‘ವಂದೇ ಮಾತರಂ’ ಎರಡು ಚರಣಗಳಿಗೆ ಮಾತ್ರ ಸೀಮಿತ, ರಾಜ್ಯ ಸರ್ಕಾರದ ನಡೆಗೆ ಸಂಸದ ಜಿಗಜಿಣಗಿ ಆಕ್ರೋಶ

ರಮೇಶ ಜಿಗಜಿಣಗಿ, ಸಂಸದರು
ರಮೇಶ ಜಿಗಜಿಣಗಿ, ಸಂಸದರು
Published on

ಪ್ರಮುಖ ಮುಖ್ಯಾಂಶಗಳು

  • ಸಂವಿಧಾನ-ರಾಷ್ಟ್ರೀಯ ಗೀತೆಗೆ ಅವಮಾನ
  • ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ
  • ರಮೇಶ ಜಿಗಜಿಣಗಿಯಿಂದ ಕಟುಟೀಕೆ
ವಿಜಯಪುರ: ‘ವಂದೇ ಮಾತರಂ ಗೀತೆಯ ಮೊದಲೆರಡು ಚರಣಗಳನ್ನು ಮಾತ್ರ ಹಾಡಲು ಆದೇಶ ಹೊರಡಿಸುವ ಮೂಲಕ ಕಾಂಗ್ರೆಸ್ ತನ್ನ ಸಂವಿಧಾನ ವಿರೋಧಿ ನಿಲುವನ್ನು ಸ್ಪಷ್ಟ ಪಡಿಸಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದ್ದಾರೆ.
ಸಂಸತ್‌ನಲ್ಲಿ ಅಂಗೀಕಾರಗೊಂಡು ಶಾಸನವಾಗಿ ಮಾರ್ಪಟ್ಟಿರುವ ‘ವಂದೇ ಮಾತರಂ’ ಮಸೂದೆಯ ಸಾರವನ್ನೇ ಕಾಂಗ್ರೆಸ್ ತಿರಸ್ಕರಿಸುತ್ತಿದೆ. ವಂದೇ ಮಾತರಂಗೆ ರಾಷ್ಟ್ರೀಯ ಗೀತೆಯ ಸ್ಥಾನ ಮಾನ ನೀಡಿ ಇನ್ಮುಂದೆ ರಾಷ್ಟ್ರಗೀತೆಯೊಂದಿಗೆ ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿದ್ದರೂ ರಾಜ್ಯ ಸರ್ಕಾರ ಇದೀಗ ಕೇವಲ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಿ ಆದೇಶಿಸಿರುವುದು ಖಂಡನೀಯ ಎಂದು ಜಿಗಜಿಣಗಿ ತಿಳಿಸಿದ್ದಾರೆ.
ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್ ಸ್ವಾತಂತ್ರೃ ಕಾಲದಿಂದಲೂ ವಿರೋಧಿಸುತ್ತಲೇ ಬಂದಿದೆ. 1923ರಲ್ಲಿ ಆಂಧ್ರಪ್ರದೇಶದ ಕಾಕಿನಾಡನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿಯೇ ವಿಷ್ಣು ದಿಗಂಬರ ಪಲುಸ್ಕರ್ ಅವರು ಹಾಡಲು ಮುಂದಾದಾಗ ತಡೆಯೊಡ್ಡಿದವರು ಈ ಕಾಂಗ್ರೆಸ್ಸಿಗರು. ಆ ಬಳಿಕ ವಿರೋಧಿಸುತ್ತಲೇ ಬಂದಿದ್ದಾರೆ. ಅಷ್ಟೇ ಏಕೆ ಮಸೂದೆ ಮಂಡನೆಯಾದ ನಂತರವೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಅವರು ಸ್ವಾತಂತ್ರೃ ದಿನಾಚರಣೆ ಸಂದರ್ಭ ಹಾಡಿನ ಮಧ್ಯದಲ್ಲಿಯೇ ಅಶಿಸ್ತು ಪ್ರದರ್ಶನ ಮಾಡಿ ಅವಮಾನಿಸಿದರು. ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಆ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯನ್ನಿರಿಸಿರುವುದು ರಾಷ್ಟ್ರೀಯ ಗೀತೆಗೆ, ರಾಷ್ಟ್ರ ಪ್ರೇಮಕ್ಕೆ, ಸ್ವಾತಂತ್ರೃ ಹೋರಾಟಗಾರರಿಗೆ ಮಾಡುತ್ತಿರುವ ಅವಮಾನ ಎಂದು ಜಿಗಜಿಣಗಿ ಆಪಾದಿಸಿದ್ದಾರೆ.
ಮಾತೆತ್ತಿದರೆ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು ಇದೀಗ ಅದೇ ಸಂವಿಧಾನದ ತಳಹದಿಯಲ್ಲಿ ವಂದೇ ಮಾತರಂ ಮಸೂದೆ ಮಂಡನೆಯಾಗಿರುವುದನ್ನು ಮತ್ತು ಅದರ ಅನುಷ್ಟಾನಕ್ಕೆ ಅಡ್ಡಿಯನ್ನುಂಟು ಮಾಡುತ್ತಿರುವುದು ಸಂವಿಧಾನ ವಿರೋಧಿ ಧೋರಣೆಯಲ್ಲದೆ ಮತ್ತೇನು? ಯಾವುದೋ ಒಂದು ಕೋಮಿನ ಓಲೈಕೆಗಾಗಿ, ಮತಬ್ಯಾಂಕ್‌ಗೋಸ್ಕರ ರಾಷ್ಟ್ರೀಯ ಗೀತೆಗೆ ಅವಮಾನ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದ ಜಿಗಜಿಣಗಿ ಅವರು, ದೇಶದ ಜನ ಕಾಂಗ್ರೆಸ್‌ನ ಈ ಸಂವಿಧಾನ ವಿರೋಧಿ ಧೋರಣೆಯನ್ನು ಗಮನಿಸುತ್ತಿದ್ದಾರೆ. ಮುಂಬರುವ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿಯೂ ಜನ ತಕ್ಕ ಪಾಠ ಕಲಿಸಲಿದ್ದಾರೆಂದು ಅವರು ತಿಳಿಸಿದ್ದಾರೆ.
ಈಗಾಗಲೇ ಕರ್ನಾಟಕದಲ್ಲಿ ಬಿಜೆಪಿಯ ರಣಕಹಳೆ ಮೊಳಗಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿಲುಕಿದ್ದ ನಾಗೇಂದ್ರನ ರಾಜೀನಾಮೆ ಮೂಲಕ ಕಾಂಗ್ರೆಸ್‌ನ ಅವನತಿ ಆರಂಭವಾಗಿದೆ. ಗ್ಯಾರಂಟಿ ಹೆಸರಲ್ಲಿ ದಲಿತರ ಹಣ ನುಂಗಿ ನೀರು ಕುಡಿದಿರುವ ಕಾಂಗ್ರೆಸ್ಸಿಗರಿಗೆ ಈ ಬಾರಿ ದಲಿತರು ತಕ್ಕ ಪಾಠ ಕಲಿಸಲಿದ್ದಾರೆ. ಜೊತೆಗೆ ಬರ ನಿಭಾಯಿಸಲಾಗದೇ ಕೈ ಚೆಲ್ಲಿ ಕುಳಿತ ಹಿನ್ನೆಲೆ ಜನ ಆಕ್ರೋಶಗೊಂಡಿದ್ದು, ಪಾಠ ಕಲಿಸಲು ಚುನಾವಣೆಗಾಗಿ ಎದುರು ನೋಡುತ್ತಿದ್ದಾರೆ. ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದು ಪರಿಹಾರ ನೀಡುವುದನ್ನು ಬಿಟ್ಟು ಶತದಿನೋತ್ಸವದ ಸಂಭ್ರಮಾಚರಿಸುತ್ತಿರುವ ಡಿ.ಕೆ. ಶಿವಕುಮಾರ ಸರ್ಕಾರ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆ ಮೂಲಕ ಹರಿಹಾಯ್ದಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net