ಪರಿಸರ ಮಾಲಿನ್ಯ ಕಲುಷಿತಗೊಂಡ ನೀರು ಕುಡಿದು ಪಕ್ಷಿಗಳ ಮಾರಣಹೋಮ
ಜನತೆಯಲ್ಲಿ ಆತಂಕ
ಚಡಚಣ:ತಾಲೂಕಿನ ಹತ್ತಳ್ಳಿ ಗ್ರಾಮದ ಬೋರಿ ಹಳ್ಳದಲ್ಲಿ ನೂರಾರು ಪಕ್ಷಿಗಳು ಹಾಗೂ ಕೆಲವು ಕಾಡು ಪ್ರಾಣಿಗಳು ಸಾಯುತ್ತಿರುವುದು ಹಳ್ಳ ದಡದಲ್ಲಿರುವ ಜನರಲ್ಲಿ ಆತಂಕ ಮೂಡಿದೆ.
ಗ್ರಾಮಗಳ ಚರಂಡಿ ನೀರನ್ನು ನೇರವಾಗಿ ಬೋರಿ ಹಳ್ಳಕ್ಕೆ ಹರಿಬಿಟ್ಟಿರುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ಮತ್ತು ಬೇಸಿಗೆಯ ಕಾಲದಲ್ಲಿ ಹಳ್ಳ ಸಂಪೂರ್ಣ ಬತ್ತಿರುವುದರಿಂದ ಪಕ್ಷಿಗಳ ಸಾವಿಗೆ ಕಾರಣವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳ್ಳದ ಸುತ್ತಮುತ್ತ ನವಿಲು, ಬಾತುಕೋಳಿ ಸೇರಿ ವಿವಿಧ ಪಕ್ಷಿ ಹಾಗೂ ನರಿ ಮುಂತಾದ ಕಾಡು ಪ್ರಾಣಿಗಳು ಸತ್ತ ಸ್ಥಿತಿಯಲ್ಲಿ ಪತ್ತೆಯಾಗುತ್ತಿವೆ.
ಹಳ್ಳದಲ್ಲಿ ನಿಂತ ನೀರು ದುರ್ವಾಸನೆಯಿಂದ ಕಲುಷಿತಗೊಂಡಿದ್ದು, ಇದನ್ನು ಕುಡಿದ ಪಕ್ಷಿಗಳು ಮತ್ತು ಪ್ರಾಣಿಗಳು ಸಾವನ್ನಪ್ಪುತ್ತಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ರಾಷ್ಟ್ರಪಕ್ಷಿ ನವಿಲುಗಳ ಸಾವು ಜನರಲ್ಲಿ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
ಗ್ರಾಮಸ್ಥರ ಪ್ರಕಾರ ಚಡಚಣ ಪಟ್ಟಣದ ಒಳ ಚರಂಡಿ ನೀರನ್ನು ಯಾವುದೇ ಶುದ್ಧೀಕರಣವಿಲ್ಲದೆ ನೇರವಾಗಿ ಹಳ್ಳಕ್ಕೆ ಬಿಡಲಾಗುತ್ತಿದೆ. ಇದರಿಂದ ಹಳ್ಳದ ನೀರು ಸಂಪೂರ್ಣವಾಗಿ ಕಲುಷಿತಗೊಂಡು ವಿಷಮಯವಾಗಿದೆ.
ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಇರುವುದರಿಂದ ಪಕ್ಷಿಗಳು ಹಳ್ಳದಲ್ಲಿ ನಿಂತ ಇದೇ ನೀರನ್ನು ಕುಡಿಯಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದು, ಅದರ ಪರಿಣಾಮವಾಗಿ ಸಾವುಗಳು ಹೆಚ್ಚಾಗುತ್ತಿವೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ನೀರಾವರಿ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿರುದ್ಧ ಗಂಭೀರ ನಿರ್ಲಕ್ಷ್ಯ ಆರೋಪಗಳು ಕೇಳಿ ಬರುತ್ತವೆ. ಹಳ್ಳದ ನಿರ್ವಹಣೆ, ಶುದ್ಧೀಕರಣ ಹಾಗೂ ನೀರಿನ ಸಂರಕ್ಷಣೆ ಕುರಿತು ಯಾವುದೇ ಕ್ರಮ ಕೈಗೊಳ್ಳದಿರುವುದು ಈ ದುರಂತಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೆಲವರು ರೈತರು ಬಳಸುವ ಕೀಟನಾಶಕ ಔಷಧ ಅಥವಾ ಸಮೀಪದ ಕೈಗಾರಿಕಾ ಘಟಕಗಳ ಮಾಲಿನ್ಯವೂ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ನಿಖರ ಕಾರಣವನ್ನು ವೈಜ್ಞಾನಿಕ ತನಿಖೆಯ ನಂತರವೇ ತಿಳಿದು ಬರಬೇಕಾಗಿದೆ.
ತಕ್ಷಣ ಅರಣ್ಯ ಇಲಾಖೆ, ಪರಿಸರ ಇಲಾಖೆ ಹಾಗೂ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನೀರಿನ ಮಾದರಿ ಹಾಗೂ ಸತ್ತ ಪಕ್ಷಿಗಳ ಮಾದರಿಗಳನ್ನು ಪರೀಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜತೆಗೆೆ ಹಳ್ಳಕ್ಕೆ ಹೊಂದಿಕೊಂಡಿರುವ ಗ್ರಾಮಗಳು ಮತ್ತು ಚಡಚಣ ಪಂಚಾಯಿತಿಯಿಂದ ಚರಂಡಿ ನೀರನ್ನು ಹಳ್ಳಕ್ಕೆ ಬಿಡುವುದನ್ನು ತಕ್ಷಣ ನಿಲ್ಲಿಸಿ, ಶುದ್ಧೀಕರಣ ಘಟಕ ಸ್ಥಾಪನೆ ಮಾಡಿ ಪರಿಸರ ಸಂರಕ್ಷಣೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ದುರ್ಘಟನೆ ಗ್ರಾಮ ಪಂಚಾಯಿತಿ ಮತ್ತು ಚಡಚಣ ಪಟ್ಟಣ ಪಂಚಾಯಿತಿಯ ನಿರ್ಲಕ್ಷದ ವಿರುದ್ಧ ಹಾಗೂ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಪಕ್ಷಿಗಳ ಸಾವಿನ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಸಂಪೂರ್ಣ ತನಿಖಾ ವರದಿ ಬಂದ ಮೇಲೆ ಪಕ್ಷಿಗಳ ಸಾವಿಗೆ ಏನು ಕಾರಣ? ಎಂಬುದು ತಿಳಿದು ಬರಲಿದೆ.
"
ಚಡಚಣ ಪಟ್ಟಣ ಪಂಚಾಯಿತಿಯ ಒಳಚರಂಡಿ ನೀರಿನ ಫಿಲ್ಟರ್ ಮಾಡುವ ಘಟಕ ಸ್ಥಾಪಿಸಲು ಕ್ರಮ ಕೈಗೊಂಡಿದ್ದೇವೆ. ಶೀಘ್ರದಲ್ಲಿ ಒಳಚರಂಡಿ ನೀರನ್ನು ಫಿಲ್ಟರ್ ಮಾಡಿ ಬೋರಿ ಹಳ್ಳಕ್ಕೆ ಬಿಡಲಾಗುವುದು.