ಎಸ್‌ಐಆರ್ ಪ್ರಕ್ರಿಯೆ ಪೂರ್ಣ, ಕೈ ಬಿಟ್ಟ ಮತದಾರರ ವಿವರ ನಿಗೂಢ

ಜಿಲ್ಲಾಡಳಿತದಿಂದ ಅಂತಿಮ ಪಟ್ಟಿ ಪ್ರಕಟ * ಎಂಟು ಕ್ಷೇತ್ರಗಳಲ್ಲಿ 17,08,099 ಓಟರ್ಸ್
ವಿಜಯಪುರ ಜಿಲ್ಲಾಡಳಿತ ಕಚೇರಿ.
ವಿಜಯಪುರ ಜಿಲ್ಲಾಡಳಿತ ಕಚೇರಿ.
Published on: 

ವಿಜಯಪುರ: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಂಗಳವಾರ ಅಂತಿಮ ಪಟ್ಟಿ ಬಿಡುಗಡೆಗೊಳಿಸಲಾಗಿದ್ದು, ಎಷ್ಟು ಮತದಾರರು ಹೊರಗುಳಿದರೆಂಬುದು ನಿಗೂಢವಾಗಿದೆ.

ಜಿಲ್ಲೆಯಲ್ಲಿ 8,69,149 ಪುರುಷರು, 8,38,768 ಮಹಿಳೆಯರು ಹಾಗೂ 182 ಇತರೆ ಸೇರಿ ಒಟ್ಟು 17,08,099 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ. ಆದರೆ, ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದ ‘ಕೈ ಬಿಟ್ಟ ಮತದಾರರ ವಿವರ’ಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಮತ್ತೂ ಗೊಂದಲ ಮುಂದುವರಿದಿದೆ.

ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆಯಡಿ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕರಡು ಪಟ್ಟಿ ಪ್ರಕಟಿಸಿದ ನಂತರ ಆಗಸ್ಟ್ 24ರಿಂದ ಅಕ್ಟೋಬರ್ 22ರವರೆಗೆ ಸಾರ್ವಜನಿಕರಿಂದ ಸ್ವೀಕರಿಸಲಾದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ, ಕರಡು ಮತದಾರರ ಪಟ್ಟಿಯಲ್ಲಿರುವ ಅಂಕಿ-ಅಂಶಗಳಿಗೂ ಮತ್ತು ಅಂತಿಮ ಮತದಾರರ ವಿವರಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ತುಲನಾತ್ಮಕವಾಗಿ ಮಾಹಿತಿ ನೀಡಲು ಹಿಂದೇಟು ಹಾಕಿದೆ.

*

ಕ್ಷೇತ್ರವಾರು ಮತದಾರರ ವಿವರ

ಅಂತಿಮ ಮತದಾರರ ಪಟ್ಟಿಯನ್ವಯ 26-ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ 98,548 ಪುರುಷರು, 96,713 ಮಹಿಳೆಯರು ಹಾಗೂ 25 ಇತರೆ ಮತದಾರರು ಸೇರಿ ಒಟ್ಟು 1,95,286 ಮತದಾರರಿದ್ದಾರೆ. 27-ದೇವರಹಿಪ್ಪರಗಿಕ್ಷೇತ್ರದಲ್ಲಿ 1,04,005 ಪುರುಷರು, 98,626 ಮಹಿಳೆಯರು ಹಾಗೂ 27 ಇತರೆ ಮತದಾರರು ಸೇರಿ ಒಟ್ಟು 2,02,658 ಮತದಾರರಿದ್ದಾರೆ. 28-ಬಸವನ ಬಾಗೇವಾಡಿ ಮತಕ್ಷೇತ್ರದಲ್ಲಿ 1,00,822 ಪುರುಷರು, 98,842 ಮಹಿಳೆಯರು ಹಾಗೂ 21 ಇತರೆ ಮತದಾರರು ಸೇರಿ ಒಟ್ಟು 1,99,685 ಮತದಾರರಿದ್ದಾರೆ.

29-ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ 1,03,812 ಪುರುಷರು, 1,00,131 ಮಹಿಳೆಯರು ಹಾಗೂ 9 ಇತರೆ ಮತದಾರರು ಸೇರಿ ಒಟ್ಟು 2,03,952 ಮತದಾರರಿದ್ದಾರೆ. 30-ಬಿಜಾಪುರ ನಗರ ಕ್ಷೇತ್ರದಲ್ಲಿ 1,04,158 ಪುರುಷರು, 1,08,869 ಮಹಿಳೆಯರು ಹಾಗೂ 41 ಇತರೆ ಮತದಾರರು ಸೇರಿ ಒಟ್ಟು 2,13,068 ಮತದಾರರಿದ್ದಾರೆ. 31-ನಾಗಠಾಣ ಮತಕ್ಷೇತ್ರದಲ್ಲಿ 1,24,682 ಪುರುಷರು, 1,17,855 ಮಹಿಳೆಯರು ಹಾಗೂ 12 ಇತರೆ ಮತದಾರರು ಸೇರಿ ಒಟ್ಟು 2,42,549 ಮತದಾರರಿದ್ದಾರೆ.

32-ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ 1,19,019 ಪುರುಷರು, 1,10,438 ಮಹಿಳೆಯರು ಹಾಗೂ 22 ಇತರೆ ಮತದಾರರು ಸೇರಿ ಒಟ್ಟು 2,29,479 ಮತದಾರರಿದ್ದಾರೆ. 33-ಸಿಂದಗಿ ಮತಕ್ಷೇತ್ರದಲ್ಲಿ 1,14,103 ಪುರುಷರು, 1,07,294 ಮಹಿಳೆಯರು ಹಾಗೂ 25 ಇತರೆ ಮತದಾರರು ಸೇರಿ ಒಟ್ಟು 2,21,422 ಮತದಾರರಿದ್ದಾರೆ. ಈ ಮೂಲಕ ಜಿಲ್ಲೆಯ ಎಂಟು ವಿಧಾನಸಭಾ ಮತಕ್ಷೇತ್ರಗಳಲ್ಲಿ ಒಟ್ಟು 17,08,099 ಮತದಾರರಿದ್ದಾರೆ.

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಂತಿಮ ಮತದಾರರ ಭಾವಚಿತ್ರ ಸಹಿತ ಹಾರ್ಡ್ ಪ್ರತಿ ಹಾಗೂ ಭಾವಚಿತ್ರ ರಹಿತ ಸಾಫ್ಟ್ ಪ್ರತಿಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ಒದಗಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net