ಉರಿ. ಗಾಂಧಿ, ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದೆ ಕಾಂಗ್ರೆಸ್ ಸತ್ಯಾನಾಶವಾಗಲಿದೆ ಎಂದರು.
ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ರವಿಕುಮಾರ ವಗ್ಗೆ ಮಾತನಾಡಿ, ನರೇಗಾ ಯೋಜನೆಯಡಿ ಈ ಹಿಂದೆ 100 ಮಾನವ ದಿನ ಸೃಜಿಸಲಾಗುತ್ತಿತ್ತು. ಇದೀಗ ವಿಬಿ ಜಿ ರಾಮ್ ಜಿಯಡಿ 125 ದಿನಗಳಿಗೆ ಹೆಚ್ಚಿಸಲಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ವಿರೋಧ ಮಾಡುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ. ಕೂಲಿ ಪಾವತಿಯಲ್ಲಿ ವಿಳಂಬ ಮಾಡದೆ ನಿರ್ದಿಷ್ಟವಾದ ದಿನಗಳಲ್ಲಿ ಪಾವತಿ ಮಾಡಬೇಕು. ಈ ಹಿಂದೆ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದ ಬಗ್ಗೆ ಸಿಎಜಿ ವರದಿಯಲ್ಲಿ ಉಲ್ಲೇಖಿಸಿತ್ತು. ಈಗ ಯೋಜನೆಗೆ ಪಾರದರ್ಶಕ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದರು.
ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂಬ ದೂರದೃಷ್ಠಿಯೊಂದಿಗೆ ಈ ಯೋಜನೆ ರೂಪಿಸಲಾಗಿದೆ. ದೇಶದ ಅಭಿವೃದ್ಧಿಗೆ ದಾರಿಯಾಗಿರುವ ಯೋಜನೆಯನ್ನು ಕಾಂಗ್ರೆಸ್ ಟೀಕಿಸುತ್ತಿದೆ. ಅರ್ಹ ಕೂಲಿ ಕಾರ್ಮಿಕನ ಕೆಲಸದ ಹಣವನ್ನು ಬೇರೆಯವರು ತೆಗೆದುಕೊಳ್ಳುತ್ತಿದ್ದರು. ಇದೀಗ ಜಾಬ್ ಕಾರ್ಡ್ ಹೊಂದಿ, ಕೆಲಸ ಮಾಡಿದ ಕಾರ್ಮಿಕನ ಖಾತೆಗೆ ನೇರವಾಗಿ ಹಣ ಜಮೆಯಾಗುವ ಕೆಲಸ ಮಾಡಿದ್ದಾರೆ. ಕಾಯ್ದೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಕಾಂಗ್ರೆಸ್‌ನವರು ವಿರೋಧಿಸುತ್ತಿದ್ದಾರೆ ಎಂದರು.
ಸಂಸದ ರಮೇಶ ಜಿಗಜಿಣಗಿಯವರು ಜಾರಿಗೆ ತಂದಿದ್ದ ಗಂಗಾ ಕಲ್ಯಾಣ ಯೋಜನೆಯನ್ನು ರಾಜ್ಯ ಸರ್ಕಾರ ನಿಲ್ಲಿಸುತ್ತಿದೆ. ಬಡ ರೈತರಿಗೆ ಸಹಕಾರಿಯಾಗುವ ಗಂಗಾ ಕಲ್ಯಾಣ ಯೋಜನೆಯನ್ನು ಮುಂದುವರಿಸಬೇಕು ಎಂದರು.
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಈರಣ್ಣ ರಾವೂರ, ಬಾಲರಾಜ ರೆಡ್ಡಿ, ಸಾಬು ಮಾಶ್ಯಾಳ, ವಿಜಯ ಜೋಶಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net