ಬಸವಾದಿಶರಣರ ಹಿಂದು ಸಮಾವೇಶಕ್ಕೆ ಸಿದ್ಧತೆ, 300 ಸಂತರ ಸಮಾಗಮಕ್ಕೆ ವೇದಿಕೆ ಸಜ್ಜು, ‘ಶ್ರೀ’ಗಳ ಭರ್ಜರಿ ಪ್ರವೇಶಕ್ಕೆ ಬಬಲೇಶ್ವರ ಅಣಿ !

ಬಸವಾದಿ ಶರಣರ ಹಿಂದು ಸಮಾವೇಶ
ಬಸವಾದಿ ಶರಣರ ಹಿಂದು ಸಮಾವೇಶ
Published on

ಪ್ರಮುಖ ಮುಖ್ಯಾಂಶಗಳು

  • ಬಸವಾದಿಶರಣರ ಹಿಂದು ಸಮಾವೇಶ
  • ಬಬಲೇಶ್ವರದಲ್ಲಿ 300 ಸಂತರ ಸಮಾಗಮ
  • ಸರ್ಕಾರದ ವಿರುದ್ಧ ಐಕ್ಯತೆಯ ಕಹಳೆ
  • ಹಿಂದು ಧರ್ಮ ಒಡೆಯುವ ಹುನ್ನಾರಕ್ಕೆ ತಡೆ
ವಿಜಯಪುರ: ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ ‘ಪುರ ಪ್ರವೇಶ ನಿರ್ಬಂಧ’ದ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ಬೆಳಗಾವಿ ಪೂರ್ವಭಾವಿ ಸಭೆಯಲ್ಲಿ ನಿರ್ಧಾರವಾದಂತೆ ‘ಬಸವಾದಿ ಶರಣರ ಹಿಂದು ಸಮಾವೇಶ’ಕ್ಕೆ ಬಬಲೇಶ್ವರ ಸಜ್ಜಾಗಿದೆ.
ರಾಜ್ಯದ ವಿವಿಧ ಭಾಗಗಳ 300 ಕ್ಕೂ ಅಧಿಕ ಸಂತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಅಂದಾಜು 25 ಸಾವಿರ ಜನ ಸೇರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಪೂರ್ವ ಸಿದ್ಧತೆ ಸಭೆಗಳನ್ನು ನಡೆಸಲಾಗಿದ್ದು, ಸಮಾವೇಶದ ರೂಪುರೇಷೆ ಸಿದ್ಧಗೊಂಡಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ-ವಿಭಿನ್ನ ಹೇಳಿಕೆಗಳು ಹರಿದಾಡುತ್ತಿದ್ದು, ಆರಂಭದಲ್ಲಿ ಸಮಾವೇಶದ ಕುರಿತಾಗಿದ್ದ ಅಭಿಪ್ರಾಯಗಳು ಬದಲಾಗತೊಡಗಿವೆ.
‘ಬಸವಾದಿಶರಣರ ಹಿಂದು ಸಮಾವೇಶ’ ಕೇವಲ ಹಿಂದುಗಳ ಜಾಗೃತಿಗಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ಶಿರೋಳದ ರಾಮಾರೂಢ ಮಠದ ಪೂಜ್ಯ ಶಂಕರಾರೂಢ ಸ್ವಾಮೀಜಿ ಸ್ಪಷ್ಟಪಡಿಸಿದ್ದರು. ಇದೀಗ ‘ಧರ್ಮ ಒಡೆಯುವ ಹುನ್ನಾರ, ಸರ್ಕಾರದ ಹಿಂದುವಿರೋಧಿ ನೀತಿ, ಸಮಾಜ ಒಡೆಯುವ ಮಂತ್ರಿಗಳ ನಿಯಂತ್ರಣ’ ಮತ್ತಿತರರ ಅಂಶಗಳುಳ್ಳ ಕರಪತ್ರಗಳನ್ನು ಆಯೋಜಕರು ಹರಿಬಿಡುತ್ತಿರುವುದು ಸಮಾವೇಶದ ಸ್ವರೂಪ ಬದಲಾದಂತೆ ಗೋಚರಿಸುತ್ತಿದೆ.
‘ಸರಕಾರ ಸಮಾಜ ಕಟ್ಟುವ ಕೆಲಸ ಮಾಡಬೇಕು ವಿನಃ ಒಡೆಯುವ ನೇತೃತ್ವ ವಹಿಸಬಾರದು, ಹಿಂದು ಸಮಾಜ ಒಡೆಯುವ ಮಂತ್ರಿಗಳನ್ನು ನಿಯಂತ್ರಿಸಬೇಕು ಹಾಗೂ ವೀರಶೈವ - ಲಿಂಗಾಯತ ಸಮಾಜ ಒಗ್ಗೂಡಿಸುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಬಸವಾದಿ ಶರಣರ ಹಿಂದು ಸಮಾವೇಶ ಆಯೋಜಿಸಲಾಗಿದ್ದು ಹಿಂದು ಧರ್ಮಿಯರು ಸಮಾಜದ ಐಕ್ಯತೆಗಾಗಿ ಈ ಸಮಾವೇಶದಲ್ಲಿ ಭಾಗಿಯಾಗಬೇಕು’ ಎಂಬ ಕರಪತ್ರ ಆಯೋಜಕರಿಂದ ಹರಿದಾಡುತ್ತಿದೆ.

ಕರಪತ್ರದಲ್ಲಿ ಮತ್ತೇನಿದೆ?

ವೀರಶೈವ ಲಿಂಗಾಯತ ಸಮಾಜವು ಅತಿಪ್ರಾಚಿನ ಪರಂಪರೆಯುಳ್ಳದ್ದಾಗಿದೆ. ಸುಧೀರ್ಘ ಕಾಲದಿಂದಲೂ ಸಮಾಜವನ್ನು ಬೆಸೆಯುತ್ತಾ ಭಕ್ತಿ ಮಾರ್ಗದಲ್ಲಿ ಮುನ್ನಡೆಸುತ್ತಿದೆ. ಕಳೆದ ಕೆಲವು ವರ್ಷಗಳಿಂದ ರಾಜಕೀಯ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ಕೆಲವು ರಾಜಕಾರಣಿಗಳ ನೇತೃತ್ವದಲ್ಲಿ ಲಿಂಗಾಯತ ಹಾಗೂ ಹಿಂದು ಸಮಾಜವನ್ನು ಒಡೆಯುವ ಪ್ರಯತ್ನ ನಡೆಯುತ್ತಿದೆ. ಇವರಿಗೆ ಸಹಕಾರಿಯಾಗಿ ಕೆಲವು ಕಾವಿಧಾರಿಗಳು, ಎಡಪಂಥೀಯ ವಿಚಾರಧಾರೆಯವರೂ ನಿಂತಿರುವುದು ವಿಷಾದನಿಯ ಸಂಗತಿ.
ಇವರುಗಳು ಹಿಂದು ಧರ್ಮವನ್ನು, ಹಿಂದು ದೇವರುಗಳನ್ನು ಅವಹೇಳನ ಮಾಡುತ್ತ, ಅವಾಚ್ಯ ಶಬ್ದಗಳಿಂದ ಬಹಿರಂಗ ಸಮಾವೇಶಗಳಲ್ಲಿ ನಿಂದಿಸುತ್ತಿದ್ದಾರೆ. ಕೆಲವು ಜನ ಸ್ವಾಮೀಜಿಯವರು ಮಾಂಸಾಹಾರ ಸೇವನೆ ಮಾಡಿದರೆ ತಪ್ಪಿಲ್ಲ ಮತ್ತು ಮದ್ಯಪಾನ ಮಾಡಿದರೆ ತಪ್ಪಿಲ್ಲ ಎಂದು ಪ್ರಚೋದಿಸುವವರ ಕುರಿತು ಕನ್ಹೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿಗಳು ಆಡಿದರೆನ್ನಲಾದ ಮಾತುಗಳನ್ನು ಮುಂದಿಟ್ಟುಕೊಂಡು ಅವರಿಗೆ ವಿಜಯಪುರ ಜಿಲ್ಲೆಗೆ ಪ್ರವೇಶಿಸದಂತೆ ನಿಷೇಧ ಹೇರಲಾಗಿತ್ತು.
ಸರ್ಕಾರ ನಾಡಿನ ಪರಂಪರೆ ಹಾಗೂ ಸಂಸ್ಕೃತಿಯನ್ನು ಗೌರವಿಸುವ ಕಾರ್ಯ ಮಾಡಬೇಕು ಹೊರತಾಗಿ ಅವಮಾನ ಮಾಡುವುದಲ್ಲ. ಹಿಂದು ಸಮಾಜವನ್ನು ಒಡೆಯುವ ಮಂತ್ರಿಗಳನ್ನು ನಿಯಂತ್ರಿಸಬೇಕು ಹಾಗೂ ಹಿಂದೂ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ.

ಕನ್ಹೇರಿ ಶ್ರೀಗಳ ನಿರ್ಬಂಧಕ್ಕೆ ಪ್ರತಿಕಾರವೇ?

ಸದ್ಯದ ಎಲ್ಲ ಬೆಳವಣಿಗೆ ಗಮನಿಸಲಾಗಿ ಕನ್ಹೇರಿಯ ಕಾಡಸಿದ್ಧೇಶ್ವರ ಶ್ರೀಗಳ ಜಿಲ್ಲಾ ನಿರ್ಬಂಧದ ಹಿನ್ನೆಲೆ ಪ್ರತಿಕಾರದ ಸ್ವರೂಪವಾಗಿ ಈ ಸಮಾವೇಶ ಹಮ್ಮಿಕೊಂಡಂತೆ ಭಾಸವಾಗುತ್ತಿದೆ. ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗೆ ಅ.16 ರಿಂದ ಡಿ. 14 ರವರೆಗೆ ಬಸವನಬಾಗೇವಾಡಿ ಹಾಗೂ ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಆ ಬಳಿಕ ನಡೆದ ಪೂರ್ವಭಾವಿ ಸಭೆಗಳಲ್ಲಿ ಬಬಲೇಶ್ವರದಲ್ಲಿಯೇ ಸಮಾವೇಶ ಹಮ್ಮಿಕೊಳ್ಳುವ ವಾಗ್ದಾನಗಳಾಗಿದ್ದವು. ಇದೀಗ ಬಸವಾದಿ ಶರಣರ ಸಮಾವೇಶ ಆಯೋಜನೆಗೊಂಡಿದ್ದು, ಸಮಾವೇಶಕ್ಕೆ ಪರವಾನಿಗೆ ನೀಡುವ ಪತ್ರದಲ್ಲೂ ಕನ್ಹೇರಿ ಶ್ರೀಗಳ ಹೆಸರನ್ನೇ ಪ್ರಸ್ತಾಪಿಸಿ ಮತ್ತು ಪ್ರಧಾನವಾಗಿಸಿ ಪರವಾನಿಗೆ ನೀಡಿದ್ದು, ಆಯೋಜಕರು ‘ಕನ್ಹೇರಿ ಶ್ರೀಗಳು ಬರಬಹುದು-ಬರದೇ ಇರಬಹುದು’ ಎಂದಿದ್ದು, ಈ ಎಲ್ಲ ಬೆಳವಣಿಗೆಗಳು ಅತ್ಯಂತ ಕುತೂಹಲದಾಯಕವಾಗಿವೆ.
ಒಟ್ಟಿನಲ್ಲಿ ಬಬಲೇಶ್ವರ ಮಾತ್ರ ಡಿ. 29 ರಂದು ನಡೆಯಲಿರುವ ‘ಬಸವಾದಿ ಶರಣರ ಹಿಂದು ಸಮಾವೇಶ’ಕ್ಕೆ ಸಜ್ಜಾಗುತ್ತಿದ್ದು, ದಿನದಿಂದ ದಿನಕ್ಕೆ ಚರ್ಚೆ, ಸಿದ್ಧತೆ ಹಾಗೂ ಬೆಳವಣಿಗೆಗಳು ಚುರುಕಾಗತೊಡಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net