ಸಂಗೀತಾ ತೇಲಿ ವಿರಚಿತ ಚೊಚ್ಚಲ ಕವನ ಸಂಕಲನ, ‘ಬಯಕೆಯ ಬಳ್ಳಿ’ ಪುಸ್ತಕ ಲೋಕಾರ್ಪಣೆ

ವಿಜಯಪುರ ನಗರದ ಪ್ರವಾಸೋದ್ಯಮ ಇಲಾಖೆಯ ಆರ್ಟ್ ಗ್ಯಾಲರಿಯಲ್ಲಿ ಸಂಗೀತಾ ತೇಲಿ ವಿರಚಿತ ‘ಬಯಕೆಯ ಬಳ್ಳಿ’ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಜಂಟಿ ನಿರ್ದೇಶಕ ರಾಹುಲ್‌ಕುಮಾರ ಭಾವಿದೊಡ್ಡಿ, ಸಾಹಿತಿ ಮನು ಪತ್ತಾರ, ಆರ್.ಎಸ್. ಪಾಟೀಲ ಕೂಚಬಾಳ ಮತ್ತಿತರರಿದ್ದಾರೆ.
ವಿಜಯಪುರ ನಗರದ ಪ್ರವಾಸೋದ್ಯಮ ಇಲಾಖೆಯ ಆರ್ಟ್ ಗ್ಯಾಲರಿಯಲ್ಲಿ ಸಂಗೀತಾ ತೇಲಿ ವಿರಚಿತ ‘ಬಯಕೆಯ ಬಳ್ಳಿ’ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಜಂಟಿ ನಿರ್ದೇಶಕ ರಾಹುಲ್‌ಕುಮಾರ ಭಾವಿದೊಡ್ಡಿ, ಸಾಹಿತಿ ಮನು ಪತ್ತಾರ, ಆರ್.ಎಸ್. ಪಾಟೀಲ ಕೂಚಬಾಳ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಪ್ರವಾಸೋದ್ಯಮ ಇಲಾಖೆಯಲ್ಲಿ ಕಾರ್ಯಕ್ರಮ
  • ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭಾಗಿ
  • ಸಾಹಿತಿಗಳಿಂದ ಅಭಿಪ್ರಾಯಗಳ ವಿನಿಮಯ
ವಿಜಯಪುರ: ತೋಟಗಾರಿಕೆ ಇಲಾಖೆಯ ಅಧಿಕಾರಿಯೂ ಆಗಿರುವ ಸಂಗೀತಾ ತೇಲಿ ವಿರಚಿತ ‘ಬಯಕೆಯ ಬಳ್ಳಿ’ ಕವನ ಸಂಕಲನ ಬುಧವಾರ ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿತು.
ನಗರದ ಪ್ರವಾಸೋದ್ಯಮ ಇಲಾಖೆಯ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆ ಅಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರಾಹುಲ್‌ಕುಮಾರ ಭಾವಿದೊಡ್ಡಿ ಮಾತನಾಡಿ, ಸಾಹಿತ್ಯ ಎಂಬುದು ಕೇವಲ ಪದಗಳ ಜೋಡಣೆವಲ್ಲ; ಅದು ಮನಸ್ಸಿನ ನಿಜ ಸ್ವರೂಪವನ್ನು ಪ್ರತಿಬಿಂಬಿಸುವ ಕನ್ನಡಿಯಾಗಿದೆ. ಅನುಭವಗಳ ಆಳ ಭಾವಗಳ ವ್ಯಾಪ್ತಿ ಜೀವನಗಳ ಸತ್ಯ ಸೌಂದರ್ಯಗಳ ಸಂಗಮವೇ ಕಾವ್ಯವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಮಣ್ಣು ಮತ್ತು ಸಸಿ, ಹಣ್ಣುಗಳ ಸಂರಕ್ಷಣೆ ಮತ್ತು ಪೋಷಣೆಯಲ್ಲಿ ತೊಡಗಿಸಿಕೊಂಡಿರುವ ಸಂಗೀತಾ ತೇಲಿ ಅವರು ಸಾಹಿತ್ಯದೊಂದಿಗೆ ಆಸಕ್ತಿ ಹೊಂದಿ ತಮ್ಮ ಚೊಚ್ಚಲ ಪುಸ್ತಕವನ್ನು ರಚಿಸಿದ್ದು, ಇವರ ಸಾಹಿತ್ಯ ಪಯಣ ಯಶಸ್ವಿಯಾಗಲಿ ಮತ್ತು ಕನ್ನಡದ ಸಾಹಿತ್ಯಿಕ, ಸಾಂಸ್ಕೃತಿಕ ವಲಯದಲ್ಲಿ ಇವರು ಗುರುತಿಸಿಕೊಳ್ಳಲಿ ಎಂದು ಆಶಿಸಿದರು.
ಸಾಹಿತಿ ಮನು ಪತ್ತಾರ ಮಾತನಾಡಿ, ಬಯಕೆಯ ಬಳ್ಳಿಯಲ್ಲಿ 30 ಹನಿ ಕವನಗಳಿವೆ. ಮಲ್ಲಿಗೆ ಹೂವಿನ ಪರಿಮಳ ಸೂಸುವ ಹಾಗೂ ಸತ್ಯ-ಮಿಥ್ಯಗಳ ನಂಬಿಕೆ ಕುರಿತು ಕವನಗಳು ಬೆಳಕು ಚೆಲ್ಲುತ್ತವೆ. ಕನಸು ನನಸುಗಳ ನಡುವೆ ಮೌನವಾಗಿ ಹೆಜ್ಜೆ ಹಾಕುತ್ತಲೆ ಬದುಕಿನ ಸಂದರ್ಶನವನ್ನು ಹೇಳಿಹೊರಟಿರುವ ಸಾಧ್ಯತೆಗಳು ಈ ಹನಿಕವನಗಳಲ್ಲಿ ಗೋಚರಿಸುತ್ತವೆ ಎಂದರು.
ಪತ್ರಕರ್ತ ಪರಶುರಾಮ ಭಾಸಗಿ ಮಾತನಾಡಿ, ಬಯಕೆಯ ಬಳ್ಳಿಯ ಪುಸ್ತಕದಲ್ಲಿನ ಮಾಯೆಯ ಮರಳು ಕವನಗಳ ಸಾಲುಗಳನ್ನು ಓದುವ ಮೂಲಕ, ಸಂಗೀತಾ ಅವರ ಕವಿತೆಗಳು ಭಾವನೆಗಳ ಪ್ರತಿಬಿಂಬವಾಗಿವೆ ಎಂದರು.
ಮುಖಂಡ ಆರ್.ಎಸ್. ಪಾಟೀಲ ಕೂಚಬಾಳ, ಅಧಿಕಾರಿಗಳಾದ ಅರವಿಂದ ಹೂಗಾರ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಸನಗೌಡ ಪಾಟೀಲ ಮಾತನಾಡಿ, ಸಂಗೀತಾ ಅವರ ಸಾಹಿತ್ಯ ಸೇವೆಯನ್ನು ಕೊಂಡಾಡಿದರು.
ಲೇಖಕಿ ಸಂಗೀತಾ ರಾ. ತೇಲಿ ಪುಸ್ತಕದ ಕುರಿತು ತಮ್ಮ ಅನುಭವ ಹಂಚಿಕೊಳ್ಳುತ್ತಾ, ‘ಈ ಕೃತಿಯಲ್ಲಿ ನನ್ನ ಮನದಾಳದ ಭಾವನೆಗಳ ಜೊತೆಗೆ ಬದುಕಿನ ವಿವಿಧ ಅನುಭವ, ನೋವುಗಳು ಪ್ರತಿಬಿಂಬಿಸಿರುವೆ. ಅದರಂತೆ ಜೀವನದಲ್ಲಿ ಸಣ್ಣ ಕ್ಷಣಗಳು, ಪ್ರಕೃತಿಯ ಸೌಂದರ್ಯ ಮತ್ತು ಮಾನವ ಸಂಬಂಧಗಳು ಬರೆಯಲು ಪ್ರೇರಣೆ ನೀಡಿವೆ’ ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಅಮರೇಶ ದೊಡಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಹಾಯಕ ತೋಟಗಾರಿಕೆ ನಿರ್ದೇಶಕ ಭಗವಂತ ಜಿಗಜಿಣಗಿ ನಿರೂಪಿಸಿದರು. ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಶಾಲಿನಿ ಎಸ್. ತಳಕೇರಿ, ರಾಯಗೊಂಡ ಶಿವಪ್ಪ ತೇಲಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net