ಪೊಲೀಸ್ ಇಲಾಖೆಯಿಂದ ಪ್ರಾಪರ್ಟಿ ರಿಕವರಿ, ಸಚಿವ ಎಂ.ಬಿ. ಪಾಟೀಲರಿಂದ ಸ್ವತ್ತು ಹಸ್ತಾಂತರ

ಕವಾಯತು ಮೈದಾನದಲ್ಲಿ ಕಾರ್ಯಕ್ರಮ* ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತ
ವಿಜಯಪುರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ‘ಪ್ರಾಪರ್ಟಿ ರಿಟರ್ನ್’ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ ಅವರು ಸಾರ್ವಜನಿಕರಿಗೆ ಸ್ವತ್ತು ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ, ಎಸ್‌ಪಿ ಲಕ್ಷ್ಮಣ ನಿಂಬರಗಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ ಮತ್ತಿತರರಿದ್ದಾರೆ.
ವಿಜಯಪುರ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ‘ಪ್ರಾಪರ್ಟಿ ರಿಟರ್ನ್’ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ.ಪಾಟೀಲ ಅವರು ಸಾರ್ವಜನಿಕರಿಗೆ ಸ್ವತ್ತು ಹಸ್ತಾಂತರಿಸಿದರು. ಜಿಲ್ಲಾಧಿಕಾರಿ ಡಾ.ಆನಂದ ಕೆ, ಎಸ್‌ಪಿ ಲಕ್ಷ್ಮಣ ನಿಂಬರಗಿ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ ಮತ್ತಿತರರಿದ್ದಾರೆ.
Published on: 

ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ವಂಚನೆ ಸೇರಿ ಮನೆ, ವಾಹನಗಳ್ಳತನ, ಸೈಬರ್ ವಂಚನೆ, ಸರಗಳ್ಳತನ ಹೀಗೆ ಮತ್ತಿತರ 115ಕ್ಕೂ ಅಧಿಕ ಪ್ರಕರಣಗಳಲ್ಲಿ ಪೊಲೀಸರು ವಶಕ್ಕೆ ಪಡೆದ ಕೋಟ್ಯಂತರ ರೂಪಾಯಿ ಮೌಲ್ಯದ ಸ್ವತ್ತನ್ನು ಸಚಿವ ಎಂ.ಬಿ. ಪಾಟೀಲರು ಸೋಮವಾರ ಸಂಬಂಧಿಸಿದವರಿಗೆ ಹಸ್ತಾಂತರಿಸಿದರು.

ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಸೋಮವಾರ ನಡೆದ ‘ಪ್ರಾಪರ್ಟಿ ರಿಟರ್ನ್’ ಕಾರ್ಯಕ್ರಮದಲ್ಲಿ ಸಂಬಂಧಿಸಿದವರಿಗೆ ಸ್ವತ್ತು ಹಸ್ತಾಂತರಿಸಿದ ಸಚಿವರು, ಕಳ್ಳತನ, ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಗೃತಿ ವಹಿಸುವಂತೆ ಸಾರ್ವಜನಿಕರಿಗೆ ತಿಳಿವಳಿಕೆ ಹೇಳಿದರು.

ಅಲ್ಲದೇ, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮನೆಕಟ್ಟಿಕೊಳ್ಳುವವರು ಹತ್ತಿಪ್ಪತ್ತು ಸಾವಿರ ರೂಪಾಯಿ ಖರ್ಚು ಮಾಡಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸಾಧ್ಯವಿಲ್ಲವೇ? ದಯವಿಟ್ಟು ಮನೆಗಳಿಗೆ ಸಿಸಿಟಿವಿ ಅಳವಡಿಸಿ ಮತ್ತು ಸೈಬರ್ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಗೃತಿ ವಹಿಸಬೇಕೆಂದು ಮನವರಿಕೆ ಮಾಡಿದರು.

ಹೆಮ್ಮೆ ವ್ಯಕ್ತಪಡಿಸಿದ ಮಾಲೀಕರು

ಕಳೆದು ಹೋದ ಸ್ವತ್ತು ಪಡೆದ ಮೂಲ ಮಾಲೀಕರು ಪೊಲೀಸರ ಕಾರ್ಯವೈಖರಿಗೆ ಸಂತಸ ಮತ್ತು ಹೆಮ್ಮೆ ವ್ಯಕ್ತಪಡಿಸಿದರು. ಗೌರವಪೂರ್ವಕವಾಗಿ ನಮಿಸಿದರು.

ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸ ಮತ್ತು ವಂಚನೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ಮರಳಿ ಒದಗಿಸಿದ ಪೊಲೀಸರ ಬಗ್ಗೆ ಕಾರ್ಖಾನೆ ಮುಖ್ಯಸ್ಥರು ಹೆಮ್ಮೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡುತ್ತಾ, ವಂಚನೆಗೆ ಸಂಬಂಧಿಸಿದಂತೆ ಮಾಹಿತಿ ಗೊತ್ತಾಗುತ್ತಿದ್ದಂತೆ ಆಶಾ ಪಾಟೀಲ ಮೇಡಂ ಅವರನ್ನು ಸಂಪರ್ಕಿಸಿದ್ದೆ. ಬಳಿಕ ಸಚಿವ ಎಂ.ಬಿ. ಪಾಟೀಲರಿಗೆ ವಿಷಯ ಗೊತ್ತಾಗಿ ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರ ಮೂಲಕ ಡಿವೈಎಸ್‌ಪಿ ಟಿ.ಎಸ್. ಸುಲ್ಫಿ, ಸಿಪಿಐ ರಮೇಶ ಅವಜಿ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿ ಸ್ವತ್ತು ವಶಪಡಿಸಿಕೊಂಡಿದೆ. ನಿಜಕ್ಕೂ ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮೇಲಿನ ಗೌರವ ಹೆಚ್ಚಿಸಿದೆ ಎಂದರು. ಮಾತ್ರವಲ್ಲ ಕಾರ್ಖಾನೆ ವತಿಯಿಂದ ತನಿಖಾ ತಂಡಕ್ಕೆ ಸನ್ಮಾನಿಸಿ ಗೌರವಿಸಿದರು.

ಎಸ್‌ಪಿ ಲಕ್ಷ್ಮಣ ನಿಂಬರಗಿ ಅವರು ಪ್ರಕರಣಗಳ ವಿವರ, ವಶಪಡಿಸಿಕೊಂಡ ಸ್ವತ್ತಿನ ಮಾಹಿತಿ ನೀಡಿದರು. ತನಿಖೆಯಲ್ಲಿ ಪಾಲ್ಗೊಂಡ ಸಿಬ್ಬಂದಿಗೆ ಸಚಿವರು ಗೌರವಿಸಿದರು.

ಜಿಲ್ಲಾಧಿಕಾರಿ ಡಾ.ಆನಂದ ಕೆ, ವಿಡಿಎ ಅಧ್ಯಕ್ಷ ಗಂಗಾಧರ ಸಂಬಣ್ಣಿ ಮತ್ತಿತರರಿದ್ದರು.