ವಿಜಯಪುರದ ಕಸಾಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿದರು. ಸುಭಾಷ ಹಿಟ್ನಳ್ಳಿ, ಮಹಾದೇವ ಬನಸೋಡೆ, ಸಂಗಮೇಶ ಜಮಖಂಡಿ ಮತ್ತಿತರರಿದ್ದಾರೆ.
ವಿಜಯಪುರ: ಬಂಧನದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟಗಾರರನ್ನು ಬಿಡುಗಡೆ ಮಾಡಬೇಕು. ಅಲ್ಲದೆ, ಹೋರಾಟಗಾರರ ಮೇಲೆ ದಾಖಲಾದ ಎಲ್ಲ ಪ್ರಕರಣಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಸಂಗಮೇಶ ಸಗರ ಒತ್ತಾಯಿಸಿದರು.
ಸರ್ಕಾರಿ ಮೆಡಿಕಲ್ ಕಾಲೇಜ್ ಘೋಷಿಸಿದರೂ ಸಹ ನಾವಿನ್ನೂ ವಿಜಯೋತ್ಸವ ಆಚರಿಸಿಲ್ಲ. ಸಿಹಿ ಕೂಡ ಹಂಚಿಲ್ಲ. ಅದಕ್ಕಾಗಿ ಹೋರಾಟ ಮಾಡಿದವರು ಇನ್ನೂ ಜೈಲಿನಲ್ಲಿದ್ದಾರೆ, ಹೀಗಾಗಿ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಆಗ್ರಹಿಸಿದರು.
ಹೋರಾಟಗಾರರನ್ನು ಬಿಡುಗಡೆ ಮಾಡದಿದ್ದರೆ ಗ್ರಾಮೀಣ ಮಟ್ಟದಿಂದ ಬೃಹತ್ ಹೋರಾಟ ಕೈಗೊಳ್ಳಲಾಗುವುದು. ಯಾವುದೇ ವೈಯುಕ್ತಿಕ ಲಾಭಕ್ಕೆ ಹೊರಾಟಗಾರರು ಧರಣಿ ನಡೆಸಿಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜ್ ಎಲ್ಲರಿಗೂ ಅನುಕೂಲವಾಗುವಂತಹದ್ದು, ಹೀಗಾಗಿ ಅವರನ್ನು ಬೇಷರತ್ ಆಗಿ ಬಿಡುಗಡೆ ಮಾಡಬೇಕೆಂದರು.
ವೈದ್ಯಕೀಯ ಕಾಲೇಜು ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕುವ ವೇಳೆ ಪ್ರತಿಭಟನಾಕಾರರನ್ನು ತಡೆಯುವ ಪೊಲೀಸ್ ಅಧಿಕಾರಿಗಳು ಸಮವಸ್ತದಲ್ಲಿ ಇರಲಿಲ್ಲ, ಪೊಲೀಸರು ನೇರವಾಗಿ ಹೋರಾಟ ನಿರತ ಸ್ವಾಮೀಜಿಗಳ ಮೊಬೈಲ್ ಕಸಿದುಕೊಳ್ಳುವ ಜತೆಗೆ ಅಗೌರವದಿಂದ ನಡೆದುಕೊಂಡಿದ್ದಾರೆ. ಹೀಗಾಗಿ, ಹೋರಾಟದಲ್ಲಿ ಹಲವು ಘಟನೆಗಳು ನಡೆದಿವೆ. ಹೋರಾಟವನ್ನು ಹತ್ತಿಕ್ಕುವ ಭಾಗವಾಗಿ ಈ ರೀತಿ ಸಂಚು ನಡೆದಿದೆಯೇ? ಎಂಬುದರ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು.
ರೈತ ಮುಖಂಡ ವಿಠ್ಠಲ ಬಿರಾದಾರ ಮಾತನಾಡಿ, ನ್ಯಾಯಯುತವಾದ ಬೇಡಿಕೆಯಾದ ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಹೋರಾಟ ಮಾಡುತ್ತಿದ್ದವರನ್ನು ಬಂಧಿಸಿರುವ ಕ್ರಮ ಸರಿಯಲ್ಲ. ಅವರು ಬಡವರಿಗಾಗಿ ಹೋರಾಟ ನಡೆಸಿದ್ದರು. ಕೂಡಲೇ 27 ಹೋರಾಟಗಾರರ ಮೇಲೆ ದಾಖಲಾದ ಎಲ್ಲ ಪ್ರಕರಣ ಹಿಂಪಡೆಯಬೇಕು. ಹೋರಾಟ ಮಾಡದೇ ಹೋದರೆ ಸರ್ಕಾರವನ್ನು ಎಚ್ಚರಿಸುವುದು ಹೇಗೆ? ಹೋರಾಟ ಎನ್ನುವುದು ಪ್ರಜಾಪ್ರಭುತ್ವದ ಭಾಗ. ಆದರೆ ಹೋರಾಟ ಮಾಡಿದವರನ್ನೇ ಜೈಲಿಗಟ್ಟಿದರೆ ಹೇಗೆ? ಎಂದು ಪ್ರಶ್ನಿಸಿದರು.