

ವಿಜಯಪುರ: ‘ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಿಸಲಾಗದ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ‘ಕುಣಿಯಲು ಬಾರದವರು ನೆಲ ಡೊಂಕು’ ಎಂಬಂತಾಗಿದೆ’ ಎಂದು ಸಂಸದ ರಮೇಶ ಜಿಗಜಿಣಗಿ ತಿರುಗೇಟು ನೀಡಿದ್ದಾರೆ.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ 2500 ರೂಪಾಯಿ ಪರಿಹಾರ ಘೋಷಿಸಿದ್ದು ಕೇಂದ್ರದಿಂದ ಹೆಚ್ಚಿನ ಪರಿಹಾರ ತರುವ ನಿಟ್ಟಿನಲ್ಲಿ ಸಂಸದರು ಪ್ರಯತ್ನಿಸಬೇಕೆಂದಿರುವ ಸಚಿವ ಎಂ.ಬಿ. ಪಾಟೀಲರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರ ಪ್ರತಿಯೊಂದಕ್ಕೂ ಕೇಂದ್ರದತ್ತ ಬೊಟ್ಟು ಮಾಡುವುದನ್ನು ನಿಲ್ಲಿಸಲಿ ಎಂದಿದ್ದಾರೆ.
ರಾಜ್ಯದಲ್ಲಿ ಭೀಕರ ಬರ ಆವರಿಸಿದ್ದರೂ ಕುಂಭಕರ್ಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಕೇವಲ 2,500 ರೂಪಾಯಿ ಘೋಷಿಸುವ ಮೂಲಕ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯವನ್ನು ಜನರ ಮುಂದಿರಿಸಿದೆ. ವಿಪರ್ಯಾಸವೆಂದರೆ ಘೋಷಿತ ಪರಿಹಾರ ಸಹ ಈವರೆಗೂ ರೈತರ ಕೈ ಸೇರಿಲ್ಲ. ರಾಜ್ಯದಲ್ಲಿ ಅತೀವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ ಕೇಂದ್ರವೇ ಪರಿಹಾರ ನೀಡಬೇಕೆಂದಾದರೆ ರಾಜ್ಯ ಸರ್ಕಾರ ಇರುವುದಾದರೂ ಏತಕ್ಕೆ? ಜನಪರ ಆಡಳಿತ ನೀಡುವಲ್ಲಿ ತಮ್ಮ ಪಾತ್ರವೇನು? ತಮ್ಮಿಂದ ಸುಗಮ, ಜನಪರ ಆಡಳಿತ ನೀಡಲಾಗುತ್ತಿಲ್ಲವೆಂದಾದರೆ ಅಧಿಕಾರದಲ್ಲಿ ಮುಂದುವರಿಯುವುದಾದರೂ ಏಕೆ? ಎಂದು ಸಂಸದರು ಖಾರವಾಗಿ ಪ್ರಶ್ನಿಸಿದ್ದಾರೆ.
ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಪ್ರವಾಹ ಉಂಟಾದಾಗ ತಕ್ಷಣಕ್ಕೆ ಕುಟುಂಬ ನಿರ್ವಹಣೆಗಾಗಿ 10 ಸಾವಿರ ರೂಪಾಯಿ ಪರಿಹಾರ ನೀಡಲಾಗಿತ್ತು. ಮುಳುಗಡೆ ಗ್ರಾಮಗಳನ್ನು ಸ್ಥಳಾಂತರಿಸಲಾಗಿತ್ತು. ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲಾಗಿತ್ತು. ಆದರೆ, ಈಗ ಬರ ಘೋಷಣೆಯಾದರೂ ಪರಿಹಾರ ನೀಡಲಾಗುತ್ತಿಲ್ಲವೆಂದಾದರೆ ಆಡಳಿತದಲ್ಲಿ ಮುಂದುವರಿಯಲು ನಾಚಿಕೆಯಾಗಬೇಕು ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಜನ ಕಾಂಗ್ರೆಸ್ಗೆ ಛೀಮಾರಿ ಹಾಕುತ್ತಿದ್ದಾರೆ. ಬರದ ತೀವ್ರತೆಗೆ ಅನುಗುಣವಾಗಿ ರೈತರಿಗೆ ಸಮರ್ಪಕ ಪರಿಹಾರ ಒದಗಿಸುವುದು ಮತ್ತು ಕುಡಿಯುವ ನೀರು, ಜಾನುವಾರುವಿಗೆ ಮೇವು ಸೇರಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಭೀಕರ ಬರದಲ್ಲೂ ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ಅನಧಿಕೃತವಾಗಿ ನೀರು ಹರಿಸಲಾಗುತ್ತಿದೆ. ಸಕಾಲಕ್ಕೆ ಕೆಡಿಪಿ ಸಭೆಗಳನ್ನು ಕರೆದು ಬರದ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದ್ದ ಸಚಿವರುಗಳು ವಿದೇಶಿ ಪ್ರವಾಸದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಜಿಗಜಿಣಗಿ ಟೀಕಿಸಿದರು.
ಕಬ್ಬು ಬೆಳೆಗಾರರ ಸಮಸ್ಯೆ ಕೇವಲ ಕರ್ನಾಟಕ ರಾಜ್ಯದಲ್ಲಷ್ಟೇ ಅಲ್ಲ ಇಡೀ ದೇಶದ ರೈತರ ಸಮಸ್ಯೆಯಾಗಿದೆ. ಹೀಗಾಗಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಸಮಿತಿ ರಚಿಸಿದೆ. ಈ ಕುರಿತು ಕೇಂದ್ರದ ನಾಯಕರೊಂದಿಗೆ ರಾಜ್ಯದ ಸಂಸದರು ನಿರಂತರ ಸಂಪರ್ಕದಲ್ಲಿದ್ದಾರೆ. ಆದರೆ, ರಾಜ್ಯ ಸರ್ಕಾರ ಏನು ಮಾಡುತ್ತಿದೆ? ತಮ್ಮ ಪಾತ್ರವೇನು? ಕಬ್ಬು ಬೆಳೆಗಾರರ ವಿಚಾರದಲ್ಲಿ ರಾಜ್ಯ ಸರ್ಕಾರದ ಹೊಣೆಗಾರಿಕೆ ಇಲ್ಲವೇ? ಇದರಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್ಸಿಗರ ಬೂಟಾಟಿಕೆಯನ್ನು ಜನ ಗಮನಿಸುತ್ತಿದ್ದಾರೆಂದು ಸಂಸದ ರಮೇಶ ಜಿಗಜಿಣಗಿ ಹರಿಹಾಯ್ದಿದ್ದಾರೆ.