ಗುಮ್ಮಟ ನಗರಿಯಲ್ಲಿ ರಾಜ್ಯಮಟ್ಟದ ಪುಸ್ತಕ ಮೇಳ, ತಾತ್ವಿಕ ನೆಲೆಗಟ್ಟಿನ ಪ್ರಥಮ ಮೇಳಕ್ಕೆ ಪ್ರಗತಿಪರರ ಮುನ್ನುಡಿ
ವಿಜಯಪುರ ನಗರದ ಬುದ್ಧವಿಹಾರದಲ್ಲಿ ದಗದ ಲಡಾಯಿ ಪ್ರಕಾಶನದ ಮುಖ್ಯಸ್ಥ ಬಸವರಾಜ ಸೂಳಿಭಾವಿ ಸುದ್ದಿಗೋಷ್ಠಿ ನಡೆಸಿದರು. ಅನಿಲ ಹೊಸಮನಿ, ಸಂಜೀವ ಕಂಬಾಗಿ, ಸುಖದೇವ ಕಟ್ಟಿಮನಿ ಇತರರಿದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದಲಿತ-ಪ್ರಗತಿಪರ ಸಂಘಟನೆಗಳ ಸಹಯೋಗ
ಡಾ.ಅಂಬೇಡ್ಕರ್, ಮಹಾತ್ಮ ಫುಲೆ ಜಯಂತಿ
ರಾಜ್ಯಮಟ್ಟದ ಪುಸ್ತಕ ಮೇಳ
ವಿಜಯಪುರ: ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಜ್ಯೋತಿ ಬಾ ಫುಲೆ ಜಯಂತಿ ಅಂಗವಾಗಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಎನ್ನಲಾದ ‘ರಾಜ್ಯಮಟ್ಟದ ಬೃಹತ್ ಪುಸ್ತಕ ಮೇಳ’ ಆಯೋಜಿಸಲಾಗುತ್ತಿದೆ ಎಂದು ಗದಗದ ಲಡಾಯಿ ಪ್ರಕಾಶನದ ಮುಖ್ಯಸ್ಥ ಬಸವರಾಜ ಸೂಳಿಭಾವಿ ತಿಳಿಸಿದರು.
ನಗರದ ದರಬಾರ್ ಮೈದಾನದಲ್ಲಿ ಪ್ರಗತಿಪರ, ದಲಿತ ಸೇರಿ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಏಪ್ರೀಲ್ 10 ರಿಂದ 14ರವರೆಗೆ ಈ ಮೇಳ ನಡೆಯಲಿದೆ. ಕೇವಲ ವೈಚಾರಿಕ, ವೈಜ್ಞಾನಿಕ, ಪ್ರಗತಿಪರ ಹಾಗೂ ದಲಿತ ವಿಚಾರಧಾರೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಮಾತ್ರ ಪ್ರದರ್ಶನಕ್ಕೆ ಇರಿಸಲಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ತಾತ್ವಿಕ ನೆಲಗಟ್ಟಿನಲ್ಲಿ ನಡೆಯುತ್ತಿರುವ ರಾಜ್ಯದ ಮೊದಲ ಪುಸ್ತಕ ಮೇಳ ಇದಾಗಿದೆ. ವಿಜಯಪುರದಲ್ಲಿ ಇಂತಹ ವಿಶೇಷವಾದ ಮೇಳ ಆಯೋಜಿಸಿರುವುದರಿಂದ ಇದಕ್ಕೆ ಬಿಜಾಪುರ, ಬುದ್ಧ, ಬಸವ, ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ (ಬಿ-ಫೋರ್) ಎಂದು ಹೆಸರಿಸಲಾಗಿದೆ. ರಾಜ್ಯದ ಪ್ರಖ್ಯಾತ ಪ್ರಕಾಶನ ಸಂಸ್ಥೆಗಳು ಭಾಗವಹಿಸಲಿವೆ. 50ಕ್ಕೂ ಅಧಿಕ ಮಳಿಗೆಗಳು ಸ್ಥಾಪನೆಯಾಗಲಿವೆ ಎಂದರು.
ಏ.10ರಂದು ಮೊದಲ ದಿನ ಮೇಳದ ಉದ್ಘಾಟನಾ ನಡೆಯಲಿದೆ. ಅಂದು ಡಾ.ಅಂಬೇಡ್ಕರ್ ವೃತ್ತದಿಂದ ಪುಸ್ತಕಗಳ ಜತೆಗೆ ಲೇಖಕರ ಮೆರವಣಿಗೆ ಜರುಗಲಿದೆ. ಏ.11ರಂದು ಮಹಾತ್ಮ ಜ್ಯೋತಿಬಾ ಜನ್ಮದಿನ ಅಂಗವಾಗಿ ಸಾವಿತ್ರಿಬಾಯಿ ಫುಲೆ ಮಾರ್ಗದಿಂದ ಜಿಲ್ಲೆಯ ಸರ್ಕಾರಿ ಶಾಲಾ-ಕಾಲೇಜಿನ ಶಿಕ್ಷಕ ದಂಪತಿಗಳ ಮೆರವಣಿಗೆ ಇರಲಿದೆ. ಏ.12ರಂದು ಬಸವೇಶ್ವರ ವೃತ್ತದಿಂದ ಬಸವಾದಿ ಶರಣರ ವಚನಗಳ ಕಟ್ಟುಗಳೊಂದಿಗೆ ಬಸವಾನುಯಾಯಿಗಳ ಮೆರವಣಿಗೆ ನಡೆಯಲಿದೆ ಎಂದರು.
ಏ.13ರಂದು ಅಸ್ಪಶ್ಯರ ಶಿಕ್ಷಣಕ್ಕಾಗಿ ಶ್ರಮಿಸಿದ ಕಾಕಾ ಕಾರಖಾನೀಸ್ ಸ್ಮರಣೆ ಅಂಗವಾಗಿ ಅವರ ಕುಟುಂಬಸ್ಥರಿಂದ ಕಾಕಾ ಕಾರಖಾನೀಸ್ ಅವರ ಮನೆಯಿಂದ ಮೆರವಣಿಗೆ ಜರುಗಲಿದೆ. ಏ.14ರಂದು ಡಾ.ಅಂಬೇಡ್ಕರ್ ಜನ್ಮದಿನ ನಿಮಿತ್ತ ಅಂಬೇಡ್ಕರ್ ವೃತ್ತದಿಂದ ಸಂವಿಧಾನ ಪೀಠಿಕೆ ಕಂಠಪಾಠ ಮಾಡಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಮೆರವಣಿಗೆ ನಡೆಯಲಿದೆ. ಅಲ್ಲದೇ, ಮೇಳದಲ್ಲಿ ಪ್ರತಿ ದಿನ ಸಂಜೆ 4ರಿಂದ ರಾತ್ರಿ 9 ಗಂಟೆಯವರೆಗೆ ಕವಿಗೋಷ್ಠಿ, ವಿದ್ಯಾರ್ಥಿಗಳಿಂದ ಪುಸ್ತಕ ಕುರಿತ ಮಾತು, ಲೇಖಕರೊಂದಿಗೆ ಸಂವಾದ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಿಸಿದರು.