ಹಿರೇಮಸಳಿಯಲ್ಲಿ ನೀರಿಗಾಗಿ ಪರದಾಟ, ಆಟದ ಮೈದಾನದಂತೆ ಕಂಗೊಳಿಸುತ್ತಿದೆ ಹಳ್ಳ !

ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಬರಿದಾದ ಹಳ್ಳ.
ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಬರಿದಾದ ಹಳ್ಳ.
Published on

ಪ್ರಮುಖ ಮುಖ್ಯಾಂಶಗಳು

  • ಭೀಕರ ಬರದ ಪರಿಣಾಮ
  • ಬರಿದಾದ ಜಲಮೂಲಗಳು
  • ಕುಡಿಯುವ ನೀರಿಗೆ ಪರದಾಟ
  • ಸ್ಥಳೀಯ ಶಾಸಕರಲ್ಲಿ ಜನರ ಮನವಿ

ಇಂಡಿ: ಭೀಕರ ಬರದಿಂದಾಗಿ ಜನ ತತ್ತರಿಸಿದ್ದಾರೆ. ಇನ್ನೊಂದೆಡೆ ಹಳ್ಳಕೊಳ್ಳಗಳೆಲ್ಲ ಬರಿದಾಗಿದ್ದು ಜನ-ಜಾನುವಾರು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಹೀಗಾಗಿ ಕೂಡಲೇ ಕಾಲುವೆ ಮೂಲಕ ನೀರು ಹರಿಸಬೇಕೆಂಬ ಒತ್ತಾಯ ಬಲಗೊಂಡಿದೆ.

ಜಿಲ್ಲೆಯಲ್ಲಿಯೇ ದೊಡ್ಡದೆನ್ನಲಾದ ಇಂಡಿ ತಾಲೂಕಿನ ಹಿರೇಮಸಳಿಯ ಹಳ್ಳ ಸಂಪೂರ್ಣ ಬರಿದಾಗಿದ್ದು ಆಟದ ಮೈದಾನದಂತೆ ಕಂಗೊಳಿಸುತ್ತಿದೆ. ಹನಿ ನೀರು ಸಹ ಕಾಣದಾಗಿದ್ದು ಮರಭೂಮಿಯಂತೆ ಭಾಸವಾಗುತ್ತಿದೆ. ಕಳೆದ ಹಲವು ದಿನಗಳಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲದಾಗಿದೆ ಎಂದು ಮುಖಂಡ ಶಿವಾನಂದ ಕ್ಷತ್ರಿ ಹಾಗೂ ಗುರುರಾಜಗೌಡ ಪಾಟೀಲ ಆಕ್ರೋಶ ಹೊರಹಾಕಿದ್ದಾರೆ.
ವಿಜಯಪುರ ನಗರ ಹೊರವಲಯದಿಂದ ನಾಗಠಾಣ, ಅಥರ್ಗಾ ಮತ್ತು ತಾಂಬಾದಿಂದ ಹಿರೇಮಸಳಿ ತಲುಪಿ ಅಲ್ಲಿಂದ ಸಂಗೋಗಿ, ಶಿರಶ್ಯಾಡ, ನಾದ ಮೂಲಕ ಮಿರಗಿ ಬಳಿಯ ಭೀಮಾನದಿಗೆ ಸೇರುವ ಈ ಹಳ್ಳ ಅತೀ ದೊಡ್ಡದಾಗಿದ್ದು, ಈ ಎಲ್ಲ ಹಳ್ಳಿಗಳ ಜನ ಹಳ್ಳದ ನೀರನ್ನೇ ಅವಲಂಬಿಸಿದ್ದಾರೆ. ಕೆಲವೆಡೆ ಬಾಂದಾರ್‌ಗಳ ಮೂಲಕ ನೀರು ಹಿಡಿದಿಡಲಾಗಿದೆಯಾದರೂ ಹಿರೇಮಸಳಿಯಲ್ಲಿ ಮಾತ್ರ ಹನಿ ನೀರು ಸಹ ಇಲ್ಲದಾಗಿದೆ.
ಬಾಂದಾರ್‌ಗಳಿದ್ದರೂ ಪ್ರಯೋಜನವಿಲ್ಲದಾಗಿದೆ. ಕಾಲುವೆಯಿಂದಲೂ ನೀರು ಹರಿಸಲಾಗುತ್ತಿಲ್ಲ. ಹೀಗಾಗಿ ಕುಡಿಯುವ ನೀರು ಮರೀಚಿಕೆಯಾಗಿದೆಯಲ್ಲದೇ ದಿನಬಳಕೆಗೂ ನೀರಿನ ಸಮಸ್ಯೆ ಉಂಟಾಗಿದೆ. ಸ್ಥಳೀಯ ಅಧಿಕಾರಿಗಳು ಸಹ ಕ್ಯಾರೆ ಎನ್ನುತ್ತಿಲ್ಲವೆನ್ನುತ್ತಾರೆ ಮುಖಂಡ ನಬಿಲಾಲ ಸೌದಾಗರ ಹಾಗೂ ಸಿದ್ದು ಸುಣಗಾರ.
ಗ್ರಾಮದ ಸರಹದ್ದಿಯಲ್ಲಿರುವ ಸುಮಾರು 200 ವಸತಿಗಳು ಇದೇ ಹಳ್ಳದ ನೀರನ್ನು ಅವಲಂಬಿಸಿವೆ. ಮಳೆ ಕೈಕೊಟ್ಟಿದ್ದರಿಂದ ಸ್ವಲ್ಪ ಪ್ರಮಾಣ ಹಳ್ಳದ ನೀರಿನ ತೇವಾಂಶ ಕೂಡ ಸಹಾಯಕ್ಕೆ ಬರುತ್ತಿತ್ತು. ಈಗ ಅದು ಸಹ ಇಲ್ಲದಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದು ಅನೀಲ ಶಿವಣಗಿ, ರಜಾಕ ಮುಜಾವರ ಮತ್ತಿತರರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net