ಪಿಪಿಪಿ ಮಾದರಿ ವಿರೋಧಿಸಿ ಹೋರಾಟ, 85ನೇ ದಿನಕ್ಕೆ ಕಾಲಿಟ್ಟ ಅನಿರ್ದಿಷ್ಟಾವಧಿ ಧರಣಿ, ಶಾಸಕ ಯತ್ನಾಳ ವಿರುದ್ಧ ಆಕ್ರೋಶ, ಮಾನನಷ್ಟ ಮೊಕದ್ದಮೆ ದಾಖಲಿಸಲು ಸಿದ್ಧತೆ

ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿಯ ಧರಣಿ ಸ್ಥಳದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ ಪದಾಧಿಕಾರಿಗಳು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಆಕ್ರೋಶ ಹೊರಹಾಕಿದರು. ಸದಸ್ಯರಾದ ಅರವಿಂದ ಕುಲಕರ್ಣಿ, ಬಿ.ಭಗವಾನ್ ರೆಡ್ಡಿ, ಅನಿಲ ಹೊಸಮನಿ, ಅಕ್ರಂ ಮಾಶ್ಯಾಳಕರ ಮತ್ತಿತರರಿದ್ದಾರೆ.
ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಬಳಿಯ ಧರಣಿ ಸ್ಥಳದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ ಪದಾಧಿಕಾರಿಗಳು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಆಕ್ರೋಶ ಹೊರಹಾಕಿದರು. ಸದಸ್ಯರಾದ ಅರವಿಂದ ಕುಲಕರ್ಣಿ, ಬಿ.ಭಗವಾನ್ ರೆಡ್ಡಿ, ಅನಿಲ ಹೊಸಮನಿ, ಅಕ್ರಂ ಮಾಶ್ಯಾಳಕರ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ಧರಣಿ
  • ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಆಕ್ರೋಶ
  • ಮಾನನಷ್ಟ ಮೊಕದ್ದಮೆ ದಾಖಲಿಸುವ ನಿರ್ಧಾರ ಪ್ರಕಟ
  • ಹೋರಾಟಗಾರರನ್ನು ಪೇಮೆಂಟ್ ಗಿರಾಕಿ ಎಂದ ಯತ್ನಾಳ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ನಡೆಯುತ್ತಿರುವ ಹೋರಾಟ ಬುಧವಾರ 84 ದಿನ ಪೂರ್ಣಗೊಳಿಸಿದ್ದು, ಹೋರಾಟಗಾರರನ್ನು ‘ಪೇಮೆಂಟ್ ಗಿರಾಕಿ’ ಎಂದು ಟೀಕಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ನಿರ್ಧಾರ ಪ್ರಕಟಿಸಲಾಯಿತು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ‘ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿ’ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳದಲ್ಲಿ ಶಾಸಕ ಯತ್ನಾಳ ವಿರುದ್ಧ ಘೋಷಣೆ ಮೊಳಗಿಸಲಾಯಿತು. ಅಲ್ಲದೇ, ಹೋರಾಟಗಾರರನ್ನು ಅವಮಾನಿಸಿರುವ ಯತ್ನಾಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಕುರಿತು ನಿರ್ಧಾರ ಕೈಗೊಳ್ಳಲಾಯಿತು.
ಶಾಸಕರು ತಮ್ಮ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸಬೇಕು. ಒಂದು ವೇಳೆ ತಮ್ಮ ಹೇಳಿಕೆಗೆ ಬದ್ಧವಾಗಿದ್ದರೆ ಶಿವಾನಂದ ಪಾಟೀಲರಿಂದ ಪಡೆದ ಪೇಮೆಂಟ್ ಎಷ್ಟು ? ಎಂಬುದನ್ನು ಬಹಿರಂಗಪಡಿಸಬೇಕು. ಆಗದೆ ಇದ್ದರೆ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.
ಜಿಲ್ಲೆಯ ಸಂಸದರು, ಸಚಿವರು ಮತ್ತು ಶಾಸಕರು ಅಭಿವೃದ್ಧಿ ಕಾರ್ಯ ಮರೆತಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂಬ ಕೊರಗು ಜನಸಾಮಾನ್ಯರನ್ನು ಕಾಡುತ್ತಿದೆ. ಇವರ ಜನವಿರೋಧಿ ನೀತಿಯಿಂದ ಜನ ಬೇಸತ್ತಿದ್ದಾರೆ. ಈಗಾಗಲೇ ನಮ್ಮ ಜಿಲ್ಲೆಗೆ ಸಿಗಬೇಕಿದ್ದ ‘ಆರ್ಟಿಕಲ್ 371ಜೆ’ ಕೈಬಿಟ್ಟು ಹೋಗಿದೆ. ಹೈಕೋರ್ಟ್ ಪೀಠ, ತೋಟಗಾರಿಕಾ ವಿಶ್ವ ವಿದ್ಯಾಲಯ, ಪುರಾತತ್ವ ಇಲಾಖೆಯ ಕಚೇರಿ ಸೇರಿದಂತೆ ಹಲವು ಯೋಜನೆಗಳು ನಮ್ಮ ಜನ ಪ್ರತಿನಿಧಿಗಳ ನಿಷ್ಕಾಳಜಿಯಿಂದ ಕೈಬಿಟ್ಟು ಹೋಗಿರುವುದು ಜಿಲ್ಲೆಯ ಜನತೆ ಗಮನಿಸಿದ್ದಾರೆ. ಇನ್ಮುಂದೆ ಇದನ್ನೆಲ್ಲ ಸಹಿಸಿಕೊಳ್ಳಲಾಗದು. ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ನಡೆಯುತ್ತಿರುವ ಹೋರಾಟದ ಮಾದರಿಯಲ್ಲಿಯೇ ಇತರ ಸಮಸ್ಯೆಗಳಿಗೂ ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು ಎಂದು ಹೋರಾಟಗಾರರು ತಿಳಿಸಿದರು.
ಹೋರಾಟ ಸಮಿತಿಯ ಸದಸ್ಯರಾದ ಅರವಿಂದ ಕುಲಕರ್ಣಿ, ಬಿ.ಭಗವಾನ್ ರೆಡ್ಡಿ, ಅನಿಲ ಹೊಸಮನಿ, ಅಕ್ರಂ ಮಾಶ್ಯಾಳಕರ, ಸುರೇಶ ಬಿಜಾಪುರ, ಶ್ರೀನಾಥ ಪೂಜಾರಿ, ಲಲಿತಾ ಬಿಜ್ಜರಗಿ, ಮಲ್ಲಿಕಾರ್ಜುನ ಬಟಗಿ, ಜಗದೇವ ಸೂರ್ಯವಂಶಿ, ಸಿ.ಬಿ. ಪಾಟೀಲ, ಮಲ್ಲಿಕಾರ್ಜುನ ಎಚ್.ಟಿ, ಗೀತಾ ಎಚ್, ಶ್ರೀಕಾಂತ ಉಪ್ಪಾರ, ಬಾಬುರಾವ ಬಿರಕಬ್ಬಿ, ಸಿದ್ದರಾಯ ಹಿರೇಮಠ, ಜಿತೇಂದ್ರ ಕಾಂಬಳೆ, ಯಲ್ಲಪ್ಪ ಡೋಮನಾಳ, ಜಬೀನಾ ಅಥಣಿ, ಲಲಿತಾ ಮಿಣಜಗಿ ಚಂದು ಜಾಧವ, ಮೆಹಬೂಬ್ ದಳವಾಯಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net