ಪಿಂಡ ಪ್ರದಾನಕ್ಕೆ ಪೊಲೀಸರಿಂದ ತಡೆ, ಧರಣಿ ಸ್ಥಳದಲ್ಲಿ ಖಾಕಿ ಸರ್ಪಗಾವಲು, ಆಕ್ರೋಶಗೊಂದ ಹೋರಾಟಗಾರರು, ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ‘ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ’ ಪದಾಧಿಕಾರಿಗಳು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟಿಸಿದರು. ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಬಟಗಿ, ಸಿದ್ಧಲಿಂಗ ಬಾಗೇವಾಡಿ ಮತ್ತಿತರರಿದ್ದಾರೆ.
ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ‘ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ’ ಪದಾಧಿಕಾರಿಗಳು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟಿಸಿದರು. ಅರವಿಂದ ಕುಲಕರ್ಣಿ, ಮಲ್ಲಿಕಾರ್ಜುನ ಬಟಗಿ, ಸಿದ್ಧಲಿಂಗ ಬಾಗೇವಾಡಿ ಮತ್ತಿತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಪಿಂಡ ಪ್ರದಾನಕ್ಕೆ ಪೊಲೀಸರಿಂದ ತಡೆ
  • ಧರಣಿ ಸ್ಥಳದಲ್ಲಿ ಖಾಕಿ ಸರ್ಪಗಾವಲು
  • ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ
ವಿಜಯಪುರ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಆಗ್ರಹ ಹಾಗೂ ಪಿಪಿಪಿ ಮಾದರಿಯನ್ನು ವಿರೋಧಿ ಕಳೆದ 77ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯ ಮುಂದುವರಿದ ಭಾಗವಾಗಿ ಬುಧವಾರ ಹೋರಾಟಗಾರರು ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟಿಸಿದರು.
ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ‘ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿ’ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆಯಲ್ಲದೇ ಹೋರಾಟದ ದಿನದಿಂದ ದಿನಕ್ಕೆ ಚುರುಕು ಪಡೆಯುತ್ತಿದೆ. ಅನೇಕ ಸಂಘಟನೆಗಳು ಬೆಂಬಲ ಸೂಚಿಸುತ್ತಿದ್ದು, ಹೋರಾಟ ಹಳ್ಳಿ-ಹಳ್ಳಿಗೂ ತಲುಪುತ್ತಿದೆ.
ಇದೀಗ ಹೋರಾಟದ ಅಂಗವಾಗಿ ‘ಪಿಂಡ ಪ್ರದಾನ’ ಮಾಡಲು ಮುಂದಾದಾಗ ಪೊಲೀಸರು ತಡೆಯೊಡ್ಡಿದರು. ಹೀಗಾಗಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಕ್ರೋಶ ಹೊರಹಾಕುತ್ತಾ, ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಪೊಲೀಸರು ಪಿಂಡ ಪ್ರದಾನಕ್ಕೆ ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಸಚಿವರು ಮತ್ತು ಜಿಲ್ಲೆಯ ಎಲ್ಲ ಶಾಸಕರಿಗೆ ಧಿಕ್ಕಾರವಿದೆ. ಕಾಟಾಚಾರಕ್ಕೆ ಧರಣಿ ಸ್ಥಳಕ್ಕೆ ಭೇಟಿ ಕೊಟ್ಟು ಹೋದ ಜನಪ್ರತಿನಿಧಿಗಳು ಈವರೆಗೂ ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹೇರಿಲ್ಲ. ಬದಲಾಗಿ ಹೋರಾಟಗಾರರ ನಿಯೋಗ ಕರೆದೊಯ್ದು ಬೆಂಗಳೂರಿನಲ್ಲಿ ಅವಮಾನಿಸಿದ್ದಾರೆಂದು ಹರಿಹಾಯ್ದರು.
ರಾಜ್ಯ ಸರ್ಕಾರ ಪೊಲೀಸ್ ಬಲವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸಿದೆ. ಇಂಥ ದಬ್ಬಾಳಿಕೆಗೆ ಎಂದಿಗೂ ಹೆದರುವುದಿಲ್ಲ ಎಂದರು.
ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬಂದರೆ ತಮ್ಮ ಖಾಸಗಿ ವೈದ್ಯಕೀಯ ಕಾಲೇಜಿನ ವ್ಯಾಪಾರಕ್ಕೆ ಧಕ್ಕೆ ಬರುತ್ತದೆ ಎಂಬ ಆತಂಕದಿಂದಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ಹೋರಾಟವನ್ನು ಹತ್ತಿಕ್ಕಲು ಪೊಲೀಸ್‌ರನ್ನು ಬಳಸಿಕೊಳ್ಳುತ್ತಿದ್ದಾರೆ. ಹೋರಾಟಗಾರರ ಮೇಲಿನ ಈ ಒತ್ತಡ, ದಬ್ಬಾಳಿಕೆ ತಂತ್ರ ಸಹಿಸಲ್ಲ ಎಂದರು.
ಹಿರಿಯ ಹೋರಾಟಗಾರ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ವಿಜಯಪುರ ಜಿಲ್ಲೆಯ ಜನತೆ, ಜಿಲ್ಲೆಯ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜು ಕೇಳುತ್ತಿರುವುದು ಯಾವುದೇ ವೈಯಕ್ತಿಕ ಅಥವಾ ರಾಜಕೀಯ ಲಾಭಕ್ಕಾಗಿ ಅಲ್ಲ; ಬಡ ಜನರಿಗೆ ಗುಣಮಟ್ಟದ ಆರೋಗ್ಯ ಶಿಕ್ಷಣ ಮತ್ತು ಚಿಕಿತ್ಸೆ ದೊರೆಯಬೇಕು ಎಂಬ ಏಕೈಕ ಉದ್ದೇಶಕ್ಕಾಗಿ. ಆದರೆ ಈ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲಾಗದೆ ಇದೀಗ ಹೋರಾಟವನ್ನೂ ಹತ್ತಿಕ್ಕುವ ಪ್ರಯತ್ನ ನಡೆಸಿದ್ದು ಖಂಡನೀಯ ಎಂದರು.
ಮುಖಂಡರಾದ ಸಿದ್ಧಲಿಂಗ ಬಾಗೇವಾಡಿ, ಅಕ್ರಂ ಮಾಶ್ಯಾಳಕರ, ಬೋಗೇಶ ಸೋಲಾಪುರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net