ಸರ್ಕಾರಿ ಯೋಜನೆ ಅನುಷ್ಟಾನಕ್ಕೆ ವಿಳಂಬ ಸಲ್ಲದು, ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೂಚನೆ

ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸಿಇಒ ರಿಷಿ ಆನಂದ, ಎಎಸ್‌ಪಿ ರಾಮನಗೌಡ ಹಟ್ಟಿ ಇದ್ದಾರೆ.
ವಿಜಯಪುರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಸಿಇಒ ರಿಷಿ ಆನಂದ, ಎಎಸ್‌ಪಿ ರಾಮನಗೌಡ ಹಟ್ಟಿ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಸಿಪಿ-ಟಿಎಸ್‌ಪಿ ಪ್ರಗತಿ ಪರಿಶೀಲನೆ ಸಭೆ
  • ಮೇ ತಿಂಗಳಾಂತ್ಯಕ್ಕೆ ಸಾಧಿಸಿದ ಪ್ರಗತಿ ಪರಿಶೀಲನೆ
  • ನಿಗದಿತ ಅವಧಿಯಲ್ಲಿ ಗುರಿ ಸಾಧಿಸಲು ಸೂಚನೆ
ವಿಜಯಪುರ: ‘ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಸಮರ್ಪಕ ಬಳಕೆ ಮಾಡಿಕೊಂಡು, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಲಾಭ ತಲುಪಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ‘2026-27ನೇ ಸಾಲಿನ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿಯ ಕೇಂದ್ರ, ರಾಜ್ಯ ಹಾಗೂ ಜಿಲ್ಲಾ ವಲಯ ಯೋಜನೆ ಕಾರ್ಯಕ್ರಮಗಳ ಇಲಾಖಾವಾರು ಮೇ ತಿಂಗಳಾಂತ್ಯಕ್ಕೆ ಸಾಧಿಸಿದ ಪ್ರಗತಿ ಪರಿಶೀಲನೆ’ ನಡೆಸಿ ಅವರು ಮಾತನಾಡಿದರು.
‘ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆ ನಿಗದಿತ ಅನುಷ್ಟಾನಕ್ಕೆ ಕ್ರಮ ವಹಿಸಬೇಕು. ಆರ್ಥಿಕ ಹಾಗೂ ಭೌತಿಕ ಗುರಿ ನಿಗದಿತ ಅವಧಿಯಲ್ಲಿ ಗುರಿ ಸಾಧಿಸಬೇಕು. ಡಾ.ಅಂಬೇಡ್ಕರ್ ಅಭಿವೃದ್ದಿ ನಿಗಮದಿಂದ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು. ವಿವಿಧ ಯೋಜನೆಗಳಾದ ಗಂಗಾಕಲ್ಯಾಣ ಮತ್ತಿತರ ಯೋಜನೆಗಳನ್ನು ಅನುಷ್ಟಾನಗೊಳಿಸಲು ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು’ ಎಂದರು.
‘ತಾಲೂಕು ಮಟ್ಟದಲ್ಲಿ ಕಡ್ಡಾಯವಾಗಿ ಸಭೆ ನಡೆಸಬೇಕು. ಒಂದು ರೂಪಾಯಿ ಕೂಡ ಲ್ಯಾಪ್ಸ್ ಆಗಬಾರದು. ಯೋಜನೆ ಅನುಷ್ಟಾನಕ್ಕೆ ವಿಳಂಬ ಮಾಡಬಾರದು. ಬೇರೆ ಬೇರೆ ಯೋಜನೆಗಳ ಬಗ್ಗೆ ಫಾಲೊಅಪ್ ಮಾಡಿ ಹಂಚಿಕೆ ಮಾಡಿ ಅನುಷ್ಟಾನಗೊಳಿಸಿದರೆ ಸರಳವಾಗಲಿದೆ. ಸಮಸ್ಯೆ ಬಾರದಂತೆ ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳಬೇಕು. ಎಲ್ಲ ಇಲಾಖೆಗಳು ಇದನ್ನು ಗಮನಿಸಬೇಕು. ಬೇರೆ ಬೇರೆ ಇಲಾಖೆಯಿಂದ ಜಾರಿಯಾಗುವ ಯೋಜನೆ ಅರ್ಹರನ್ನು ತಲುಪಬೇಕು’ ಎಂದರು.
‘ಯಾವುದೇ ಯೋಜನೆ ಸ್ಥಳ ಪರಿಶೀಲನೆ ಕಡ್ಡಾಯವಾಗಿ ನಡೆಸಬೇಕು. ಪಿಡಿಒ ಹಾಗೂ ಸ್ಥಳೀಯ ಆಡಳಿತದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಬೇಕು. ಎಸ್‌ಸಿಪಿ ಟಿಎಸ್‌ಪಿ ಯೋಜನೆ ಕಾಯ್ದೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ, ರೆಗ್ಯುಲರ್ ಯೋಜನೆಯೊಂದಿಗೆ ಈ ಯೋಜನೆಗಳನ್ನು ಪರಿಶೀಲನೆ ನಡೆಸಿ ಕಾರ್ಯ ನಿರ್ವಹಿಸಲು’ ಅವರು ಸೂಚನೆ ನೀಡಿದರು.
‘ಪ್ರವಾಸೋದ್ಯಮ ಇಲಾಖೆಯಡಿ ಮೊಬೈಲ್ ಕ್ಯಾಂಟಿನ್‌ಗೆ ಅರ್ಜಿ ಆಹ್ವಾನಿಸಲಾಗಿದೆ. 36 ಅರ್ಜಿ ಸ್ವೀಕರಿಸಿದೆ. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದ್ದು, ಅರ್ಹರನ್ನು ಆಯ್ಕೆ ಮಾಡಿ ಈ ಯೋಜನೆಯ ಲಾಭ ಅರ್ಹರಿಗೆ ತಲುಪಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಸೂಚಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದಡಿ ಜಾರಿಯಾಗುತ್ತಿರುವ ಯೋಜನೆ ಅನುಪಾಲನೆ ಮಾಡಿ, ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಆಗಮಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ವಿದ್ಯಾರ್ಥಿ ವೇತನ ಅರ್ಜಿ ಹಾಕಿದ ವಿದ್ಯಾರ್ಥಿಗಳ ಅರ್ಜಿ ತಕ್ಷಣ ಇತ್ಯರ್ಥಪಡಿಸಿ ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳು ತಕ್ಷಣ ಕ್ರಮವಹಿಸಬೇಕು. ವಸತಿ ನಿಲಯಕ್ಕೆ ಅರ್ಜಿ ಹಾಕುವ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಬೇಕು ಎಂದರು.
ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿ ಯೋಜನೆ ರೂಪಿಸಿಕೊಳ್ಳಬೇಕು. ದೀರ್ಘಾವಧಿ ಯೋಜನೆಯಡಿ ವಸತಿ ನಿಲಯಕ್ಕೆ ಸರ್ಕಾರಿ ಜಾಗೆ ಗುರುತಿಸಿ ಪಡೆದುಕೊಳ್ಳಬೇಕು. ತತ್‌ಕ್ಷಣದಲ್ಲಿ ಅವಶ್ಯವಿರುವ ಮಕ್ಕಳಿಗನುಸಾರವಾಗಿ ಸೂಕ್ತ ಬಾಡಿಗೆ ಕಟ್ಟಡ ಗುರುತಿಸಿಕೊಂಡು ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಸಿಇಒ ರಿಷಿ ಆನಂದ, ಎಎಸ್‌ಪಿ ರಾಮನಗೌಡ ಹಟ್ಟಿ, ಕೃಷಿ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬದ್ರುದ್ದಿನ್ ಸೌದಾಗರ್, ಕ್ರೀಡಾಧಿಕಾರಿ ರಾಜಶೇಖರ ಧೈವಾಡಿ, ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಸಿದ್ರಾಮಯ್ಯ ಬರಗಿಮಠ ಮತ್ತಿತರರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net