ಬಸರಕೋಡದ ದೇವಸ್ಥಾನದಲ್ಲಿ ಕಳ್ಳತನ ಪ್ರಕರಣ, ಮೂವರ ಬಂಧನ, ಬೆಳ್ಳಿ ಮೂರ್ತಿಯ ತುಂಡರಿಸಿದ ತುಣುಕು ವಶಕ್ಕೆ
ಮುದ್ದೇಬಿಹಾಳದ ಬಸರಕೋಡ ಗ್ರಾಮದ ಪವಾಡಬಸವೇಶ್ವರ ದೇವಸ್ಥಾನದಲ್ಲಿ ಕಳುವಾದ ದೇವರ ಮೂರ್ತಿಯನ್ನು ಕರಗಿಸಿ ತಯಾರಿಸಿದ್ದ ಬೆಳ್ಳಿಯ ಗಟ್ಟಿ ತುಂಡುಗಳನ್ನು ಪೊಲೀಸರು ವಶಕ್ಕೆ ಪಡೆದಿರುವುದು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಂಧಿತರು ಗುಜರಾತ್ ಮೂಲದವರು
ಪೊಲೀಸರ ಚುರುಕಿನ ಕಾರ್ಯಾಚರಣೆ
ತುಂಡಾಗಿ ಕತ್ತರಿಸಿದ್ದ ಪವಾಡಬಸವೇಶ್ವರ ಮೂರ್ತಿ
ಬೆಳ್ಳಿಯ ಗಟ್ಟಿ ತುಣುಕುಗಳು ವಶಕ್ಕೆ
ವಿಜಯಪುರ: ಮುದ್ದೇಬಿಹಾಳದ ಬಸರಕೋಡ ಗ್ರಾಮದ ಪವಾಡಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸಿರುವ ಪೊಲೀಸರು ಗುಜರಾತ ಮೂಲದ ಮೂವರನ್ನು ಬಂಧಿಸಿ 4 ಕೆಜಿ ಬೆಳ್ಳಿ ಮೂರ್ತಿಯ ತುಂಡರಿಸಿದ ತುಣುಕು ತುಣುಕು ಮತ್ತಿತರ ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.
ಕಳೆದ ಜು. 5 ರಂದು ರಾತ್ರಿ ಬಸರಕೋಡದ ಪವಾಡಬಸವೇಶ್ವರ ದೇವಸ್ಥಾನದ ಕಬ್ಬಿಣದ ಬಾಗಿಲುಗಳಿಗೆ ಹಾಕಿದ ಕೀಲಿಗಳನ್ನು ಮುರಿದು ದೇವಸ್ಥಾನದಲ್ಲಿದ್ದ 32 ಕೆಜಿ ತೂಕದ ಬೆಳ್ಳಿಯ ಮೂರ್ತಿ ಕಳವು ಮಾಡಲಾಗಿತ್ತು. ಇದರ ಮೌಲ್ಯ 51.20 ಲಕ್ಷ ರೂ. ಎಂದು ಅಂದಾಜಿಸಲಾಗಿತ್ತು. ಈ ಕುರಿತು ದೇವಸ್ಥಾನದ ಕಮೀಟಿ ಅಧ್ಯಕ್ಷ ಕರನಂದೆಪ್ಪ ಯಮನಪ್ಪ ಬಿರಾದಾರ ಮುದ್ದೇಬಿಹಾಳ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರಲ್ಲದೇ ವಿಶೇಷ ತನಿಖಾ ತಂಡ ರಚಿಸಿದ್ದರು. ಬ.ಬಾಗೇವಾಡಿ ಡಿಎಸ್‌ಪಿ ಚಂದ್ರಕಾಂತ ನಂದರೆಡ್ಡಿ, ಮುದ್ದೇಬಿಹಾಳ ಸಿಪಿಐ ಮಹಮ್ಮದ್ ಫಸಿಯುದ್ದೀನ, ಪಿಎಸ್‌ಐ ಸಂಜಯ ತಿಪ್ಪರೆಡ್ಡಿ, ಆರ್.ಎಸ್. ಭಂಗಿ ಹಾಗೂ ನುರಿತ ಸಿಬ್ಬಂದಿಯನ್ನೊಳಗೊಂಡ ಒಟ್ಟು 4 ತನಿಖಾ ತಂಡಗಳನ್ನು ರಚಿಸಿದ್ದರು. ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಅಧಿಕಾರಿಗಳು ಗುಜರಾತ್‌ವರೆಗೂ ತೆರಳಿ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ.
ಗುಜರಾತ್ ಮೂಲದ ಸುರೇಶಕುಮಾರ ಶಾಂತಿಲಾಲ ಸೋನಿ(51), ಬ್ರಹ್ಮಾರ್ ಟೋಪಿಯಾ ನೇಟ್ (35) ಹಾಗೂ ಇಂದ್ರಜೀತ್ ಮನಿಯಾರ್ ನೇಟ್(33) ಬಂಧಿತರು. ವಿಚಾರಣೆ ವೇಳೆ ಇವರು ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕಳ್ಳತನ ಮಾಡಿದ ಬಸವೇಶ್ವರ ಮೂರ್ತಿ ಪೈಕಿ ಮೂರ್ತಿಯ ಪ್ರಮುಖ ಭಾಗವನ್ನು 4 ಭಾಗಗಳಾಗಿ ತುಂಡರಿಸಿ, ಇನ್ನುಳಿದ ಭಾಗವನ್ನು ಕರಗಿಸಿ ಗಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡಿದ ಬಗ್ಗೆ ಹೇಳಿದ್ದು, ಆ ಪ್ರಕಾರ ತನಿಖೆ ಕೈಗೊಂಡು ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ವಶಪಡಿಸಿಕೊಂಡ ಸಾಮಗ್ರಿ
4 ಕೆಜಿಯ ಮೂರ್ತಿಯ ತುಂಡರಿಸಿದ ತುಣುಕುಗಳು, 23 ಕೆಜಿ ತೂಕದ ಬೆಳ್ಳಿಯ ತುಣುಕು, 67,600 ರೂ. ನಗದು, 2 ಮೋಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಕಾರ್, ಕೃತ್ಯಕ್ಕೆ ಬಳಸಿದ 2 ಕಬ್ಬಿಣದ ರಾಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಒಟ್ಟು 52,70,000 ರೂ. ಮೌಲ್ಯದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲವು ಆರೋಪಿತರು ಕೃತ್ಯದಲ್ಲಿ ಭಾಗಿಯಾದ ಬಗ್ಗೆ ತಿಳಿದು ಬಂದಿದ್ದು ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಎಸ್‌ಪಿ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.