ಬದುಕಿಗೆ ನೀರು-ಗಾಳಿಯಷ್ಟೇ ಕೌಶಲವೂ ಮುಖ್ಯ, ಉದ್ಯೋಗ ಮೇಳ ಕುರಿತು ಕಾಂತಾ ನಾಯಕ ಮಾರ್ಮಿಕ ನುಡಿ
ವಿಜಯಪುರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಸುದ್ದಿಗೋಷ್ಠಿ ನಡೆಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿಜಯಪುರದಲ್ಲಿ ಉದ್ಯೋಗ ಮೇಳ
ದರಬಾರ್ ಮೈದಾನದಲ್ಲಿ ಸಿದ್ಧತೆ
ಫೆ. 2 ರಂದು ಎಂ.ಬಿ. ಪಾಟೀಲರಿಂದ ಉದ್ಘಾಟನೆ
ಸುಮಾರು 150 ಕಂಪನಿಗಳು ಭಾಗಿ
ವಿಜಯಪುರ: ‘ಬದುಕಲು ನೀರು ಮತ್ತು ಗಾಳಿ ಎಷ್ಟು ಮುಖ್ಯವೋ ಕೌಶಲ ಕೂಡ ಅಷ್ಟೇ ಮುಖ್ಯ, ಇಂದಿನ ತಂತ್ರಜ್ಞಾನ ಯುಗದಲ್ಲಿ ಯುವ ಜನತೆ ಕೌಶಲ ಅರಿತು ಉದ್ಯೋಗವಕಾಶ ಕಂಡುಕೊಳ್ಳಬೇಕು, ಈ ನಿಟ್ಟಿನಲ್ಲಿ ಫೆ. 2ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ಕರ್ನಾಟಕ ಕೌಶಲಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ಹೇಳಿದರು.
ನಿರುದ್ಯೋಗಿಗಳಿಗೆ ಕೌಶಲ ತರಬೇತಿ ನೀಡಿ ಉದ್ಯೋಗವಕಾಶ ಕಲ್ಪಿಸುವುದು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಉದ್ದೇಶವಾಗಿದೆ. ಬಾಲ್ಯದಿಂದಲೇ ಕೌಶಲ ಒದಗಿಸಬೇಕೆಂಬುದು ಸಿದ್ದರಾಮಯ್ಯ ಸರ್ಕಾರದ ಆಶಯ. ಹೀಗಾಗಿ ‘ನನ್ನ ವೃತ್ತಿ-ನನ್ನ ಆಯ್ಕೆ’ ಘೋಷವಾಕ್ಯದೊಂದಿಗೆ ಪ್ರಾಯೋಗಿಕವಾಗಿ ಕಾರ್ಯಕ್ರಮ ರೂಪಿಸಲಾಗಿದ್ದು, ಇದೀಗ ರಾಜ್ಯವ್ಯಾಪಿ ವಿಸ್ತರಿಸಲಾಗುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ನಗರದ ದರಬಾರ್ ಮೈದಾನದಲ್ಲಿ ನಡೆಯಲಿರುವ ಬೃಹತ್ ಮೇಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಉದ್ಘಾಟಿಸುವರು. ಸಚಿವರಾದ ಶರಣ ಪ್ರಕಾಶ ಪಾಟೀಲ, ಶಿವಾನಂದ ಪಾಟೀಲರಾದಿಯಾಗಿ ಅನೇಕ ಗಣ್ಯಾತಿಗಣ್ಯರು ಪಾಲ್ಗೊಳ್ಳುವರು. ಸುಮಾರು 150 ಕಂಪನಿಗಳು ಪಾಲ್ಗೊಳ್ಳುತ್ತಿವೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು, ಒಟ್ಟು 9609 ಜನ ನೋಂದಾಯಿಸಿಕೊಂಡಿದ್ದಾರೆ. ಮೇಳದ ದಿನವೂ ನೇರವಾಗಿ ಭಾಗವಹಿಸಬಹುದಾದರೂ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಕಾರಣ ತೊಂದರೆಯಾಗಲಿದೆ. ಹೀಗಾಗಿ ಮುಂಚಿತವಾಗಿಯೇ ನೋಂದಾಯಿಸಿಕೊಳ್ಳುವುದು ಒಳಿತು ಎಂದರು.
ನಿಗಮದ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂತ ಅನೇಕ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರಲಾಗಿದೆ. ಶಾಲೆ ಹಂತದಲ್ಲಿಯೇ ವೃತ್ತಿ ಮಾರ್ಗದರ್ಶನ ನೀಡಲಾಗುತ್ತಿದೆ. ಕಾಲೇಜು ಹಂತದಲ್ಲಿ ಕಲಿಕೆಯೊಂದಿಗೆ ಕೌಶಲ ಕಾರ್ಯಕ್ರಮ ರೂಪಿಸಲಾಗಿದೆ. ಸುಮಾರು 66 ಸಾವಿರ ಮಕ್ಕಳಿಗೆ ತರಬೇತಿ ನೀಡಿ ಏಳು ವಿಶ್ವ ವಿದ್ಯಾಲಯಗಳಿಗೆ ಕಳುಹಿಸಿಕೊಡಲಾಗಿದೆ. ಕೃತಕ ಬುದ್ದಿಮತ್ತೆ, ಕಂಟೆಂಟ್ ರೈಟರ್...ಹೀಗೆ ವಿವಿಧ ಕೌಶಲಗಳ ಕುರಿತು ಕಾರ್ಯಾಗಾರ ನಡೆಸಲಾಗಿದೆ ಎಂದರು.
ಯುವ ನಿಧಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರಿ ಇಲಾಖೆಗಳ ಮುಖಾಂತರವೇ ತರಬೇತಿ ಒದಗಿಸಲಾಗುತ್ತಿದೆ. ಆದರೆ ಬಹಳಷ್ಟು ಯುವಜನತೆ ತರಬೇತಿಯಿಂದ ಹಿಂದುಳಿಯುತ್ತಿದ್ದಾರೆ. ತರಬೇತಿ ಪಡೆದರೆ ಯುವ ನಿಧಿ ಸ್ಥಗಿತಗೊಳ್ಳುವ ಆತಂಕ ಕೆಲವರಲ್ಲಿದೆ. ಆದರೆ ಯಾವುದೇ ಕಾರಣಕ್ಕೂ ಯುವ ನಿಧಿ ನಿಲ್ಲಲ್ಲ ಎಂದು ಈಗಾಗಲೇ ಸಂಬಂಧಿಸಿದ ಸಚಿವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ತರಬೇತಿಗೆ ಪ್ರೇರೇಪಿಸಲಾಗುತ್ತಿದೆ ಎಂದರು.
ಜಲ ಜೀವನ ಮಿಷನ್ ಯೋಜನೆ ಪ್ರಗತಿಯಲ್ಲಿದ್ದು, ಇಡೀ ರಾಜ್ಯದಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೆ ಇಬ್ಬರು ಮಹಿಳೆಯರಿಗೆ ಪ್ಲಂಬಿಂಗ್ ಮತ್ತಿತರ ಕೌಶಲ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 121 ಮಹಿಳೆಯರಿಗೆ ತರಬೇತಿ ನೀಡಲಾಗಿದೆ. ಜೊತೆಗೆ ಕಿಟ್ ಕೂಡ ನೀಡಲಾಗಿದೆ. ರಾಣಿ ಚನ್ನಮ್ಮ ವಿವಿಯಿಂದ ವೆಬ್ ಡಿಸೈನಿಂಗ್ ತರಬೇತಿ ನೀಡಲಾಗುತ್ತಿದೆ. ಪಾರಂಪರಿಕ ಹಾಗೂ ಪ್ರಾದೇಶಿಕ ಕಲೆ ಆಧರಿಸಿ ಜಿಲ್ಲಾವಾರು ಅಳಿವಿನಂಚಿನಲ್ಲಿರುವ ಕೌಶಲ ಉಳಿಸಲು 500 ಜನರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.
ಕೃಷಿ, ಆರ್ಥಿಕ, ತಂತ್ರಜ್ಞಾನ, ಮಾನವ ಸಂಪನ್ಮೂಲ ಆಧರಿತ ಕಂಪನಿಗಳು ಪಾಲ್ಗೊಳ್ಳುತ್ತಿದ್ದು, ಉದ್ಯೋಗ ಸಿಗದಿದ್ದರೆ ಕೌಶಲದ ಕೊರತೆ ಕುರಿತು ಅಧ್ಯಯನ ನಡೆಸಿ ಮುಂದಿನ ತರಬೇತಿ ನೀಡಲಾಗುವುದು.
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬೃಹತ್ ಮೇಳ ಆಯೋಜಿಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ದಿನಾಂಕ ಕೂಡ ಪ್ರಕಟಗೊಳ್ಳಲಿದೆ. ಆ ಮೇಳಕ್ಕೆ ಪೂರಕವಾಗಿ ಈ ಜಿಲ್ಲಾ ಮಟ್ಟದ ಹಾಗೂ ಪ್ರಾದೇಶಿಕ ಮಟ್ಟದ ಮೇಳಗಳು ನಡೆಯಲಿವೆ ಎಂದರು.
ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ತಹಸೀಲ್ದಾರ್ ಪ್ರಶಾಂತ ಚನಗೊಂಡ, ವಾರ್ತಾ ಮತ್ತು ಪ್ರಚಾರ ಇಲಾಖೆ ಅಧಿಕಾರಿ ಅಮರೇಶ ದೊಡ್ಡಮನಿ, ಅಧಿಕಾರಿಗಳಾದ ಪ್ರಕಾಶ ಒಡ್ಡಾರ, ಗಂಗಾಧರ ದೇಸಾಯಿ, ಪಾಲಿಕೆ ಸದಸ್ಯೆ ಆರತಿ ಶಹಾಪುರ, ವಿನಯ ಪಾಟೀಲ ಮತ್ತಿತರರಿದ್ದರು.