ಆರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯ ಹಸ್ತ

ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದಿದ್ದರೂ ಶುಲ್ಕ ಭರಿಸಲಾಗದೆ ಪರದಾಡುತ್ತಿದ್ದ ವಿದ್ಯಾರ್ಥಿಗಳಿಗೆ ವಿಜಯಪುರದ ಗೃಹ ಕಚೇರಿಯಲ್ಲಿ ಸಚಿವ ಎಂ.ಬಿ. ಪಾಟೀಲ ಆರ್ಥಿಕ ನೆರವಿನ ಚೆಕ್ ವಿತರಿಸಿದರು. ಡಾ. ಆರ್.ವಿ. ಕುಲಕರ್ಣಿ, ಎಸ್.ಎಸ್. ಪಾಟೀಲ ಮತ್ತು ವಿದ್ಯಾರ್ಥಿಗಳಿದ್ದಾರೆ.
ನೀಟ್ ಪಾಸಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದಿದ್ದರೂ ಶುಲ್ಕ ಭರಿಸಲಾಗದೆ ಪರದಾಡುತ್ತಿದ್ದ ವಿದ್ಯಾರ್ಥಿಗಳಿಗೆ ವಿಜಯಪುರದ ಗೃಹ ಕಚೇರಿಯಲ್ಲಿ ಸಚಿವ ಎಂ.ಬಿ. ಪಾಟೀಲ ಆರ್ಥಿಕ ನೆರವಿನ ಚೆಕ್ ವಿತರಿಸಿದರು. ಡಾ. ಆರ್.ವಿ. ಕುಲಕರ್ಣಿ, ಎಸ್.ಎಸ್. ಪಾಟೀಲ ಮತ್ತು ವಿದ್ಯಾರ್ಥಿಗಳಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಬಡ ಪ್ರತಿಭಾವಂತರಿಗೆ ಓದಲು ನೆರವು ನೀಡಿದ ಸಚಿವ ಎಂ.ಬಿ.ಪಾಟೀಲ
  • ಆರ್ಥಿಕ ನೆರವು ಪಡೆದ ವಿದ್ಯಾರ್ಥಿಗಳು
  • ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿಗಳು
ವಿಜಯಪುರ: ನೀಟ್ ಪರೀಕ್ಷೆ ಪಾಸಾಗಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದರೂ ಆರ್ಥಿಕ ಸಮಸ್ಯೆಯಿಂದ ಸಂಕಷ್ಟದಲ್ಲಿದ್ದ ಆರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಹಣಕಾಸು ನೆರವಿನ ಸಹಾಯಹಸ್ತ ಚಾಚಿದ್ದಾರೆ. 
ನಗರದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಆರೂ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಕೋರ್ಸ್ನ ಪ್ರಥಮ ವರ್ಷದ ಬೋಧನಾ ಶುಲ್ಕ, ಊಟ ಮತ್ತು ವಸತಿಗೆ ಅಗತ್ಯ ಹಣದ 10,61,390 ರೂ. ಮೊತ್ತದ ಚೆಕ್ ವಿತರಿಸಿದರು. ಬಳಿಕ ಮಾತನಾಡಿದ ಸಚಿವರು, ವಿದ್ಯಾರ್ಥಿಗಳು ಆರ್ಥಿಕ ನೆರವು ಪಡೆದು ಶ್ರದ್ಧೆಯಿಂದ ಓದಿ ಕೀರ್ತಿ ತರಬೇಕೆಂದು ಹಾರೈಸಿದರು. ಬಿಎಲ್‌ಡಿಇ ಡೀಮ್ಡ್ ವಿವಿಯ ರಜಿಸ್ಟ್ರಾರ್ ಆರ್.ವಿ. ಕುಲಕರ್ಣಿ, ಅಕೌಂಟ್ಸ್ ಸುಪರಿಂಟೆಂಡೆಂಟ್ ಎಸ್.ಎಸ್. ಪಾಟೀಲ ಮತ್ತಿತರರಿದ್ದರು.

ಆರ್ಥಿಕ ನೆರವು ಪಡೆದ ವಿದ್ಯಾರ್ಥಿಗಳು

ಬಬಲೇಶ್ವರ ತಾಲೂಕಿನ ಹಲಗಣಿಯ ವಿದ್ಯಾರ್ಥಿ ಸುದೀಪ ಬಸವರಾಜ ಬಾವಲತ್ತಿ ನೀಟ್‌ನಲ್ಲಿ 43481ನೇ ಸ್ಥಾನ ಪಡೆದಿದ್ದು, ವಿದ್ಯಾರ್ಥಿಗೆ ಪ್ರಥಮ ವರ್ಷದ ಶುಲ್ಕ 1,54,150 ರೂ., ತಿಕೋಟಾದ ಸಚಿನ್ ಭೀಮಣ್ಣ ಮಾಳಿ ನೀಟ್‌ನಲ್ಲಿ 75173 ಸ್ಥಾನ ಪಡೆದು ಸದ್ಯ ಬಾಗಲಕೋಟೆಯ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದು, ಪ್ರಥಮ ವರ್ಷದ ಶುಲ್ಕ 1,56,621 ರೂ., ತಿಕೋಟಾ ತಾಲೂಕಿನ ಬಾಬಾನಗರದ ವಿದ್ಯಾರ್ಥಿನಿ ಪ್ರತೀಕ್ಷಾ ಶಿಂದೆ ನೀಟ್‌ನಲ್ಲಿ 1,754,50 ಸ್ಥಾನ ಪಡೆದು ಮಂಗಳೂರಿನ ಕುಂತಿಕಾನಾ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿನಿಗೆ ಪ್ರಥಮ ವರ್ಷದ ಶುಲ್ಕ 2,51,571 ರೂ., ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮದ ಸಂದೇಶ ನಂದ್ಯಾಳ ನೀಟ್‌ನಲ್ಲಿ ಪರೀಕ್ಷೆಯಲ್ಲಿ 1,62,446 ಸ್ಥಾನ ಪಡೆದು ಹಾವೇರಿಯ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನಲ್ಲಿ ಎಂಬಿಬಿಎಸ್ ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಾರೆ. ವಿದ್ಯಾರ್ಥಿಗೆ ಪ್ರಥಮ ವರ್ಷದ ಶುಲ್ಕ 1,48,400 ರೂ., ಚೆಕ್ ವಿತರಿಸಲಾಯಿತು. ವಿಜಯಪುರ ತಾಲೂಕಿನ ನಾಗಠಾಣದ ವಿದ್ಯಾರ್ಥಿನಿ ಭವಾನಿ ಬಗಲಿ ನೀಟ್‌ನಲ್ಲಿ 1,00,195 ಸ್ಥಾನ ಪಡೆದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿರುವ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆದಿದ್ದಾರೆ. ಅವರಿಗೆ ಪ್ರಥಮ ವರ್ಷದ ಶುಲ್ಕ 1,40,000 ರೂ., ತಿಕೋಟಾ ತಾಲೂಕಿನ ಹಂಚಿನಾಳ ಎಲ್ ಟಿ ನಂ. 3 ರ ವಿದ್ಯಾರ್ಥಿ ರೋಹಿತ ರಾಠೋಡ ನೀಟ್‌ನಲ್ಲಿ 1,10,929 ಸ್ಥಾನದಿಂದ ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಓದುತ್ತಿದ್ದು, ಪ್ರಥಮ ವರ್ಷದ ಶುಲ್ಕ 2,10,638 ರೂ. ಚೆಕ್‌ನ್ನು ಸಚಿವರು ವಿತರಿಸಿದರು.

ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿಗಳು ಮತ್ತು ಪೋಷಕರು 

 ಎಂಬಿಬಿಎಸ್ ಓದಿ ವೈದ್ಯರಾಗುವ ತಮ್ಮ ಕನಸು ನನಸಾಗಲು ಕಾರಣರಾದ ಸಚಿವ ಎಂ.ಬಿ. ಪಾಟೀಲರ ನೆರವಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕೃತಜ್ಞತೆ ಸಲ್ಲಿಸಿದರು. ಸಚಿವರು ದೇವರ ರೂಪದಲ್ಲಿ ಬಂದು ನಮಗೆ ನೆರವಾಗಿದ್ದಾರೆ. ಇಲ್ಲದಿದ್ದರೆ, ವೈದ್ಯಕೀಯ ಶಿಕ್ಷಣ ಓದಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net