ಲಿಂಗಾಯತ ನಾಶ ಆರ್‌ಎಸ್‌ಎಸ್‌ನ ಟೂಲ್‌ಕಿಟ್, ಬಸವ-ದಲಿತಪರ ನಾಯಕರ ಜಂಟಿ ಹೇಳಿಕೆ

ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಬಸವ ಹಾಗೂ ದಲಿತಪರ ನಾಯಕರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಡಾ.ರವಿ ಬಿರಾದಾರ, ಅಡಿವೆಪ್ಪ ಸಾಲಗಲ್ಲ, ಮಹಾದೇವಿ ಗೋಕಾಕ ಇತರರಿದ್ದಾರೆ.
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಬಸವ ಹಾಗೂ ದಲಿತಪರ ನಾಯಕರು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು. ಡಾ.ರವಿ ಬಿರಾದಾರ, ಅಡಿವೆಪ್ಪ ಸಾಲಗಲ್ಲ, ಮಹಾದೇವಿ ಗೋಕಾಕ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಕನ್ಹೇರಿ ಸ್ವಾಮೀಜಿ ವಿರುದ್ಧ ವಾಗ್ದಾಳಿ
  • ಬಿಜೆಪಿ ಮುಖಂಡರ ಹೇಳಿಕೆಗೆ ಪ್ರತಿಕ್ರಿಯೆ
  • ಬಸವ ತತ್ವ ನಾಶಗೊಳಿಸುವ ಹುನ್ನಾರ
ವಿಜಯಪುರ: ‘ಶರಣರ ಕಗ್ಗೊಲೆ ನಡೆದೇ ಇಲ್ಲ ಎನ್ನುವುದು, ಲಿಂಗಾಯತರ ಒಗ್ಗಟ್ಟು ಮುರಿಯುವುದು, ಬಸವಾದಿ ಶರಣರ ಆಶಯಗಳನ್ನು ಹತ್ತಿಕ್ಕುವುದು, ಬಸವಣ್ಣ ಲಿಂಗಾಯತ ಧರ್ಮವನ್ನೇ ಸ್ಥಾಪಿಸಿಲ್ಲ ಎನ್ನುವುದು, 12ನೇ ಶತಮಾನದಲ್ಲಿ ಯಾವುದೇ ಚಳುವಳಿ ನಡೆದಿಲ್ಲ; ಕೇವಲ ಭಕ್ತಿ ಚಳುವಳಿ ಮಾತ್ರ ನಡೆದಿದೆ ಎನ್ನುವುದು, ಬಸವತತ್ವ ಪರಿಪಾಲಕರನ್ನು ತಾಲಿಬಾನಿಗಳಿಗೆ ಹೋಲಿಸುವುದು...ಇವೆಲ್ಲ ಆರ್‌ಎಸ್‌ಎಸ್‌ನ ಟೂಲ್‌ಕಿಟ್’ ಎಂದು ಬಸವಾದಿ ಶರಣರ ಅನುಯಾಯಿಗಳು ಹಾಗೂ ದಲಿತ ಸಂಘಟನೆಗಳ ಪ್ರಮುಖರು ಜಂಟಿಯಾಗಿ ಆರೋಪಿಸಿದರು.
‘ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರನ್ನು ಬಳಸಿಕೊಂಡು ಲಿಂಗಾಯತವನ್ನೇ ಹತ್ತಿಕ್ಕುವ ಮತ್ತು ಲಿಂಗಾಯತರಲ್ಲೇ ಜಗಳ ಹಚ್ಚುವ ಕೆಲಸ ಆರ್‌ಎಸ್‌ಎಸ್ ಮಾಡುತ್ತಿದೆ. ರವಿ ಹಂಜ್ ಎಂಬ ವ್ಯಕ್ತಿಯ ಮೂಲಕ ನಿರಂತರವಾಗಿ ಸುಳ್ಳು ಲೇಖನಗಳನ್ನು ಬರೆಯಿಸಲಾಗುತ್ತಿದೆ, ಬಸವತತ್ವವನ್ನು ಕಮ್ಯುನಿಸ್ಟರಿಗೆ ಹೋಲಿಸಲಾಗುತ್ತಿದೆ, ಕನ್ಹೇರಿ ಸ್ವಾಮೀಜಿ ಮೂಲಕ ಬಸವಾದಿ ಶರಣರ ಆಶಯವನ್ನೇ ಬುಡಮೇಲು ಮಾಡುತ್ತಿದೆ’ ಎಂದು ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಮುಖಂಡ ಡಾ.ರವಿ ಬಿರಾದಾರ ಮಾತನಾಡಿ, ‘ಬಿಜೆಪಿ ಮುಖಂಡರಾದ ಸುರೇಶ ಬಿರಾದಾರಗಾಗಲಿ, ಗುರುಲಿಂಗಪ್ಪ ಅಂಗಡಿಗಾಗಲಿ ಬಸವಾದಿ ಶರಣರ ಕುರಿತು ಗಂಧ-ಗಾಳಿಯೂ ಗೊತ್ತಿಲ್ಲ. ಲಿಂಗಾಯತರೆನ್ನಿಸಿಕೊಳ್ಳುವ ಇವರ ಬಾಯಲ್ಲಿ ನಾಲ್ಕೇ ನಾಲ್ಕು ವಚನಗಳೂ ಬರಲ್ಲ, ಆರ್‌ಎಸ್‌ಎಸ್ ಬರೆದುಕೊಟ್ಟ ಸ್ಕ್ರಿಪ್ಟ್ ಓದಿ ಹೇಳುವುದಷ್ಟೇ ಇವರಿಗೆ ಗೊತ್ತು, ಆ ಮೂಲಕ ಹೆತ್ತ ತಾಯಿಗೆ ಅವಮಾನ ಮಾಡುತ್ತಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.
‘ಕಲ್ಯಾಣದಲ್ಲಿ 1.96 ಲಕ್ಷ ಶರಣರು ಇದ್ದರೆಂಬುದಕ್ಕೆ ಶರಣರು ಬರೆದ ವಚನಗಳೇ ಸಾಕ್ಷಿ. ದಲಿತ ಹಾಗೂ ಬ್ರಾಹ್ಮಣರು ಲಿಂಗಾಯತ ಧರ್ಮ ಸ್ವೀಕರಿಸಿದ್ದರಿಂದ ಮದುವೆ ಮಾಡಿಸಿದರು-ಎಳೆಹೂಟೆ ಶಿಕ್ಷೆ ಕೊಟ್ಟರು, ಬಿಜ್ಜಳನ ಕೊಲೆ ಆಗುತ್ತದೆ, ವಚನ ಕಟ್ಟು ಹೊತ್ತು ಶರಣರು ಬೇರೆ ಬೇರೆ ದಿಕ್ಕಿಗೆ ಪಲಾಯಾನ ಮಾಡುತ್ತಾರೆ, ಚನ್ನಬಸವಣ್ಣನವರ ನೇತೃತ್ವದಲ್ಲಿ ಉಳವಿ ಕಡೆ, ಮಡಿವಾಳ ಮಾಚಿದೇವ ಕುಡಚಿ ಕಡೆ, ಅಲ್ಲಮಪ್ರಭುಗಳು, ಅಕ್ಕಮಹಾದೇವಿ ಶ್ರೀಶೈಲ ಕಡೆ ಹಾಗೂ ಬಸವಣ್ಣನವರು ಕೂಡಲ ಸಂಗಮದ ಕಡೆ...ಹೀಗೆ ಶರಣರು ದಿಕ್ಕಾಪಾಲಾಗುತ್ತಾರೆ, ತಮ್ಮ ಪ್ರಾಣವನ್ನು ಲೆಕ್ಕಿಸದೇ ವಚನಗಳನ್ನು ಸಂರಕ್ಷಣೆ ಮಾಡುತ್ತಾರೆ, ಇಂಥ ಕರಾಳ ಕಥನ ಇತಿಹಾಸದ ಪುಟ ಸೇರುತ್ತದೆ. ಆದರೆ, ಬಿಜೆಪಿಗರು ಸುಳ್ಳು ಇತಿಹಾಸ ಸೃಷ್ಠಿಸುತ್ತಿದ್ದಾರೆ. ಶರಣರ ಕಗ್ಗೊಲೆ ಮಾಡಿದ್ದು, ಹಿಂದೂಗಳು-ವೈದಿಕರು, ನಾರಾಯಣ ಕ್ರಮೀತ್, ಕೃಷ್ಣ ಪೆದ್ದಿ, ವಿಷ್ಣು ಭಟ್, ಮುಕುಂದ ಭಟ್, ಮುರಾರಿ ಭಟ್’ ಎಂದು ಗಂಭೀರ ಆರೋಪ ಹೊರಿಸಿದರು.
ಕನ್ಹೇರಿ ಶ್ರೀ ವಿರುದ್ಧ ವಾಗ್ದಾಳಿ
ಕನ್ಹೇರಿಯ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ವಿರುದ್ಧ ಸಾಮೂಹಿಕವಾಗಿ ಹರಿಹಾಯ್ದ ನಾಯಕರು ಆರ್‌ಎಸ್‌ಎಸ್ ಕೃಪಾಪೋಷಿತ ಕುಂಕುಮಧಾರಿ ಎಂದು ಲೇವಡಿ ಮಾಡಿದರು.
ದಲಿತ ಮುಖಂಡ ಅಡಿವೆಪ್ಪ ಸಾಲಗಲ್ಲ ಮಾತನಾಡಿ, ಕನ್ಹೇರಿ ಶ್ರೀಗಳು ಪೂರ್ವಾಶ್ರಮದ ಹೆಸರು ಬಾಪುಗೌಡ ಮೇಟಿ, ಆರಂಭದಲ್ಲಿ ವಿಭೂತಿ ಧರಿಸಿ ಸಿದ್ಧೇಶ್ವರ ಸ್ವಾಮೀಜಿಗಳ ಹಿಂದೆ-ಮುಂದೆ ಓಡಾಡಿಕೊಂಡಿದ್ದ ಇವರು ನಂತರದಲ್ಲಿ ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯರಾಗುತ್ತಿದ್ದಂತೆ ಆರ್‌ಎಸ್‌ಎಸ್‌ನ ಕೈಗೊಂಬೆಯಾದರು. ಅಪಾರ ಆಸ್ತಿ ಮಾಡಿರುವ ಇವರ ಬಳಿ ಆರ್‌ಎಸ್‌ಎಸ್‌ನ ಬಂಡವಾಳವಿದೆ ಎಂದು ಆರೋಪಿಸಿದರು.
ಮಠ ಪರಂಪರೆಯ ಕನ್ಹೇರಿಯನ್ನು ವೈದಿಕ ಪರಂಪರೆಗೆ ತಿರುಗಿಸುವ ಹುನ್ನಾರೆ ಕನ್ಹೇರಿ ಶ್ರೀಗಳಿಂದ ನಡೆದಿದೆ. ವೇದ ಪರಂಪರೆಯನ್ನೇ ಧಿಕ್ಕರಿಸಿದವರು ಕಾಡಸಿದ್ಧೇಶ್ವರ ಶರಣರು. ಅದೊಂದು ಸೂಫಿ-ಶರಣ ಪರಂಪರೆಯ ಮಠ ಎಂಬುದಕ್ಕೆ ಅನೇಕ ವಚನಗಳೇ ಸಾಕ್ಷಿ. ಆದರೆ, ಆ ಮಠದಲ್ಲಿದ್ದು ಆ ಶರಣರ ವಚನಗಳಾಗಲಿ, ಶರಣರ ಸಂದೇಶ ಮತ್ತು ಇತಿಹಾಸ ಸಾರುವ ಯಾವುದೇ ಕುರುಹುಗಳಿಲ್ಲವೆಂದರು.
ಮೀನಾಕ್ಷಿ ಬಾಳಿಗೆ ನಿಂದನೆ; ತಿರುಗೇಟು
ಚಿಂತಕಿ ಮೀನಾಕ್ಷಿ ಬಾಳಿಯವರನ್ನು ಅವಾಚ್ಯವಾಗಿ ನಿಂದಿಸಿರುವ ಕನ್ಹೇರಿ ಸ್ವಾಮೀಜಿಗಳ ವಿರುದ್ಧ ಶರಣೆ ಮಹಾದೇವಿ ಗೋಕಾಕ ತೀವ್ರ ವಾಗ್ದಾಳಿ ನಡೆಸಿದರು. ಓರ್ವ ಮಹಿಳೆಯನ್ನು ಭಾರತೀಯ ಸಂಸ್ಕೃತಿ ತಾಯಿಗೆ ಹೋಲಿಸುತ್ತದೆ. ಅಂಥದರಲ್ಲಿ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿರುವುದು ಕನ್ಹೇರಿ ಸ್ವಾಮೀಜಿ ನಂಬಿರುವ ಮತ್ತು ಹೇಳಿಕೊಳ್ಳುತ್ತಿರುವ ಸನಾತನ ಸಂಸ್ಕೃತಿಯ ಪ್ರತೀಕ ಎಂಬುದು ಸಾಬೀತಾಗಿದೆ ಎಂದರು.
ತಾಯಿ, ತಂಗಿ-ಅಕ್ಕನ ಮಹತ್ವ ಮತ್ತು ಆ ಬಾಂಧವ್ಯಗಳ ಬಗ್ಗೆ ಅರಿವಿದ್ದರೆ ಕನ್ಹೇರಿ ಸ್ವಾಮಿ ಇಂಥ ಅವಾಚ್ಯ ಪದ ಬಳಕೆ ಮಾಡುತ್ತಿರಲಿಲ್ಲವೆಂದರು.
ಮುಖಂಡ ಪ್ರಭು ಲಿಂಗದಳ್ಳಿ ಅವರು, ವಿಭೂತಿ ಮಹತ್ವ ಅರಿಯದ, ಕಾಯಕ-ದಾಸೋಹದ ಮಹತ್ವ ಅರಿಯದ ಕನ್ಹೇರಿ ಸ್ವಾಮೀಜಿ ಆರ್‌ಎಸ್‌ಎಸ್‌ನ ಕೈಗೊಂಬೆ ಎಂದರಲ್ಲದೇ ಇಂಥ ಸ್ವಾಮಿಗಳನ್ನು ಆರ್‌ಎಸ್‌ಎಸ್ ಈಗಾಗಲೇ ಬಳಸಿ ಬೀಸಾಕಿದೆ. ಮುಂದಿನ ಸರದಿ ಈ ಸ್ವಾಮಿಯದ್ದು. ಕನ್ಹೇರಿ ಸ್ವಾಮಿಯನ್ನು ಬಳಸಿ ಬೀಸಾಡುವ ಕೆಲಸ ಈಗಾಗಲೇ ನಡೆದಿದೆ ಎಂದರು.
ಮುಖಂಡರಾದ ಚೆನ್ನು ಕಟ್ಟಿಮನಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net