ವಿಜಯಪುರದ ವೀರಶೈವ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಡಾ. ಉಷಾದೇವಿ ಹಿರೇಮಠ ಉಪನ್ಯಾಸ ನೀಡಿದರು. ವಿ.ಸಿ. ನಾಗಠಾಣ, ಕೆ.ಎ-ï. ಅಂಕಲಗಿ ಮತ್ತಿತರರಿದ್ದರು.
Published on:
Copied
Follow Us
ವಿಜಯಪುರ: 12ನೇ ಶತಮಾನದ ಬಸವಾದಿ ಶರಣರು ಅಧ್ಯಾತ್ಮಿಕ ಸತ್ಯ, ತತ್ವಗಳನ್ನು ಸಾಮರಸ್ಯಗೊಳಿಸಿ ಅನುಭವಿಸಿ ನಿತ್ಯ, ಸತ್ಯ ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದ ಮಹಾಂತರು. ಅಂತಹ ವಚನಕಾರರಲ್ಲಿ ವೀರನಿಷ್ಠ ಶರಣ ಮಡಿವಾಳ ಮಾಚಿದೇವ ಒಬ್ಬರು ಎಂದು ಉಪನ್ಯಾಸಕಿ ಡಾ. ಉಷಾದೇವಿ ಹಿರೇಮಠ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದ ವತಿಯಿಂದ ನಗರದ ವೀರಶೈವ ಸಭಾಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 73ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶರಣ ಮಡಿವಾಳ ಮಾಚಿದೇವ ಅನುಭಾವ ಕುರಿತು ಅವರು ಉಪನ್ಯಾಸ ನೀಡಿದರು.
ಶರಣ ಪರಂಪರೆಯಲ್ಲಿಯೇ ಪರಿಪೂರ್ಣ ವಿಕಸನವಾದ ನವ್ಯ, ದಿವ್ಯ, ಭವ್ಯವಾದ ಸಾರ್ಥಕ ಬದುಕನ್ನು ಬಾಳಿ ಬೆಳಗಿದವರು ಬಸವಾದಿ ಶರಣರು. ಮಡಿವಾಳ ಮಾಚಿದೇವರು ದೇವರಹಿಪ್ಪರಗಿಯಲ್ಲಿ ಜನಿಸಿ ಧರ್ಮತತ್ವವನ್ನು ಲೋಕ ಪ್ರೀತಿಯ ಜತೆಗೆ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದವರು.
ಅಲ್ಲದೆ, ಕೆಳವರ್ಗದ ಜನರ ಕಾಳಜಿ ಸಮಸಮಾಜದ ನಿರ್ಮಾಣ ಎಲ್ಲ ವರ್ಗದ ಕಾಯಕ ಜೀವಿಗಳಾಗಿದ್ದರು. ಅವರು ಬಟ್ಟೆ ತೊಳೆದು ಮಡಿಮಾಡುವ ಕಾಯಕದ ಜತೆಗೆ ಗುರುವಿನಲ್ಲಿ ಅಪಾರ ಭಕ್ತಿ ಕಲ್ಲಿನಾಥ ಆರಾಧ್ಯ ದೇವರನ್ನು ವಲಿಸಿಕೊಂಡು ಮಹಿಮರಲ್ಲಿ ಮಹಾಮಹಿಮರಾಗಿ ಬದುಕಿದ್ದರು ಎಂದರು.
ಮಹಾಸಭೆ ಉಪಾಧ್ಯಕ್ಷೆ ವಿದ್ಯಾವತಿ ಅಂಕಲಗಿ ಮಾತನಾಡಿ, ನಮ್ಮ ನಡೆ, ನುಡಿ ಇನ್ನೊಬ್ಬರಿಗೆ ಮಾದರಿಯಾದಾಗ ಸಮಾಜದಲ್ಲಿ ನಮ್ಮ ಬದುಕಿನ ಅರ್ಥ ಬರುತ್ತದೆ ಎಂದರು.
ಮಹಾಸಭೆ ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ಶರಣ ತತ್ವ ಸಿದ್ಧಾಂತ ನಾವೆಲ್ಲ ಒಂದಾಗಿ ಅನುಸರಿಸುವ ಮೂಲಕ ಮುನ್ನಡೆಯೋಣ ಎಂದರು.
ವಿಡಿಎ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಗಂಗಾಧರ ಸಂಬಣ್ಣಿ ಅವರನ್ನು ಜಿಲ್ಲಾ ಮಹಾಸಭಾದ ವತಿಯಿಂದ ಸನ್ಮಾನಿಸಲಾಯಿತು. ಅಕ್ಕಮಹಾದೇವಿ ಬುರ್ಲಿ ವಚನಗೀತೆ ಹಾಡಿದರು. ಬಿ.ಟಿ. ಈಶ್ವರಗೊಂಡ ಸ್ವಾಗತಿಸಿದರು. ಸಾಹಿತಿ ಸಂಗಮೇಶ ಬಾದಾಮಿ ನಿರೂಪಿಸಿದರು. ಮ.ಗು. ಯಾದವಾಡ ವಂದಿಸಿದರು.