ರೇವತಗಾಂವ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಎ.ಎನ್. ಅಗರಖೇಡ ಮಾತನಾಡಿದರು. ಶ್ರೀಧರ ಬಂಡಗರ, ಸುರೇಶ ವಾಲಿಕಾರ, ಗಿರಿಜಾ ಜೋಳದ ಇತರರಿದ್ದರು.
ರೇವತಗಾಂವ: ಸೊಳ್ಳೆಗಳಿಂದ ಮಲೇರಿಯಾ, ಚಿಕೂನ್‌ಗುನ್ಯಾ, ಮೆದುಳು ಜ್ವರ ಹಾಗೂ ಆನೆಕಾಲು ರೋಗ ಮುಂತಾದ ಕಾಯಿಲೆ ಹರಡುತ್ತಿದ್ದು, ಸೊಳ್ಳೆ ನಿಯಂತ್ರಣ ಮಾಡಿದರೆ ಕಾಯಿಲೆಗಳನ್ನು ತಡೆಗಟ್ಟಬಹುದು. ಸಾರ್ವಜನಿಕರು ಸೊಳ್ಳೆ ಸಂತಾನೋತ್ಪತ್ತಿ ತಾಣ ಬಗ್ಗೆ ಜಾಗೃತಿ ವಹಿಸಿ ಎಂದು ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಎ.ಎನ್. ಅಗರಖೇಡ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೊಳ್ಳೆಗಳಿಂದ ಹರಡುವ ರೋಗಗಳಲ್ಲಿ ಮಲೇರಿಯಾ ರೋಗ ಕೂಡ ಒಂದು. ಇದು ಪ್ಲಾಸೋಡಿಯಾ ಎಂಬ ಸೂಕ್ಷ್ಮಾಣು ಪರಾವಲಂಬಿ ಮೂಲಕ ಬರುತ್ತದೆ. ಹೆಣ್ಣು ಅನಾಫಿಲಿಸ್ ಸೊಳ್ಳೆ ಮಲೇರಿಯಾ ಸೋಂಕಿತ ವ್ಯಕ್ತಿಗೆ ಕಚ್ಚಿ ರಕ್ತ ಹೀರಿ ಆರೋಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ಹೇಳಿದರು.
ಸಮುದಾಯ ಆರೋಗ್ಯಾಧಿಕಾರಿ ಶ್ರೀಧರ ಬಂಡಗರ ಮಾತನಾಡಿ, ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಮನೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ಪರದೆ, ಬೇವಿನ ಸೊಪ್ಪಿನ ಹೊಗೆ, ಸೊಳ್ಳೆ ಬತ್ತಿ ಹಾಗೂ ಸೊಳ್ಳೆ ಬ್ಯಾಟ್ ಮುಖಾಂತರ ಸೊಳ್ಳೆ ನಿಯಂತ್ರಿಸಬಹುದೆಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಸುರೇಶ ವಾಲಿಕಾರ, ಪ್ರಾಥಮಿಕ ಸುರಕ್ಷಿತಾಧಿಕಾರಿ ಗಿರಿಜಾ ಜೋಳದ, ಮುಖ್ಯ ಗುರು ಎಂ.ಎಸ್.ಪಾಟೀಲ, ಆರ್.ಎಚ್. ನದಾ, ಆರ್.ಎಂ. ಚೋಪಡೆ ಸೇರಿ ಶಾಲಾ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.