ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆ, ಕೆರೆ-ಬಾಂದಾರಗಳಿಗೆ ನೀರು ಬಿಡುಗಡೆ, ರೈತರಿಗೆ ಸಚಿವ ಎಂ.ಬಿ. ಪಾಟೀಲ ಮಹತ್ವದ ಸಂದೇಶ

ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ತಿಕೋಟಾ ತಾಲೂಕಿನ ಕೆರೆ ಮತ್ತು ಬಾಂದಾರಗಳಿಗೆ ನೀರು ಬಿಡುಗಡೆ ಮಾಡಿರುವುದು.
ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ತಿಕೋಟಾ ತಾಲೂಕಿನ ಕೆರೆ ಮತ್ತು ಬಾಂದಾರಗಳಿಗೆ ನೀರು ಬಿಡುಗಡೆ ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆ
  • ಕೆರೆ-ಬಾಂದಾರಗಳಿಗೆ ನೀರು ಬಿಡುಗಡೆ
  • ರೈತರಿಗೆ ಸಚಿವ ಎಂ.ಬಿ. ಪಾಟೀಲ ಮನವಿ
  • ನೀರು ಪೋಲಾಗದಂತೆ ನೋಡಿಕೊಳ್ಳಲು ವಿನಂತಿ
ವಿಜಯಪುರ: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಮೂಲಕ ತಿಕೋಟಾ ತಾಲೂಕಿನ ಕೆರೆ ಮತ್ತು ಬಾಂದಾರಗಳಿಗೆ ನೀರು ಬಿಡುಗಡೆ ಮಾಡಲಾಗಿದ್ದು, ರೈತರು ಪೋಲಾಗದಂತೆ ಮತ್ತು ಕುಡಿಯಲು ಮಾತ್ರ ನೀರನ್ನು ಬಳಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ರೈತರಿಗೆ ಮನವಿ ಮಾಡಿದ್ದಾರೆ.
ತಿಕೋಟಾ ತಾಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ ಜನ-ಜಾನುವಾರುವಿಗೆ ಕುಡಿಯಲು ನೀರು ಪೂರೈಸುವ ಸಲುವಾಗಿ ಕೆರೆಗಳಿಗೆ ನೀರು ತುಂಬಿಸಲು 2025 ನ.14ರಂದು ನಡೆದ ನೀರಾವರಿ ಸಲಹಾ ಸಮತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಹಂಚಿಕೆಯಾದ 0.75 ಟಿಎಂಸಿ ನೀರನ್ನು ಯೋಜನೆಯ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ಕೂಡಲೇ ಬಿಡುಗಡೆ ಮಾಡುವಂತೆ 2025 ಡಿ.24ರಂದು ಬೆಳಗಾವಿ ಉತ್ತರ ವಲಯದ ಕರ್ನಾಟಕ ನೀರಾವರಿ ನಿಗಮ ನಿಯಮಿತ ಮುಖ್ಯ ಅಭಿಯಂತರರಿಗೆ ಪತ್ರ ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ಪಂಪ್‌ಗಳನ್ನು ಪ್ರಾರಂಭ ಮಾಡುವ ಮೂಲಕ ಅಧಿಕಾರಿಗಳು ನೀರು ಬಿಡುಗಡೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಈ ನೀರು ಬಿಡುಗಡೆಯಿಂದಾಗಿ ತಿಕೋಟಾ ತಾಲೂಕಿನ ಸುಮಾರು 25 ಕೆರೆ ಮತ್ತು 60 ಬಾಂದಾರಗಳಿಗೆ ನೀರು ಬರಲಿದ್ದು, 21 ಗ್ರಾಮಗಳಿಗೆ ನೀರಿನ ಸಮಸ್ಯೆ ನೀಗಲಿದೆ. ಈಗ ಬಿಡುಗಡೆ ಮಾಡಲಾಗಿರುವ ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯಲು ರೈತರು ಸಹಾಯ ಮಾಡಬೇಕು. ಅಲ್ಲದೇ, ಜನ ಮತ್ತು ಜಾನುವಾರುವಿಗೆ ಕುಡಿಯಲು ಮಾತ್ರ ಬಳಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.
ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ಈಗ ನೀರು ಬಿಡುಗಡೆ ಮಾಡಿರುವುದರಿಂದ ಈ ಯೋಜನೆಯ ವ್ಯಾಪ್ತಿಯ ಜಮಖಂಡಿ ತಾಲೂಕಿನ ಮೂರು ಮತ್ತು ಅಥಣಿ ತಾಲೂಕಿನ ನಾಲ್ಕು ಗ್ರಾಮಗಳಿಗೂ ನೀರು ಸಿಗಲಿದೆ ಎಂದು ಪ್ರಕಟಣೆ ಮೂಲಕ ಅವರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net