ಸಿದ್ದಲಿಂಗಯ್ಯನವರ ಸಾಹಿತ್ಯದ ಕೊಡುಗೆ ಅನನ್ಯ

ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ. ಸಿದ್ದಲಿಂಗಯ್ಯ ಕವಿಗಳ ಕುರಿತ ವಿಶೇಷ ಚಿಂತನಾಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಮಲ್ಲಿಕಾರ್ಜುನ ಮೇತ್ರಿ, ಶಿವಾಜಿ ಮೋರೆ, ಅಭಿಷೇಕ ಚಕ್ರವರ್ತಿ ಮತ್ತಿತರರಿದ್ದಾರೆ.
ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ. ಸಿದ್ದಲಿಂಗಯ್ಯ ಕವಿಗಳ ಕುರಿತ ವಿಶೇಷ ಚಿಂತನಾಗೋಷ್ಠಿಯನ್ನು ಗಣ್ಯರು ಉದ್ಘಾಟಿಸಿದರು. ಮಲ್ಲಿಕಾರ್ಜುನ ಮೇತ್ರಿ, ಶಿವಾಜಿ ಮೋರೆ, ಅಭಿಷೇಕ ಚಕ್ರವರ್ತಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಾಹಿತಿ ಮಲ್ಲಿಕಾರ್ಜುನ ಮೇತ್ರಿ ಅಭಿಮತ
  • ವಿಶೇಷ ಚಿಂತನಾಗೋಷ್ಠಿ
ವಿಜಯಪುರ: ಟಿ. ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯ ಲೋಕದ ದಿಗ್ಗಜರು. ದಲಿತ ಚಳವಳಿಯ ಪ್ರಮುಖ ರೂವಾರಿ ಹಾಗೂ ಹೊಲೆ ಮಾದಿಗರ ಹಾಡು, ಊರು-ಕೇರಿ ಸೇರಿ ಮುಂತಾದ ಮರೆಯಲಾಗದ ಕೃತಿಗಳನ್ನು ನೀಡುವ ಜತೆಗೆ ಜನಪರ ಕವಿಯಾಗಿದ್ದ ಡಾ. ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅನನ್ಯವಾದದ್ದು ಎಂದು ಸಾಹಿತಿ ಮಲ್ಲಿಕಾರ್ಜುನ ಮೇತ್ರಿ ಹೇಳಿದರು.
ನಗರದ ಕಸಾಪ ಸಭಾಂಗಣದಲ್ಲಿ ಕಸಾಪ ಜಿಲ್ಲಾ ಘಟಕ ಮತ್ತು ಹಿಟ್ಟಿನಹಳ್ಳಿ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಡಾ. ಸಿದ್ದಲಿಂಗಯ್ಯ ಕವಿಗಳ ಕುರಿತು ಭಾನುವಾರ ಹಮ್ಮಿಕೊಂಡಿದ್ದ ವಿಶೇಷ ಚಿಂತನಾಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದಲಿಂಗಯ್ಯನವರು ಒಂದು ಸಮುದಾಯದ ಧ್ವನಿಯಾಗಿ ಹೊರಹೊಮ್ಮಿದ್ದರು ಎಂದರು.
ಮೂರು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಕಾವ್ಯ, ನಾಟಕ, ವಿಮರ್ಶೆ ಹಾಗೂ ಆತ್ಮಕಥನ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಸಿದ್ದಲಿಂಗಯ್ಯನವರು, ಶೋಷಿತರ ನೋವುಗಳಿಗೆ ತಮ್ಮ ಲೇಖನಿಯ ಮೂಲಕ ಧ್ವನಿಯಾಗಿದ್ದರು. ಅವರ ಕವಿತೆಗಳು ಬಂಡಾಯ ಸಾಹಿತ್ಯದ ಪ್ರಮುಖ ಮೈಲಿಗಲ್ಲುಗಳಾಗಿ ನಿಲ್ಲುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಮಾತನಾಡಿ, ನೊಂದವರನ್ನೇ ತಮ್ಮ ಕಾವ್ಯದ ಧ್ವನಿಯಾಗಿ ಬಳಸಿಕೊಂಡು, ಜನರ ನೋವನ್ನು ಅಕ್ಷರ ರೂಪದಲ್ಲಿ ಹೊರಹಾಕುವ ಕಾವ್ಯಗಳನ್ನು ರಚಿಸುವ ಮೂಲಕ ಸಿದ್ದಲಿಂಗಯ್ಯನವರು ಓರ್ವ ಸಂವೇದನಾಶೀಲ ಕವಿಯಾಗಿದ್ದರು ಎಂದು ತಿಳಿಸಿದರು.
ಸಾಹಿತಿ ಶರಣಮ್ಮ ಹಾದಿಮನಿ ಡಾ. ಸಿದ್ದಲಿಂಗಯ್ಯನವರ ಕುರಿತು ವಿಶೇಷ ಉಪನ್ಯಾಸ ನೀಡಿ, ಸದಾ ಶೋಷಿತರ ಪರವಾಗಿ ಮಿಡಿಯುತ್ತಿದ್ದ ಮನಸ್ಸು ಸಿದ್ದಲಿಂಗಯ್ಯ ಅವರದಾಗಿತ್ತು. ಶಿಷ್ಟ ಕಾವ್ಯ ಪರಂಪರೆ ಮುರಿದು ತಮ್ಮದೇ ಆದ ದಿಟ್ಟ, ನೇರ ಭಾಷೆಯಿಂದ ಬಂಡಾಯದ ಕವಿತೆಗಳನ್ನು ಬರೆಯುವ ಮೂಲಕ ಸದಾ ಶೋಷಿತರ ಪರವಾಗಿ ಮಿಡಿಯುತ್ತಿದ್ದರು ಎಂದರು.
ವೇದಿಕೆಯಲ್ಲಿ ಉಪಸ್ಥಿತಿ ವಹಿಸಿದ್ದ ಬಸವರಾಜ ಸೋಮಪುರ, ಶರಣಗೌಡ ಪಾಟೀಲ, ಶಶಿಕಲಾ ಗುರು ಸ್ಥಾವರಮಠ, ಪರವೀನಬಾನು ಶೇಖ ಹಾಗೂ ಶಿವಾಜಿ ಮೋರೆ ಮಾತನಾಡಿದರು.
ಸುನಂದಾ ಕೋರಿ ಪ್ರಾರ್ಥಿಸಿದರು. ರಿಯಾಜ್ ಪಿಂಜಾರ ಸ್ವಾಗತಿಸಿದರು. ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಭಾಗೀರಥಿ ಸಿಂಧೆ ವಂದಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಅರ್ಜುನ ಶಿರೂರ, ಬಸನಗೌಡ ಬಿರಾದಾರ, ರವಿ ಕಿತ್ತೂರ, ಮಲ್ಲಿಕಾರ್ಜುನ ಕೆಳಗಡೆ, ಜಿ.ಎಸ್. ಬಳ್ಳೂರ, ಶ್ರೀಕಾಂತ ನಾಡಗೌಡ, ಭಾಗೀರಥಿ ಶಿಂಧೆ, ಅಹಮ್ಮದ ವಾಲೀಕಾರ, ಬಸವರಾಜ ಪಟ್ಟಣಶೆಟ್ಟಿ, ಪರಶುರಾಮ ಚಲವಾದಿ, ಸರೋಜನಿ ಬಡಿಗೇರ, ಜಯಶ್ರೀ ಬಡಿಗೇರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net