ವ್ಯಾಸರಾಯರು ಕನ್ನಡ ಕೀರ್ತನೆಗಳ ಹರಿಕಾರರು. ಆವರು ತಮ್ಮ ಶಿಷ್ಯರಾದ ಪುರಂದರದಾಸರು ಹಾಗೂ ಕನಕದಾಸರಿಗೆ ಕನ್ನಡದಲ್ಲಿ ಕೀರ್ತನೆಗಳನ್ನು ಬರೆಯಲು ಉತ್ತೇಜಿಸಿದ್ದರು ಎಂದು ಹೆಗಡಿಹಾಳದ ಸರ್ಕಾರಿ ಹೈಸ್ಕೂಲ್‌ನ ಶಿಕ್ಷಕ ಶ್ರೀರಾಮ್ ಭಟ್ ಹೇಳಿದರು.
ನಗರದ ಗುಜ್ಜರಗಲ್ಲಿ ಗುರುವಿಠಲ ಕೃಪಾ ಭವನದಲ್ಲಿ ಶ್ರೀ ಕುಮಾರವ್ಯಾಸ ವೇದಿಕೆಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವ್ಯಾಸರಾಯರ ಆರಾಧನೆಯಲ್ಲಿ ಅವರು ಮಾತನಾಡಿದರು.
ವ್ಯಾಸರಾಯರು ಹಂಪೆಯಲ್ಲಿದ್ದು ಶ್ರೀಕೃಷ್ಣ ದೇವರಾಯ ಹಾಗೂ ಅಚ್ಯುತ ದೇವರಾಯರಿಗೆ ರಾಜಕೀಯ ಮಾರ್ಗದರ್ಶನ ನೀಡಿದ್ದು, ಅವರ ಮಹಿಮೆ ಅಪಾರ ಎಂದು ಹೇಳಿದರು.
ನಂತರ ನಡೆದ ಗಮಕ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ವಿರಚಿತ ಗದುಗಿನ ಭಾರತದ ವಿರಾಟ ಪರ್ವದ `ಧರ್ಮರಾಜನು ವಿರಾಟನ ಅರಮನೆಯಲ್ಲಿ ಗಾಯವಡೆದ ಪ್ರಸಂಗದ ಗಮಕ ವಾಚನ ವ್ಯಾಖ್ಯಾನ ಜರುಗಿತು. ಖ್ಯಾತ ಗಮಕಿ ಶಾಂತಾ ಕೌತಾಳ ಹಾಗೂ ಕಲ್ಯಾಣರಾವ್ ದೇಶಪಾಂಡೆ ಗಮಕ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು.