ಪಿಗ್ಮಿ ಏಜೆಂಟ್ ಕೊಲೆ ಪ್ರಕರಣ, ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

ಸರ್ಫರಾಜ್ ಸಿಕಂದರ್ ಶೇಖ, ಆರೋಪಿ
ಸರ್ಫರಾಜ್ ಸಿಕಂದರ್ ಶೇಖ, ಆರೋಪಿ
Published on

ಪ್ರಮುಖ ಮುಖ್ಯಾಂಶಗಳು

  • ಅನೈತಿಕ ಸಂಬಂಧದ ಸಂಶಯ
  • ಕೊಡಲಿಯಿಂದ ಕೊಚ್ಚಿ ಕೊಲೆ
  • ಬೈಕ್ ಮೇಲೆ ಹೋಗುವಾಗ ಕೃತ್ಯ

ವಿಜಯಪುರ: ಪಿಗ್ಮಿ ಏಜೆಂಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ಇಬ್ಬರನ್ನು ಬಂಧಿಸಿದ್ದಾರೆ.

ನಗರದ ಮುಬಾರಕ್ ಚೌಕ್ ಸಮೀಪ ಆ.7ರಂದು ಪಿಗ್ಮಿ ಏಜೆಂಟ್ ಶರಣಬಸಪ್ಪ ಮಲ್ಲೇಶಪ್ಪ ಜೇವರ್ಗಿ (43) ಅವರ ಕೊಲೆಯಾಗಿತ್ತು. ಹೋಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಕೆಎಚ್‌ಬಿ ಕಾಲನಿಯ ಮುಬಾರಕ್ ಚೌಕ್ ಕಡೆಗೆ ತೆರಳುತ್ತಿದ್ದ ಶರಣಬಸಪ್ಪ ಅವರ ಮೇಲೆ ಹರಿತವಾದ ಆಯುಧದಿಂದ ದಾಳಿ ನಡೆಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಶರಣಬಸಪ್ಪ ಅವರನ್ನು ಬಿಎಲ್‌ಡಿಇ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಳಗುಮ್ಮಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಚುರುಕಿನ ಕಾರ್ಯಾಚರಣೆ ನಡೆಸಿರುವ ಪೊಲೀಸರು ಇಬ್ಬರನ್ನು ಹೆಡೆಮುರಿ ಕಟ್ಟಿ ತಂದಿದ್ದಾರೆ. ಸರ್ಫರಾಜ್ ಸಿಕಂದರ್ ಶೇಖ (35) ಹಾಗೂ ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಬಂಧಿಸಲಾಗಿದೆ. ಅನೈತಿಕ ಸಂಬಂಧದ ಸಂಶಯವೇ ಕೃತ್ಯಕ್ಕೆ ಕಾರಣವೆಂಬುದು ತನಿಖೆ ವೇಳೆ ತಿಳಿದು ಬಂದಿದೆ.
ಕೃತ್ಯಕ್ಕೆ ಬಳಸಿದ್ದ ಕೊಡಲಿ ಹಾಗೂ ಮೋಟಾರ್‌ಸೈಕಲ್ ವಶಪಡಿಸಿಕೊಂಡು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ವಿಜಯಪುರ ನಗರ ಉಪವಿಭಾಗದ ಡಿಎಸ್‌ಪಿ ನಾಗರಾಜ್ ಜೆ. ಅವರ ಮಾರ್ಗದರ್ಶನದಲ್ಲಿ ಗೋಳಗುಮ್ಮಟ ವೃತ್ತದ ಸಿಪಿಐ ಸಂಜೀವ ಬಳಿಗಾರ, ಪಿಎಸ್‌ಐ (ಕಾಸು) ಎಂ.ಡಿ. ಘೋರಿ, ಆದರ್ಶನಗರ ಠಾಣೆಯ ಪಿಎಸ್‌ಐ ಸೀತಾರಾಮ್ ಲಮಾಣಿ ಸೇರಿ 12 ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತನಿಖಾ ತಂಡ ಪ್ರಕರಣ ಭೇದಿಸಿದ್ದು, ಅವರ ಕಾರ್ಯ ಶ್ಲಾಘನೀಯ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net